ಲಕ್ನೊ, ಡಿ. 4: ಡಿಸೆಂಬರ್ 6ರಂದು ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸದ 18ನೆ ವರ್ಷಾಚರಣೆಯ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ‘‘ರಾಜ್ಯಾದ್ಯಂತದ ಎಲ್ಲ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾಡಳಿತವು ಪರಿಸ್ಥಿತಿಯ ಮೇಲೆ ತೀವ್ರ ನಿಗಾವಿರಿಸುವಂತೆ ಸೂಚಿಸಲಾಗಿದೆ’’ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಾಜ್ಯದಲ್ಲಿನ ಫೈಝಾಬಾದ್, ಲಕ್ನೊ, ವಾರಣಾಸಿ, ಅಲಿಗಢ, ಬರೇಲಿ, ಗೋರಖ್‌ಪುರ ಸಹಿತ 13 ಜಿಲ್ಲೆಗಳನ್ನು ಅತಿ ಸೂಕ್ಷ್ಮ ಜಿಲ್ಲೆಗಳೆಂದು ಪರಿಗಣಿಸಲಾಗಿದೆ.
ಭದ್ರತೆ ಮತ್ತು ಕೋಮು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಈ ಜಿಲ್ಲೆಗಳಲ್ಲಿ ಕ್ಷಿಪ್ರ ಕಾರ್ಯಾಚರಣಾ ಪಡೆ ಮತ್ತು ಪಿಎಸಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸೇವೆಗೆ ನಿಯೋಜಿಸಲಾಗಿದೆ. ರಾಜ್ಯದ ಎಲ್ಲ ರೈಲ್ವೆ ನಿಲ್ದಾಣಗಳಿಗೂ ಬಿಗಿ ಭದ್ರತೆಯ ಎಚ್ಚರಿಕೆಯನ್ನು ನೀಡಲಾಗಿದ್ದು, ಕೆಲವೊಂದು ಸೂಕ್ಷ್ಮ ನಿರ್ದೇಶನಗಳನ್ನು ನೀಡಲಾಗಿದೆ ಎಂದು ರೈಲ್ವೆ ಎಡಿಜಿ ಎಕೆ ಜೈನ್ ಹೇಳಿದ್ದಾರೆ. ಸರಕಾರಿ ರೈಲ್ವೆ ಪೊಲೀಸ್ ಮತ್ತು ರೈಲ್ವೆ ಭದ್ರತಾ ಪಡೆಯನ್ನು ಭದ್ರತಾ ಕಟ್ಟೆಚ್ಚರದಲ್ಲಿರಲು ಸೂಚಿಸಲಾಗಿದೆ.
ರೈಲಿನೊಂದಿಗೆ ಭದ್ರತೆಯಲ್ಲಿ ಸಾಗುವ ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ಅಧಿಕಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆದಲ್ಲಿ ಪರಿಸ್ಥಿತಿ ನಿಯಂತ್ರಿಸುವುದಕ್ಕಾಗಿ ಹೆಚ್ಚುವರಿ ಭದ್ರತಾ ಪಡೆಯನ್ನು ರೈಲ್ವೆ ನಿಲ್ದಾಣಗಳಲ್ಲಿ ನಿಯೋಜಿಸಲಾಗಿದೆ ಎಂದು ಎಸ್‌ಪಿ ಜಿ.ಕೆ. ಗೋಸ್ವಾಮಿ ಹೇಳಿದ್ದಾರೆ. ರೈಲ್ವೆ ನಿಲ್ದಾಣಗಳಲ್ಲಿ ಗಮನವಿರಿಸಲು ವಿಶೇಷ ಪ್ರತಿಕ್ರಿಯಾ ತಂಡವನ್ನೂ ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಲಕ್ನೊ ರೈಲ್ವೆ ನಿಲ್ದಾಣದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಡಿಸೆಂಬರ್ 5ರಂದು ಬಾಂಬ್ ನಿಷ್ಕ್ರಿಯ ದಳವು ವ್ಯಾಪಕ ಪರಿಶೀಲನೆ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.
ಲಕ್ನೊ ರೈಲ್ವೆ ನಿಲ್ದಾಣದಲ್ಲಿ 49 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಭದ್ರತಾ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಅಂತಹ ಪ್ರದೇಶಗಳಲ್ಲಿ ರವಿವಾರ ಗಸ್ತು ತಿರುಗಲಾಗುವುದು ಮತ್ತು ಪಥ ಸಂಚಲನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ