ಗುರುವಾರ, ಡಿಸೆಂಬರ್ 16, 2010

ಮೋಡಸ ಸ್ಫೋಟದಲ್ಲೂ ಅಸೀಮಾನಂದ?



ಹೊಸದಿಲ್ಲಿ, ಡಿ.16: ಅಜ್ಮೀರ್, ಮಾಲೆಗಾಂವ್ ಹಾಗೂ ಹೈದರಾಬಾದ್ ಸ್ಫೋಟ ಪ್ರಕರಣಗಳ ಆರೋಪಿ ಸ್ವಾಮೀ ಅಸೀಮಾನಂದ, ಗುಜರಾತ್‌ನ ಸಬರಕಂಠ ಜಿಲ್ಲೆಯ ಮೋಡಸದಲ್ಲಿ ಸಂಭವಿಸಿದ ಸ್ಫೋಟದಲ್ಲೂ ಕೈವಾಡ ಹೊಂದಿರುವ ಸಾಧ್ಯತೆಯಿದೆಯೆಂದು ತಿಳಿದು ಬಂದಿದೆ.

ಮೂರೂ ಸ್ಫೋಟ ಪ್ರಕರಣಗಳ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖೆ ಸಂಸ್ಥೆಗೆ (ಎನ್‌ಐಎ) ಅಸೀಮಾನಂದ ಮೋಡಸ ಸ್ಫೋಟದಲ್ಲಿ ಸಂಬಂಧ ಹೊಂದಿದ್ದಾನೆಂಬ ಬಗ್ಗೆ ಸೂಚನೆಗಳು ಲಭಿಸಿವೆ.

ಪ್ರಕೃತ ಬಂಧನದಲ್ಲಿರುವ ಅಸೀಮಾನಂದನ ವಿಚಾರಣೆಯ ವೇಳೆ ಅದಕ್ಕೆ ಈ ಸುಳಿವು ದೊರೆತಿದ್ದು, ಸ್ಫೋಟಗಳಿಗೆ ಮೊದಲು ಆತ ಕಾರ್ಯಾಚರಿಸುತ್ತಿದ್ದ ಡಾಂಗ್ಸ್‌ಗೆ ತನಿಖೆಗಾಗಿ ಸ್ವಾಮಿಯನ್ನು ತರಲಾಗಿದ್ದು , ಎನ್‌ಐಎಯ ಮೂವತ್ತು ಅಧಿಕಾರಿಗಳ ತಂಡ ಜಿಲ್ಲೆಯಲ್ಲಿ ತನಿಖೆ ನಡೆಸುತ್ತಿದೆ.

ಅಸೀಮಾನಂದ ಮೋಡಸ ಸ್ಫೋಟದಲ್ಲೂ ಪಾತ್ರ ಹೊಂದಿರುವ ಸಾಧ್ಯತೆಯಿದೆ. ಎನ್‌ಐಎ ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದೆ ಎಂದು ನಿಕಟವರ್ತಿ ಮೂಲಗಳು ತಿಳಿಸಿವೆ.

ಅಸೀಮಾನಂದ ಹಾಗೂ ಆತನ ಸಹವರ್ತಿಗಳು ಮೋಡಸ ಸ್ಫೋಟಕ್ಕೆ ಸಂಬಂಧ ಹೊಂದಿರಬಹುದೆಂದು ಇದುವರೆಗೆ ಶಂಕಿತಸಲಾಗಿತ್ತು. ಆದರೆ, ಅಸೀಮಾನಂದನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗೆ ಆತ ಮೋಡಸ ಸ್ಫೋಟದ ಸಂಚಿನ ಕುರಿತು ಬಾಯಿ ಬಿಟ್ಟಿದ್ದಾನೆಂದು ಅವು ಹೇಳಿವೆ.

ತನಿಖೆಯ ಆರಂಭಿಕ ಹಂತದಲ್ಲಿ ಅದು ಕೇಸರಿ ಉಗ್ರ ಸಂಘಟನೆಯತ್ತ ಸಾಗಿದಾಗ ಗುಜರಾತ್ ಪೊಲೀಸರು ತನಿಖೆಯನ್ನು ನಿಧಾನ ಗೊಳಿಸಿದರು. ಆದರೆ, ಎರಡು ವರ್ಷಗಳ ಬಳಿಕ, ಈಗ ಎನ್‌ಐಎ ತನಿಖೆಯನ್ನು ವಹಿಸಿಕೊಂಡ ಬಳಿಕ ಪ್ರಕರಣ ಭೇದಿಸಬಹುದೆಂಬ ವಿಶ್ವಾಸ ಮೂಡಿದೆಯೆಂದು ಮೂಲಗಳು ತಿಳಿಸಿವೆ.

ಮೋಡಸ ಸ್ಫೋಟದ ತಂತ್ರವು ಅಜ್ಮೀರ್, ಮಾಲೆಗಾಂವ್ ಹಾಗೂ ಹೈದರಾಬಾದ್ ಸ್ಫೋಟಗಳಂತೆಯೇ ಇತ್ತು. ಸಬರಕಂಠ ಪೊಲೀಸರಿಂದ ತನಿಖೆಯ ಹೊಣೆ ವಹಿಸಿಕೊಂಡ ಬಳಿಕ ಎನ್‌ಐಎ ಇಬ್ಬರು ಯುವಕರ ತಲಾಶೆಯಲ್ಲಿ ವಡೋದರಾದತ್ತ ಸಾಗಿದೆಯೆನ್ನಲಾಗಿದೆ. ಬಾಂಬ್ ಇರಿಸಲಾಗಿದ್ದ ಮೋಟಾರ್ ಬೈಕನ್ನು ಸೂರತ್‌ನಿಂದ ಕದ್ದು, ವಡೋದರಾಕ್ಕೆ ತರಲಾಗಿತ್ತೆಂದು ಹೇಳಲಾಗಿದೆ.

2008ರ ಸೆ.29ರಂದು ಆ ಯುವಕರು ಮೋಟಾರ್ ಬೈಕನ್ನು ಸೂಖಾ ಬಝಾರ್ ಮಸೀದಿಯ ಹೊರಗೆ ನಿಲ್ಲಿಸಿದ್ದರೆಂದು ಆರೋಪಿಸಲಾಗಿದ್ದು, ಸ್ಫೋಟದಲ್ಲಿ 15ರ ಹರೆಯದ ಬಾಲಕನೊಬ್ಬ ಬಲಿಯಾಗಿ, 10 ಮಂದಿ ಗಾಯಗೊಂಡಿದ್ದರು.

ಸ್ಫೋಟದ ಬಳಿಕ ಸಬರಕಂಠ ಪೊಲೀಸರು ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಹಾಗೂ ಆಕೆಯ ಸಹಚರರ ವಿಚಾರಣೆಗೆ ಯತ್ನಿಸಿದ್ದರು. ಆದರೆ, ತನಿಖೆ ಮುಂದುವರಿಸುವುದು ಅವರಿಂದ ಸಾಧ್ಯವಾಗಿರಲಿಲ್ಲ. ಪೊಲೀಸರು ಸುಮಾರು 500ಕ್ಕೂ ಹೆಚ್ಚು ಮಂದಿಯ ಹೇಳಿಕೆ ದಾಖಲಿಸಿಕೊಂಡಿದ್ದರು.

ಇವರಲ್ಲಿ 200ಕ್ಕೂ ಹೆಚ್ಚಿನವರು ವಿಎಚ್‌ಪಿ, ಬಜರಂಗದಳ ಹಾಗೂ ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು. ಇಸ್ಲಾಮಿಕ್ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ಸುಮಾರು 300ರಷ್ಟು ಮುಸ್ಲಿಮರ ವಿಚಾರಣೆಯನ್ನೂ ನಡೆಸಲಾಗಿತ್ತೆಂದು ಮೂಲಗಳು ತಿಳಿಸಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ