ರಾಜ್ಯ ಅಲ್ಪಸಂಖ್ಯಾತರ ಆಯೋಗದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ, ಗೋಹತ್ಯೆ ನಿಷೇಧ ಜಾರಿಯಾಗಬೇಕು ಎಂದು ಹೇಳಿಕೆ ನೀಡಿದ್ದಾರೆ ಅನ್ವರ್ ಮಾಣಿಪ್ಪಾಡಿ. ಈ ಹೇಳಿಕೆಗೂ ಅವರು ವಹಿಸಿಕೊಂಡಿರುವ ಆಯೋಗಕ್ಕೂ ಯಾವ ಸಂಬಂಧ ಎಂದು ಅವರೇ ವಿವರಿಸಬೇಕು. ಆಂತರಿಕ ಬಿಕ್ಕಟ್ಟು ಹಾಗೂ ಭ್ರಷ್ಟಾಚಾರದ ಆರೋಪಗಳಿಂದ ತತ್ತರಿಸಿ ಹೋಗಿದೆ ರಾಜ್ಯ ಬಿಜೆಪಿ ಸರಕಾರ.
ಹೀಗಾಗಿ ಜನಪರ ಕೆಲಸ ಮಾಡಲು ಆಗದೆ ಇದೀಗ ಸರಕಾರ ಮಾಣಿಪ್ಪಾಡಿಯಂತಹ ಜೋಕರ್‌ಗಳನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸಿ ಜನರಿಗೆ ಮನರಂಜನೆ ನೀಡಲು ಹೊರಟಂತಿದೆ. ಪಕ್ಷಕ್ಕಾಗಿ ಹಲವಾರು ವರ್ಷಗಳಿಂದ ದುಡಿದವರು, ಶಾಸಕರು ಮತ್ತಿತರರಿಗೆ ನೀಡಬಹುದಾದ ಇಂತಹ ಪ್ರಮುಖ ಜವಾಬ್ದಾರಿಯನ್ನು ಪಕ್ಷದಿಂದ ಪಕ್ಷಕ್ಕೆ ಹಾರುವ ಯಾವುದೇ ಸಿದ್ಧಾಂತಗಳಿಲ್ಲದ ಕೇವಲ ಲಾಭಕ್ಕಾಗಿಯೇ ಯಾವುದೇ ಪಕ್ಷದಲ್ಲಿರುವ ಅನ್ವರ್ ಮಾಣಿಪ್ಪಾಡಿಯಂತಹ ಗೋಸುಂಬೆಗಳಿಗೆ ಬಿಜೆಪಿ ಯಾಕಾಗಿ ನೀಡುತ್ತದೆ ಎಂಬುದೇ ಅರ್ಥವಾಗುವುದಿಲ್ಲ.
ಬಹುಸಂಖ್ಯಾತ ಹಿಂದೂಗಳ ಭಾವನೆಯನ್ನು ಗೌರವಿಸುವ ನಿಟ್ಟಿನಲ್ಲಿ ಆಯೋಗ ಕೆಲಸ ಮಾಡುತ್ತದೆ ಎಂದು ಮಾಣಿಪ್ಪಾಡಿ ಹೇಳಿದ್ದಾರೆ. ಹಾಗೆಂದರೇನು? ಈ ಹಿಂದಿನ ಅಲ್ಪಸಂಖ್ಯಾತ ಆಯೋಗದವರು ಹಿಂದೂಗಳಿಗೆ ವಿರುದ್ಧವಾಗಿ ಕೆಲಸ ಮಾಡಿದ್ದರೆ? ಅಥವಾ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳನ್ನು ಇಲ್ಲಿ ಯಾರಾದರೂ ಹಿಂದೂಗಳು ವಿರೋಧಿಸುತ್ತಾರೆಯೆ? ಯಾರನ್ನು ಓಲೈಸಲು ಇಂತಹ ಅಸಂಬದ್ಧ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಮಾಣಿಪ್ಪಾಡಿ?
ಇಂತಹ ಬದ್ಧತೆಯಿಲ್ಲದ, ಜನಪರ ಕಾಳಜಿಯೂ ಇಲ್ಲದ ಕೇವಲ ಸವಕಲು ಹೇಳಿಕೆಗಳನ್ನು ನೀಡುತ್ತಾ ಅಡ್ಡಾಡುವ ಅವಕಾಶವಾದಿಗಳಿಂದ ಅಲ್ಪಸಂಖ್ಯಾತರಿಗೆ ಏನಾದರೂ ಪ್ರಯೋಜನವಾಗುತ್ತದೆಂಬ ಭ್ರಮೆ ಯಾರಿಗೂ ಇಲ್ಲ. ಹೋಗಲಿ, ಇವರನ್ನು ಇಲ್ಲಿಗೆ ತಂದು ಕೂರಿಸಿದ ಬಿಜೆಪಿಗಾದರೂ ಇವರಿಂದಾಗಿ ಅಲ್ಪಸಂಖ್ಯಾತರ ನಾಲ್ಕು ಮತ ಹೆಚ್ಚು ಬೀಳುತ್ತಾ? ಅದೂ ಇಲ್ಲ. ಮಹತ್ವದ ಆಯೋಗದ ಜವಾಬ್ದಾರಿ ಹೊತ್ತಿರುವ ಮಾಣಿಪ್ಪಾಡಿ ಸಾಧ್ಯವಾದರೆ ತಮಗೆ ನೀಡಿದ ಕೆಲಸ ಮಾಡಲಿ. ಇಲ್ಲದಿದ್ದರೆ ತೆಪ್ಪಗೆ ಜಾಗ ಖಾಲಿ ಮಾಡಿ ಅರ್ಹರಿಗೆ ಅವಕಾಶ ನೀಡಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ