ಮಂಗಳವಾರ, ಏಪ್ರಿಲ್ 05, 2011

ಪಾವೂರು ಹರೇಕಳ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ

ಮಂಗಳೂರು, ಎ.5: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾವೂರು ಹರೇಕಳದ ನೇತ್ರಾವತಿ ನದಿ ತೀರದಲ್ಲಿ ಕಳೆದ ಹಲವು ವರ್ಷದಿಂದ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗೆ ಜಿಲ್ಲಾಧಿಕಾರಿ, ನಗರ ಪೊಲೀಸ್ ಕಮಿಷನರ್ ನೇತೃತ್ವದ ವಿವಿಧ ಇಲಾಖೆಗಳನ್ನು ಒಳಗೊಂಡ ತಂಡ ಮಂಗಳವಾರ ಅಪರಾಹ್ನ ದಾಳಿ ನಡೆಸಿ ಎಂಟಕ್ಕೂ ಅಧಿಕ ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

 ಖಚಿತ ಮಾಹಿತಿ ಮೇರೆಗೆ ಅಪರಾಹ್ನ 1ಕ್ಕೆ ದಾಳಿ ಆರಂಭಿಸಿದ ಹಿರಿಯ ಅಧಿಕಾರಿಗಳ ತಂಡ 2 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿತು. ಬಳಿಕ ಸಂಜೆಯ ವರೆಗೆ ಕಾರ್ಯಾಚರಣೆ ಮುಂದುವರಿಯಿತು.

ಪಾವೂರು ಹರೇಕಳ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ
ಜಿಲ್ಲಾಧಿಕಾರಿ ಸುಬೋಧ್ ಯಾದವ್, ಮಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಎಂ.ರವೀಂದ್ರ, ಆರ್‌ಟಿಓ ಎನ್.ಎಂ.ಬಳವಳ್ಳಿ ಅಪರಾಹ್ನ 1ಗಂಟೆಯ ವೇಳೆಗೆ ಏಕ ಕಾಲದಲ್ಲಿ ಮಂಗಳೂರಿನಿಂದ ಹರೇಕಳ ಪಾವೂರಿಗೆ ಲಗ್ಗೆ ಇಟ್ಟರು. ಇಷ್ಟರಲ್ಲೇ ಮಾಹಿತಿ ಸೋರಿಕೆಯೂ ಆಗಿತ್ತು.

*ಸಂಯುಕ್ತ ದಾಳಿ: ಇಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಅದರ ಆಧಾರದ ಮೇಲೆ ಮೂರ್ನಾಲ್ಕು ಇಲಾಖೆಗಳು ಜಂಟಿ ಯಾಗಿ ದಾಳಿ ನಡೆಸಿದೆ. ಇದೀಗ ವಶ ಪಡಿಸಿಕೊಂಡ ಯಾವ ಲಾರಿ ಗಳಲ್ಲೂ ಜಿಪಿಎಸ್ ಅಳವಡಿಸಿಲ್ಲ. 1ಲಾರಿಗೆ ನೋಂದಣಿ ಸಂಖ್ಯೆಯೇ ಇಲ್ಲ. ಕೆಲವು ವಾಹನಗಳಲ್ಲಿ ಮಾತ್ರ ‘ಮರಳು ಸಾಗಾಟದ ಲಾರಿ’ ಎಂದು ನಮೂದಿ ಸಲಾಗಿದೆ. ಅಕ್ರಮವಾಗಿ ನಿರ್ಮಿಸಲಾಗಿ ರುವ ಜೆಟ್ಟಿಯನ್ನು ತೆರವು ಗೊಳಿಸಲಾಗು ವುದು. ಈ ದಾಳಿ ಇಲ್ಲಿಗೆ ಕೊನೆ ಗೊಳ್ಳದು. ಜಿಲ್ಲೆಯ ಎಲ್ಲೆಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತದೆಯೋ ಅಲ್ಲಿ ಕಾರ್ಯಾಚರಣೆ ಮುಂದುವರಿ ಸುತ್ತೇವೆ’ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ತಿಳಿಸಿದ್ದಾರೆ.


*ಗೂಂಡಾ ಕಾಯ್ದೆ:  ಅಕ್ರಮ ಮರಳುಗಾರಿಕೆಯ ಹಿಂದೆ ದೊಡ್ಡ ಮಾಫಿಯಾವೇ ಇದೆ. ಇದರ ಹಿಂದಿರುವ ರೂವಾರಿಗಳನ್ನು ಬಂಧಿಸಿ ಗೂಂಡಾ ಕಾಯ್ದೆ ಹೇರುವ ಬಗ್ಗೆ ಚಿಂತನೆ ನಡೆಸಲಾಗುವುದು. ಅಕ್ರಮ ಮರಳುಗಾರಿಕೆ ತಡೆಗಟ್ಟಲು ಯೋಜನೆ ರೂಪಿಸಲಾಗುವುದು ಎಂದು ಸೀಮಂತ್ ಕುಮಾರ್ ತಿಳಿಸಿದರು.


*ಶಾಸಕ ಖಾದರ್ ಆಕ್ಷೇಪ: ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದ ಕಾಯ್ದೆಯ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರು 2-3 ದಿನದೊಳಗೆ ಸಮಸ್ಯೆಯನ್ನು ಬಗೆಹರಿಸುವೆ ಎಂದಿರುವ ಮಧ್ಯೆಯೇ ಜಿಲ್ಲಾಧಿಕಾರಿ ಯಾವುದೇ ಎಚ್ಚರಿಕೆ ನೀಡದೆ ದಾಳಿ ಮಾಡಿರುವುದು ಸರಿಯಲ್ಲ. ಉಡುಪಿ, ಉತ್ತರ ಕನ್ನಡಕ್ಕೂ ಕೂಡ ಮರಳುಗಾರಿಕೆಗೆ ಸಂಬಂಧಿಸಿದ ಹೊಸ ಕಾಯ್ದೆ ಅನ್ವಯವಾಗಲಿದೆ. ಅಲ್ಲೀಗ ಮರಳಿನ ಸಮಸ್ಯೆಯಿಲ್ಲ. ಆದರೆ, ದ.ಕ.ಜಿಲ್ಲೆಯಲ್ಲಿ ಮರಳಿನ ಅಭಾವ ಸೃಷ್ಟಿಸುವಲ್ಲಿ ಅಧಿಕಾರಿಗಳು ಮುಂದೆ ಬಂದಂತಿದೆ. ಎಷ್ಟೋ ಮಂದಿ ಮನೆ, ಕಟ್ಟಡ ಕಟ್ಟಲಾಗದೆ ತೊಂದರೆಗೆ ಸಿಲುಕಿದ್ದಾರೆ. ಇದು ಸರಿಯಲ್ಲ. ಯಾರದೋ ಒತ್ತಡಕ್ಕೆ ಮಣಿದು ಏಕಾಏಕಿ ದಾಳಿ ಮಾಡಿ ಕೂಲಿ ಕಾರ್ಮಿಕರನ್ನು, ಲಾರಿ ಸಿಬ್ಬಂದಿಯನ್ನು ಬಂಧಿಸಿರುವುದು ಸಮರ್ಥನೀಯವಲ್ಲ ಎಂದು ಶಾಸಕ ಯು.ಟಿ.ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ