ಕಟ್ಟಾ ಬಂಧನವಾಗಲಿ
ಎಂದೋ ನೀಡಬೇಕಾದ ರಾಜೀನಾಮೆ ಯನ್ನು ಕಟ್ಟಾ ಇಂದು ನೀಡಿದ್ದಾರೆ. ಕೆಟ್ಚ ಮೇಲೆ ಕಟ್ಟಾಗೆ ಬುದ್ಧಿ ಬಂದಿದೆಯೇ ಎಂದರೆ ಅದೂ ಇಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ತನ್ನ ರಾಜೀನಾಮೆಯನ್ನು ಒಪ್ಪಿಸಿರುವ ಅವರು, ‘‘ಸರಕಾರಕ್ಕೆ ಮುಜುಗರವಾಗದಿರಲೆಂದು ನಾನು ರಾಜೀನಾಮೆ ನೀಡಿದ್ದೇನೆ’’ ಅಂದಿ ದ್ದಾರೆ. ಅವ್ಯವಹಾರ ತನ್ನ ಮೂಲಭೂತ ಹಕ್ಕು ಎಂದು ಭಾವಿಸಿರುವ ಅವರು, ಇದೀಗ ತಲೆಮರೆಸಿಕೊಂಡಿದ್ದಾರೆ.
ಪೊಲೀಸರು ತನ್ನನ್ನು ಬಂಧಿಸಬಹುದು ಎನ್ನುವ ಆತಂಕ ಅವರಿಗಿದೆ. ಆದರೆ ತಾನು ತಲೆ ಮರೆಸಿ ಕೊಂಡಿಲ್ಲ, ದೇವರ ದರ್ಶನಕ್ಕೆ ತೆರಳಿದ್ದೇನೆ ಎಂದು ಕಟ್ಟಾ ಸ್ಪಷ್ಟೀಕರಣ ನೀಡಿದ್ದಾರೆ. ಬಹುಶಃ ಅವರು ದೇವರ ದರ್ಶನಕ್ಕೆ ಕಾಶ್ಮೀರಕ್ಕೆ ತೆರಳಿರುವುದು ನಿಜವೇ ಆಗಿದ್ದರೆ, ಅಲ್ಲಿನ ವೈಷ್ಣೋದೇವಿಯೇ ತಲೆ ಮರೆಸಿಕೊಳ್ಳುವ ಸನ್ನಿವೇಶ ನಿರ್ಮಾಣವಾಗಬಹುದು.
ಯಾವಾಗ ಕೆಐಎಡಿಬಿ ಹಗರಣದಲ್ಲಿ ಕಟ್ಟಾ ಕುಟುಂಬವನ್ನು ಲೋಕಾಯುಕ್ತ ಉಲ್ಲೇಖಿಸಿತೋ, ಯಾವಾಗ ಕಟ್ಟಾ ಪುತ್ರ ಲಂಚ ನೀಡಿ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದರೋ ಆಗಲೇ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ದುರದೃಷ್ಟವಶಾತ್ ಅದು ನಡೆಯಲಿಲ್ಲ. ಬದಲಿಗೆ ‘ತಾನು ರಾಜೀನಾಮೆ ನೀಡುವ ಅಗತ್ಯವೇ ಇಲ್ಲ ಎಂಬ ಉಡಾಫೆಯ ಮಾತನ್ನಾಡಿದ್ದರು. ಈ ಮಾತಿಗೆ ಮುಖ್ಯ ಮಂತ್ರಿ ಯಡಿಯೂರಪ್ಪ ತಾಳ ಹಾಕಿದ್ದರು.
‘‘ಮಕ್ಕಳು ಮಾಡಿದ ತಪ್ಪಿಗೆ ತಂದೆ ರಾಜೀನಾಮೆ ನೀಡಬೇಕಾಗಿಲ್ಲ’’ ಎಂಬಂತಹ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದರು. ಈಗ ಕುಟುಂಬ ಮಾಡಿದ ತಪ್ಪಿನಲ್ಲಿ ಕಟ್ಟಾ ಭಾಗಿಯಾಗಿದ್ದಾರೆ ಎಂದು ಲೋಕಾಯುಕ್ತ ಆರೋಪಿಸಿದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮೊದಲ ಆರೋಪಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಈ ಮೂಲಕ ಕೆಐಎಡಿಬಿ ಹಗರಣಕ್ಕೆ ಮೊದಲ ಬಲಿ ಬಿದ್ದಂತಾಗಿದೆ. ಕಟ್ಟಾ ವಿರುದ್ಧ ಲೋಕಾಯುಕ್ತ ಹೊರಿಸಿರುವ ಆರೋಪ ವೇನೂ ಸಣ್ಣದಲ್ಲ.
ನಕಲಿ ದಾಖಲೆ ಸೃಷ್ಟಿ, ಅಕ್ರಮ ಭೂಮಿ ಮಂಜೂರು, ಲಂಚ ಸ್ವೀಕಾರ, ಸರಕಾರಕ್ಕೆ ವಂಚನೆ, ನಕಲಿ ಸಹಿ ಮೊದಲಾದ ಆರೋಪಗಳನ್ನು ಲೋಕಾಯುಕ್ತಕರು ಹೊರಿಸಿದ್ದಾರೆ. ಕಟ್ಟಾ ಕೇವಲ ಸರಕಾರಕ್ಕಷ್ಟೇ ವಂಚನೆ ಮಾಡಿಲ್ಲ. ಕೆಐಎಡಿಬಿ ಮೂಲಕ ವಂಚನೆ ಮಾಡಿರುವ ಕಟ್ಟಾ, ಈ ನಾಡಿಗೇ ದ್ರೋಹವೆಸಗಿದ್ದಾರೆ. ನಾಡಿನ ಕೈಗಾರಿಕೆ ಅಭಿವೃದ್ಧಿಯಾಗಲಿ ಎಂದು ರೈತರು ಎಕರೆಗಟ್ಟಲೆ ಭೂಮಿಯನ್ನು ತ್ಯಾಗ ಮಾಡುತ್ತಿದ್ದರೆ, ಆ ತ್ಯಾಗವನ್ನು ಅಣಕಿಸುವಂತೆ ಆ ಭೂಮಿಯನ್ನು ಮೋಸದಿಂದ ತಮಗೆ ಬೇಕಾದವರಿಗೆ ಹಂಚುವುದು ನಾಡಿಗೆಸೆಗಿದ ದ್ರೋಹವಲ್ಲದೆ ಇನ್ನೇನೂ ಅಲ್ಲ.
ಇಂತಹ ದ್ರೋಹಕ್ಕೆ ಕೇವಲ ರಾಜೀನಾಮೆ ನೀಡಿದ ರಷ್ಟೇ ಸಾಕೇ? ಒಬ್ಬ ಪಿಕ್ ಪಾಕೆಟ್ ಮಾಡಿದ ವನಿಗೆ ಕನಿಷ್ಠ ಒಂದು ವರ್ಷವಾದರೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಸಣ್ಣ ಪುಟ್ಟ ಕಳ್ಳತನ ಮಾಡಿದವರು ಹಲವು ವರ್ಷಗಳ ಕಾಲ ಜೈಲಲ್ಲಿ ಕೊಳೆಯ ಬೇಕಾಗುತ್ತದೆ. ಆದರೆ ಕೋಟಿಗಟ್ಟಲೆ ಬೆಲೆ ಬಾಳುವ ಭೂಮಿಯನ್ನು ದರೋಡೆ ಮಾಡಿದವನನ್ನು ಅರಸನೆಂದು ಗೌರವಿಸಲಾಗುತ್ತದೆ! ಇದೆಂತಹ ವಿಪರ್ಯಾಸ? ಕಟ್ಟಾ ಅವರ ಬಂಧನ ವಾಗಲೇಬೇಕು. ಬಂಧಿಸಿ ಅವರ ವಿಚಾರಣೆ ನಡೆಸಬೇಕು.
ಇಲ್ಲವಾದರೆ, ಅವರು ಅಧಿಕಾರದ ಹೊರಗಿದ್ದುಕೊಂಡೇ ಸಾಕ್ಷಗಳನ್ನು ತಿರುಚುವ ಕೆಲಸ ಮಾಡಲಿದ್ದಾರೆ. ಯಾಕೆಂದರೆ ಕಟ್ಟಾರಂಥವರು ಅಧಿಕಾರದಲ್ಲಿರದೆ ಇದ್ದರೂ, ತನ್ನ ಪ್ರಭಾವದಿಂದ ಸರಕಾರವನ್ನು ನಿಯಂತ್ರಿಸಬಲ್ಲವರು. ಅವರ ಕೈಗಳು ನಮ್ಮ ಕಾನೂನಿಗಿಂತ ನೀಳವಾಗಿವೆ. ಆ ಕೈಗಳನ್ನು ಕೋಳದಿಂದ ಬಂಧಿಸದೆ ಇದ್ದರೆ ತನಿಖೆ ಹಲವು ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ರಾಜೀನಾಮೆಯಿಂದಷ್ಟೇ ಪ್ರಕರಣ ಮುಕ್ತಾಯಗೊಳ್ಳುವುದಿಲ್ಲ.
ಲೋಕಾಯುಕ್ತವು ಹಲವು ಅಧಿಕಾರಿಗಳ ಮೇಲೆಯೂ ಇದೇ ಸಂದರ್ಭದಲ್ಲಿ ಪ್ರಕರಣ ದಾಖಲಿಸಿದೆ. ಇಟಾಸ್ಕಾದ ಎಸ್.ವಿ.ಶ್ರೀನಿವಾಸ್, ಯುನೈಟೆಡ್ ಟೆಲಿಕಾಂನ ಬಸವ ಪೂರ್ಣಯ್ಯ, ವೆಂಕಯ್ಯ, ಕರ್ನಾಟಕ ಉದ್ಯೋಗ ಮಿತ್ರ ನಿರ್ದೇಶಕ ಶಿವಾನಂದ, ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ವಿಜಯಶಂಕರ್, ವಿಶೇಷ ಭೂ ಸ್ವಾಧೀನಾಧಿಕಾರಿ ಮುನಿನಾರಾಯಣಪ್ಪ ಮತ್ತಿತರರ ವಿರುದ್ಧ ದೂರು ದಾಖಲಾಗಿದೆ.
ಆದರೆ ಇವರ ವಿರುದ್ಧ ಈವರೆಗೆ ಸರಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಲೋಕಾಯುಕ್ತದಿಂದ ಆರೋಪಿ ಎಂದು ಗುರುತಿಸಲ್ಪಟ್ಟಾಕ್ಷಣ ಕಟ್ಟಾ ರಾಜೀನಾಮೆ ನೀಡಬೇಕಾದರೆ, ಈ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲವೇ? ಮೇಲ್ನೋಟಕ್ಕೆ ರಾಜಕಾರಣಿಗಳು ಅವ್ಯವಹಾರದ ಕೇಂದ್ರ ಬಿಂದುವಾಗಿರು ತ್ತಾರಾದರೂ, ಈ ಅವ್ಯವಹಾರಗಳ ಮೂಲ ಅಧಿಕಾರಿಗಳೇ ಆಗಿರುತ್ತಾರೆ. ಯಾವ ರೀತಿ ಯಲ್ಲಿ ಅವ್ಯವಹಾರ ನಡೆಸಬಹುದು, ಹೇಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಬಹುದು ಇವನ್ನೆಲ್ಲ ರಾಜಕಾರಣಿಗಳಿಗೆ ವಿವರಿಸುವವರು, ಅದನ್ನು ಸುಲಭ ಮಾಡಿಕೊಡುವವರು ಅಧಿಕಾರಿಗಳು.
ಇವರ ಸಹಕಾರವಿಲ್ಲದೆ ಇದ್ದರೆ ರಾಜಕಾರಣಿಗಳು ಏನನ್ನೂ ಮಾಡುವ ಹಾಗಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯ. ಅದು ಉಳಿದ ಅಧಿಕಾರಿಗಳಿಗೆ ಪಾಠ ವಾಗಬೇಕು. ಆದುದರಿಂದ, ಯಾವ ಯಾವ ಅಧಿಕಾರಿಗಳ ಮೇಲೆ ದೂರು ದಾಖಲಾಗಿ ದೆಯೋ ಅವರನ್ನೆಲ್ಲ ತಕ್ಷಣ ಅಮಾನತು ಮಾಡಬೇಕು.
ಇನ್ನುಳಿದುದು ಮುಖ್ಯಮಂತ್ರಿಯ ರಾಜೀನಾಮೆ. ಲೋಕಾಯುಕ್ತ ತನಿಖೆ ನಡೆಸಿದರೆ ತಾನು ಆರೋಪಿ ಸ್ಥಾನದಲ್ಲಿ ನಿಲ್ಲುವುದು ಖಚಿತ ಎಂದು ಮನವರಿಕೆ ಯಾಗಿರುವುದರಿಂದಲೇ ಯಡಿಯೂರಪ್ಪ ನ್ಯಾಯಾಂಗ ತನಿಖೆಯನ್ನು ಮುಂದಿಟ್ಟಿದ್ದಾರೆ. ಲೋಕಾಯುಕ್ತರು ಈಗಾಗಲೇ ತಮ್ಮ ತನಿಖೆಯನ್ನು ಚುರುಕುಗೊಳಿಸಿರುವುದರಿಂದ, ನ್ಯಾಯಾಂಗ ತನಿಖೆಯ ಅಗತ್ಯವೇ ಇಲ್ಲ. ಕಟ್ಟಾ ಪ್ರಕರಣದಲ್ಲಿ ಅದು ಸಾಬೀತಾಗಿದೆ. ಹೀಗಿರುವಾಗ, ತಕ್ಷಣ ಯಡಿಯೂರಪ್ಪ ನ್ಯಾಯಾಂಗ ತನಿಖೆಯನ್ನು ಕೈ ಬಿಟ್ಟು, ಲೋಕಾಯುಕ್ತ ತನಿಖೆಗೆ ಸ್ವಾತಂತ್ರವನ್ನು ನೀಡಬೇಕು. ಈ ಮೂಲಕ ತನ್ನ ಸಾಚಾತನವನ್ನು ಸಾಬೀತು ಪಡಿಸಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ