ಗುರುವಾರ, ಡಿಸೆಂಬರ್ 16, 2010

ಬಾಬಾ ಬುಡಾನ್‌ಗಿರಿ: ನ್ಯಾಯಾಲಯದ ಆದೇಶ ಉಲ್ಲಂಘಿಸಿದರೆ ಕಾನೂನು ಸಮರ: ಕೆ.ಎಲ್.ಆಶೋಕ್




ಚಿಕ್ಕಮಗಳೂರು, ಡಿ.16: ಬಾಬಾ ಬುಡಾನ್‌ಗಿರಿ ಗುಹೆಯ ಬಳಿ ಯಥಾ ಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟು ಮಧ್ಯಂತರ ಆದೇಶ ನೀಡಿದೆ. ಆದುದರಿಂದ ಸಂಘ ಪರಿವಾರ ನಿಯೋಜಿತ ದತ್ತ ಜಯಂತಿ ಸಮಯದಲ್ಲಿ ಈ ಆದೇಶವನ್ನು ಉಲ್ಲಂಘಿಸುವುದು ಕಂಡುಬಂದರೆ ಕಾನೂನು ಸಮರ ನಡೆಸಬೇಕಾಗುತ್ತದೆ. ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಬಾಬಾ ಬುಡಾನ್‌ಗಿರಿಯಲ್ಲಿ ಕಾನೂನು ಉಲ್ಲಂಘನೆಯಾಗುವುದನ್ನು ತಡೆಯಬೇಕು ಎಂದು ಆಗ್ರಹಿಸಿ ಕೋಸೌವೇಯ ನೇತೃತ್ವದಲ್ಲಿ ಇತರ ಪ್ರಗತಿಪರ ಸಂಘಟನೆಗಳು ಇಂದು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಧರಣಿಯಲ್ಲಿ ಅವರು ಮಾತನಾಡುತ್ತಿದ್ದರು.

ವಿವಾದಿತ ಗುಹೆ ಬಳಿ 1975ಕ್ಕೂ ಹಿಂದೆ ಇದ್ದ ಸ್ಥಿತಿಯನ್ನು ಕಾಯ್ದುಕೊಂಡು ಬರುವಂತೆ ಹಾಗೂ 1989 ರಲ್ಲಿ ಧಾರ್ಮಿಕ ದತ್ತಿ ಆಯುಕ್ತರು ನೀಡಿರುವ ಮಾರ್ಗಸೂಚಿಗಳನ್ನು ಪರಿಪಾಲಿಸುವಂತೆ ಈಗಾಗಲೇ ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯ ಗಳು ಆದೇಶ ನೀಡಿವೆ. ಆದರೂ, ಡಿ.18, 19, 20 ರಂದು ನಡೆಯುವ ದತ್ತ ಜಯಂತಿ ಸಮಯದಲ್ಲಿ ಹೋಮ- ಹವನ ನಡೆಸುವುದಾಗಿ ಸ್ಥಳೀಯ ಶಾಸಕರು ಘೋಷಿಸಿದ್ದಾರೆ ಎಂದ ಅವರು, ಇದೀಗ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿರುವು ದರಿಂದ ಜಿಲ್ಲಾಡಳಿತ ಸಂಘ ಪರಿವಾರದ ಕುರಿತು ಮೃದು ಧೋರಣೆ ಅನುಸರಿಸುವ ಭೀತಿಯಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿವಾದಿತ ಗುಹೆಯ ಬಳಿ ಹೋಮ, ಹವನ ಮತ್ತಿತರ ಹೊಸ ಆಚರಣೆಗಳಿಗೆ ಹಾಗೂ ಈ ಸಂದರ್ಭ ನಗರದಲ್ಲಿ ನಡೆಸುವ ಮೆರವಣಿಗೆ ವೇಳೆ ಪ್ರಚೋದ ನಕಾರಿ ಭಾಷಣಕ್ಕೆ ಅವಕಾಶ ನೀಡಬಾರದು ಎಂದು ಅಶೋಕ್ ಒತ್ತಾ ಯಿಸಿದರು.
ಬಾಬಾಬುಡಾನ್‌ಗಿರಿಯಲ್ಲಿ ಮುಸ್ಲಿಮರಿಗೆ ನಮಾಝಿಗೆ ಅವಕಾಶ ನೀಡಬೇಕು. ಗೋರಿಗಳ ಮೇಲೆ ಹಸಿರು ಬಟ್ಟೆಗಳನ್ನು ಹಾಕಬೇಕು. ಗಂಜಿಖಾನ ವನ್ನು ತೆರೆಯಬೇಕು ಹಾಗೂ ಹೊಸ ನಾಮ ಫಲಕಗಳನ್ನು ಅಳಿಸಿ ಹಳೆಯ ನಾಮ ಫಲಕವನ್ನು ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅಶೋಕ್, ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಳಿಕ ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಧರಣಿಯ ನೇತೃತ್ವವನ್ನು ವೇದಿಕೆಯ ರಾಜ್ಯ ಸಹ ಕಾರ್ಯದರ್ಶಿ ಗೌಸ್ ಮೊಹೀದ್ದಿನ್, ಕೆ.ಎಚ್.ಮುಸ್ಲಿಯಾರ್, ಪಿ.ಎಫ್‌ಐನ ಅಲ್ತಾಫ್, ಜಂಸೀರ್, ಫೈರೋಝ್, ರಫೀಕ್, ಅಮೀರ್ ಆಲ್ದೂರು ಮತ್ತಿತರರು ವಹಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ