ಬುಧವಾರ, ಡಿಸೆಂಬರ್ 01, 2010

ವಿಕಿಲೀಕ್ಸ್ ನಿಂದ ಕಿಡಿಗೇಡಿ ಕೃತ್ಯ’:- ಪಾಕಿಸ್ತಾನ



ಇಸ್ಲಾಮಾಬಾದ್, ಡಿ.1: ಇತ್ತೀಚೆಗೆ ವಿಕಿಲೀಕ್ಸ್ ಬಿಡುಗಡೆಗೊಳಿಸಿರುವ ಅಮೆರಿಕದ ರಾಜತಾಂತ್ರಿಕ ರಹಸ್ಯ ದಾಖಲೆಗಳ ಬಗ್ಗೆ ಚರ್ಚಿಸಲು ಬುಧವಾರ ಇಸ್ಲಾಮಾಬಾದ್‌ನಲ್ಲಿ ಪಾಕ್ ಪ್ರಧಾನಿ ಯೂಸುಫ್ ರಝಾ ಗೀಲಾನಿ ಹಾಗೂ ಅಮೆರಿಕನ್ ರಾಯಭಾರಿ ಸಭೆ ನಡೆಸಿದ್ದಾರೆ.

‘‘ಇಂತಹ ಕಿಡಿಗೇಡಿ ಕೃತ್ಯಗಳೊಂದಿಗೆ ಎಂದಿಗೂ ರಾಜಿಮಾಡಿಕೊಳ್ಳಲಾಗದು ಎಂಬುದನ್ನು ಪಾಕ್ ಖಚಿತಪಡಿಸುತ್ತದೆ’’ ಎಂದು ಈ ಸಂದರ್ಭದಲ್ಲಿ ಗೀಲಾನಿ ತಿಳಿಸಿದ್ದಾರೆ. ರಹಸ್ಯ ದಾಖಲೆಗಳ ಸೋರಿಕೆಯನ್ನು ಮಾಡಿರುವ ವಿಕಿಲೀಕ್ಸ್‌ನ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಗೀಲಾನಿ,‘‘ ಈ ನಿಟ್ಟಿನಲ್ಲಿ ಈಗಾಗಲೇ ಪಾಕಿಸ್ತಾನವು ತನ್ನ ಪ್ರತಿಕ್ರಿಯೆಯನ್ನು ನೀಡಿದೆ. ಪಾಕಿಸ್ತಾನದ ರಾಷ್ಟ್ರೀಯ ಹಿತಾಸಕ್ತಿಗಳು ಇಂತಹ ಕಿಡಿಗೇಡಿ ಕೃತ್ಯಗಳೊಂದಿಗೆ ಎಂದಿಗೂ ಯಾವುದೇ ರೀತಿಯಲ್ಲೂ ರಾಜಿಮಾಡಿಕೊಳ್ಳಲಾರವು ಎಂಬುದನ್ನು ಪಾಕ್ ದೃಢಪಡಿಸುತ್ತದೆ’’ ಎಂದು ತಿಳಿಸಿದ್ದಾರೆ.

ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ಅಮೆರಿಕದ ರಾಯಭಾರಿ ಕ್ಯಾಮರನ್ ಮುಂಟರ್, ‘‘ ಇಂತಹ ದುರುದ್ದೇಶದ ಬಹಿರಂಗಪಡಿಸುವಿಕೆಯು ಪಾಕಿಸ್ತಾನ ಹಾಗೂ ಅಮೆರಿಕಗಳ ನಡುವಿನ ಬಲಿಷ್ಠ ವ್ಯೆಹಾತ್ಮಕ ಭಾಗಿದಾರಿಕೆಯ ಮೇಲೆ ಯಾವುದೇ ಪರಿಣಾಮ ಬೀರದು’’ ಎಂದು ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಉಭಯ ರಾಷ್ಟ್ರಗಳ ನಡುವೆ ಉತ್ತಮ ವಾಣಿಜ್ಯ ಸಂಬಂಧಗಳನ್ನು ಸ್ಥಾಪಿಸುವ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಬಲಪಡಿಸುವುದನ್ನು ಹಾಗೂ ಅಭಿವೃದ್ಧಿಪರ ಯೋಜನೆಗಳಿಗೆ ಮಹತ್ವ ನೀಡುವುದನ್ನು ಅಮೆರಿಕ ಬಯಸುತ್ತದೆ ಎಂದೂ ಅವರು ಹೇಳಿದ್ದಾರೆ. ಭಯೋತ್ಪಾದನೆಯ ವಿರುದ್ಧ ಸಮರ ಹಾಗೂ ಪಾಕ್‌ಗೆ ಜಾಗತಿಕ ನೆರವು ಸೇರಿದಂತೆ ಹಲವು ವಿಷಯಗಳ ಕುರಿತು ಗೀಲಾನಿ ಹಾಗೂ ಮುಂಟರ್ ಇದೇ ವೇಳೆ ಚರ್ಚೆ ನಡೆಸಿದರು.


ಇತ್ತೀಚಿನ ಪ್ರವಾಹದ ಪರಿಣಾಮ ಎದುರಾಗಿರುವ ಆರ್ಥಿಕ ಸವಾಲುಗಳು ಹಾಗೂ ಜಾಗತಿಕ ಆರ್ಥಿಕ ಹಿಂಜರಿತದ ಹೊರತಾಗಿಯೂ ಪಾಕಿಸ್ತಾನವು ಭಯೋತ್ಪಾದನೆಯ ವಿರುದ್ಧ ಹೋರಾಡುವ ದೃಢ ನಿರ್ಧಾರ ಹಾಗೂ ಬದ್ಧತೆಯನ್ನು ಹೊಂದಿದೆ ಎಂದು ಗೀಲಾನಿ ಒತ್ತಿ ಹೇಳಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ