ಭೋಪಾಲ, ಡಿ. 15: ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಮಡಿದ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಸಾವಿಗೆ ಸಂಬಂಧಿಸಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಜಮೀಯತ್ ಉಲಮಾದ ಮಧ್ಯ ಪ್ರದೇಶ ಘಟಕ ಆಗ್ರಹಿಸಿದೆ. ಕೇಸರಿ ಭಯೋತ್ಪಾದಕರಿಂದ ಕರ್ಕರೆ ಜೀವ ಭಯ ಹೊಂದಿದ್ದರು ಎಂಬ ದಿಗ್ವಿಜಯ್ ಸಿಂಗ್ ಹೇಳಿಕೆಯ ಬಗ್ಗೆ ತನಿಖೆ ನಡೆಯಬೇಕೆಂದು ಸಂಘಟನೆಯು ಒತ್ತಾಯಿಸಿದೆ.
ಕರ್ಕರೆ ಸಾವಿನ ತನಿಖೆಯ ನಿರ್ಲಕ್ಷದ ಕುರಿತು ವ್ಯಾಪಕ ಆಕ್ರೋಶವಿದೆ ಎಂದು ಹೇಳಿಕೆಯೊಂದರಲ್ಲಿ ಜಮಿಯತ್ ಉಲಮಾದ ರಾಜ್ಯ ಅಧ್ಯಕ್ಷ ಹಾಜಿ ಮುಹಮ್ಮದ್ ಹಾರೂನ್ ತಿಳಿಸಿದ್ದಾರೆ. ದಿಗ್ವಿಜಯ್ ಸಿಂಗ್ ಓರ್ವ ಜವಾಬ್ದಾರಿಯುತ ರಾಜಕಾರಣಿ. ಈ ಹಿನ್ನೆಲೆಯಲ್ಲಿ ಕರ್ಕರೆಗೆ ಜೀವ ಭಯವಿತ್ತೆಂಬ ಕುರಿತು ತನಗೆ ಕರೆ ಮಾಡಿ ತಿಳಿಸಿದ್ದುದಾಗಿ ಅವರು ನೀಡಿರುವ ಹೇಳಿಕೆಯನ್ನು ನಿರ್ಲಕ್ಷಿಸುವಂತಿಲ್ಲ. ಇದು ಹುತಾತ್ಮರಿಗೆ ಮಾಡಿರುವ ಅಪಮಾನ. ಈ ವಿಷಯದಲ್ಲಿ ಸುಮ್ಮನೆ ನುಣುಚಿಕೊಳ್ಳುವಂತಿಲ್ಲ ಅಥವಾ ಹಗುರವಾಗಿ ಮಾತನಾಡುವಂತಿಲ್ಲ ಎಂದು ಹಾರೂನ್ ಅಭಿಪ್ರಾಯ ಪಟ್ಟಿದ್ದಾರೆ.
ಜಾತ್ಯತೀತ ನಾಯಕ ಎ.ಆರ್. ಅಂತುಳೆ ಕೂಡ ಈ ಹಿಂದೆ ಇಂತಹುದೇ ಹೇಳಿಕೆಯನ್ನು ನೀಡಿದ್ದರು. ಆದರೆ ಅವರ ಹೇಳಿಕೆಯ ಕುರಿತು ಹೆಚ್ಚು ಗಮನ ಹರಿಸಲಾಗಿಲ್ಲ ಎಂದು ಹಾರೂನ್ ಆಪಾದಿಸಿದ್ದಾರೆ. ಸಿಂಗ್‌ರ ಹೇಳಿಕೆಯು ಕರ್ಕರೆಯ ತ್ಯಾಗಕ್ಕಿಂತ ಯಾವುದೇ ಕಮ್ಮಿಯಿಲ್ಲ. ತನಿಖೆಯಿಂದ ಮಾತ್ರ ಅಧಿಕಾರಿಯ ಹತ್ಯೆಯ ಹಿಂದೆ ಯಾವ ಶಕ್ತಿಗಳು ಕಾರ್ಯಾಚರಿಸಿದ್ದವು ಎಂಬುದು ಸ್ಪಷ್ಟವಾಗಬಲ್ಲದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಮುಂಬೈ ದಾಳಿಗೆ ಎರಡು ಗಂಟೆ ಮೊದಲು ಕರೆ ಮಾಡಿದ ಕರ್ಕರೆ, ತನಗೆ ಕೇಸರಿ ಭಯೋತ್ಪಾದಕರಿಂದ ಜೀವ ಭಯವಿರುವುದಾಗಿ ತಿಳಿಸಿದ್ದುದಾಗಿ ದಿಗ್ವಿಜಯ್ ಸಿಂಗ್ ಕಳೆದ ವಾರಾಂತ್ಯ ಬಹಿರಂಗ ಪಡಿಸಿದ್ದರು.
ಈ ವಿಷಯ ಇದೀಗ ದೇಶಾದ್ಯಂತ ಬಾರೀ ಚರ್ಚೆ ಮತ್ತು ವಿವಾದವನ್ನು ಹುಟ್ಟುಹಾಕಿದೆ. ಒಂದೆಡೆ ಈ ಕುರಿತ ದೂರವಾಣಿ ಕರೆ ದಾಖಲೆಗಳು ಇಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿತ್ತು. ಆದರೆ ವಿಷಯಕ್ಕೆ ಸಂಬಂಧಿಸಿದ ತನ್ನ ಬಿಎಸ್‌ಎನ್‌ಎಲ್ ದೂರವಾಣಿ ಕರೆಗಳ ವಿವರವನ್ನು ಪಡೆದು ಬಹಿರಂಗ ಪಡಿಸುವುದಾಗಿ ದಿಗ್ವಿಜಯ್ ಸಿಂಗ್ ಈಗಾಗಲೇ ಹೇಳಿದ್ದಾರೆ. ಈ ಕುರಿತ ದಾಖಲೆಗಳನ್ನು ಒದಗಿಸುವಂತೆ ತಾನು ಕೇಂದ್ರ ಸಹಾಯಕ ಟೆಲಿಕಾಂ ಸಚಿವರಿಗೆ ಮನವಿ ಮಾಡಿರುವುದಾಗಿ ಸಿಂಗ್ ನಿನ್ನೆ ತಿಳಿಸಿದ್ದಾರೆ.
ಮುಂಬೈ ಭಯೋತ್ಪಾದಕ ದಾಳಿಗೆ ಮೊದಲು ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕೇಸರಿ ಭಯೋತ್ಪಾದನಾ ಜಾಲವನ್ನು ಬಹಿರಂಗ ಪಡಿಸಿ ದೇಶವನ್ನೇ ಬೆಚ್ಚಿ ಬೀಳಿಸಿದ್ದರು. ಆ ಮೂಲಕ ದೇಶದಲ್ಲಿ ಭಯೋತ್ಪಾದನೆ ಕುರಿತು ಇದ್ದ ಪೂರ್ವಾಗ್ರಹವೊಂದಕ್ಕೆ ತೆರೆ ಎಳೆದಿದ್ದಾರೆ ಮತ್ತು ಇನ್ನಷ್ಟು ಕೇಸರಿ ಭಯೋತ್ಪಾದಕರ ಕುರಿತು ಬಹಿರಂಗೊಳಿಸಲು ಕರ್ಕರೆ ತನಿಖೆಯ ಪೀಠಿಕೆಯೊಂದನ್ನು ಹಾಕಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಕೇಸರಿ ಭಯೋತ್ಪಾದಕ ಸಂಘಟನೆಗಳಿಗೆ ಆಕ್ರೋಶವಿತ್ತು ಎಂದು ಹೇಳಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ