ಬುಧವಾರ, ಡಿಸೆಂಬರ್ 01, 2010

ಬಂಟ್ವಾಳ : ಘನ ತ್ಯಾಜ್ಯ ಘಟಕಕ್ಕೆ ವಿರೋಧ ವ್ಯಕ್ತಪಡಿಸಿ ಎಸ್.ಡಿ.ಪಿ.ಐ ಪ್ರತಿಭಟನೆ


ಬಂಟ್ವಾಳ: ಸಜೀಪ ನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ನಿರ್ಮಿಸಲಿರುವ ಪುರಸಭಾ ವ್ಯಾಪ್ತಿಯ ಘನ ತ್ಯಾಜ್ಯ ಘಟಕಕ್ಕೆ ವಿರೋಧ ವ್ಯಕ್ತಪಡಿಸಿದ ನಾಗರಿಕರು, ಎಸ್.ಡಿ.ಪಿ.ಐ ನೇತೃತ್ವದಲ್ಲಿ ನಿನ್ನೆ ಪುರಸಭಾ ಕಾರ್ಯಾಲಯದ ವಠಾರದಲ್ಲಿ ಪ್ರತಿಭಟನೆ ಸಭೆ ನಡೆಸಿದರು. ನಗರದ ಕಸವನ್ನು ಕಂಚಿನಡ್ಕಪದವಿನಲ್ಲಿ ಹಾಕಿದರೆ, ಅದೇ ಕಸವನ್ನು ನಿಮ್ಮ ಕಚೇರಿ ಮುಂದೆ ಎಸೆಯುತ್ತೇವೆ. ನಮ್ಮ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸದಿದ್ದರೆ ಕಚೇರಿಗೆ ಬೀಗ ಜಡಿದು, ಮುತ್ತಿಗೆ ಹಾಕುತ್ತೇವೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ ಎಸ್.ಡಿ.ಪಿ.ಐ.ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ನಾಸೀರ್ ಅವರು ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಸವಾಲೆಸೆದರು. ಸಭೆಯಲ್ಲಿ ಭಾಗವಹಿಸಿದ ಸುಮಾರು ನೂರಕ್ಕೂ ಅಧಿಕ ನಾಗರಿಕರು, ಸಂಘಟಕರು ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಪುರಸಭಾಡಳಿತದ ಧೋರಣೆಯನ್ನು ಖಂಡಿಸಿದರು.

ಜನ ವಸತಿ ಪ್ರದೇಶದಲ್ಲಿ ತ್ಯಾಜ್ಯ ಘಟಕವನ್ನು ನಿರ್ಮಿಸಲು ಹೊರಟಿರುವ ಪುರಸಭೆಯ ನಿರ್ಧಾರಕ್ಕೆ ಜನ ಈ ಹಿಂದೆಯೇ ವಿರೋಧ ಸೂಚಿಸಿದ್ದರು. ಜಿಲ್ಲಾಡಳಿತದ ಮುಂದೆ ತಮ್ಮ ಅಳಲನ್ನು ತೋಡಿದ್ದರು. ಆದರೆ ಜಿಲ್ಲಾಡಳಿತ ಜನರ ನೈಜ ಸಮಸ್ಯೆಗೆ ಕಿವಿ ಕೊಡದೇ ಅವರ ಮನೆಗಳನ್ನು ಕೆಡವಿ ಕಾಮಗಾರಿ ರೂಪಿಸಿ ಜನರ ಬದುಕಿನ ಮೇಲೆ ಚೆಲ್ಲಾಟವಾಡುತ್ತಿದೆ ಎಂದರು. ಎಸ್.ಡಿ .ಪಿ.ಐ. ಜಿಲ್ಲಾಧ್ಯಕ್ಷ ಹನೀಫ್ ಖಾನ್, ರಾಜ್ಯ ಸಮಿತಿ ಸದಸ್ಯ ಅನ್ವರ್ ಸಾದಾತ್, ಜಿಲ್ಲಾ ಕಾಯಾಧ್ಯಕ್ಷ ಜಲೀಲ್ ಕೃಷ್ಣಾಪುರ, ಪರಿಸರವಾದಿ ಶಿವಪ್ರಸಾದ್ ವಾಮಂಜೂರು, ಮುಖಂಡರಾದ ಶಾಹುಲ್ ಹಮೀದ್, ಅಬ್ದುಲ್ ಅಝೀಝ್ ತುಂಬೆ, ಶ್ರೀಮತಿ ಬೀಪಾತಿಮ, ಉಮೇಶ್, ಝಕರಿಯ ಹಾಜಿ, ಸಲೀಂ ಗುರುವಾಯನಕೆರೆ, ಯೂಸುಫ್ ಆಲಡ್ಕ, ಇಸ್ಮಾಯಿಲ್ ಮಲಾರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ