ಬುಧವಾರ, ಡಿಸೆಂಬರ್ 15, 2010

ಅಜ್ಮೀರ್, ಮಕ್ಕಾ ಮಸೀದಿ, ಮಾಲೆಗಾಂವ್ ಸ್ಫೋಟದ ಪ್ರಮುಖ ರೂವಾರಿ ಸ್ವಾಮಿ ಅಸೀಮಾನಂದ: ಸಿಬಿಐ

ಅಜ್ಮೀರ್, ಮಕ್ಕಾ ಮಸೀದಿ, ಮಾಲೆಗಾಂವ್ ಸ್ಫೋಟದ ಪ್ರಮುಖ ರೂವಾರಿ ಸ್ವಾಮಿ ಅಸೀಮಾನಂದ: ಸಿಬಿಐ

ಹೈದರಾಬಾದ್, ಡಿ. 14: ನಬ ಕುಮಾರ್ ಸಿರ್ಕರ್ ಅಲಿಯಾಸ್ ಸ್ವಾಮಿ ಅಸೀಮಾನಂದನನ್ನು ಮಕ್ಕಾ ಮಸೀದಿ, ಅಜ್ಮೀರ್ ಮತ್ತು ಮಾಲೆಗಾಂವ್ ಸ್ಫೋಟದ ಪ್ರಮುಖ ರೂವಾರಿ ಎಂದು ಪರಿಗಣಿಸಿರುವುದಾಗಿ ಸಿಬಿಐ ಸೋಮವಾರ ತಿಳಿಸಿದೆ. ದೇಶಾದ್ಯಂತ ಮುಸ್ಲಿಮರ ಪ್ರಾರ್ಥನಾ ಮಂದಿರಗಳಲ್ಲಿ ಬಾಂಬ್ ಇರಿಸುವ ಬಗ್ಗೆ ತನ್ನ ಸಹಚರರಿಗೆ ಸ್ವಾಮಿ ಅಸೀಮಾನಂದ ಪ್ರಚೋದನೆ ನೀಡಿದ್ದನು ಎಂದು ಮೂಲಗಳು ತಿಳಿಸಿವೆ.
ಹೈದರಾಬಾದ್ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ 80 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಈ ಅಂಶವನ್ನು ತಿಳಿಸಲಾಗಿದೆ. 2006ರ ಮಾರ್ಚ್‌ನಲ್ಲಿ ವಾರಣಾಸಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ 10 ದಿನಗಳೊಳಗೆ ಸ್ವಾಮಿ ಅಸೀಮಾನಂದ ಸಭೆಯೊಂದನ್ನು ನಡೆಸಿದ್ದನು ಎಂದು ತನಿಖಾ ಸಂಸ್ಥೆಯು ತನ್ನ ದೋಷಾರೋಪ ಪಟ್ಟಿಯಲ್ಲಿ ಹೇಳಿದೆ. ಹಿಂದೂ ದೇವಸ್ಥಾನಗಳಲ್ಲಿ ಬಾಂಬ್ ಸ್ಫೋಟಿಸುವ ಮುಸ್ಲಿಮ್ ಮೂಲಭೂತವಾದಿಗಳ ದಾಳಿಗೆ ಪ್ರತಿಯಾಗಿ ಅಲ್ಪಸಂಖ್ಯಾತರು ಪವಿತ್ರವೆಂದು ಪರಿಗಣಿಸುವ ಸ್ಥಳಗಳಲ್ಲಿ ಸ್ಫೋಟ ನಡೆಸುವ ಕಾಲ ಕೂಡಿ ಬಂದಿದೆ ಎಂದು ಸ್ವಾಮಿ ಅಸೀಮಾನಂದ ತನ್ನ ಶಿಷ್ಯರಿಗೆ ಆ ಸಭೆಯಲ್ಲಿ ನಿರ್ದೇಶಿಸಿದ್ದನು ಎಂದು ಹೆಸರು ಹೇಳಲಿಚ್ಛಿಸದ ಸಿಬಿಐ ಅಧಿಕಾರಿಯೊಬ್ಬರು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಸ್ವಾಮಿ ಅಸೀಮಾನಂದ ಮುಸ್ಲಿಮ್ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದನು ಎಂದು ಆರೋಪಿಸಲಾಗಿದೆ. ಅಜ್ಮೀರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸ್ವಾಮಿ ಅಸೀಮಾನಂದನನ್ನು ಇತ್ತೀಚೆಗೆ ಬಂಧಿಸಲಾಗಿದೆ. ಕೇಸರಿ ಭಯೋತ್ಪಾದನೆ ಚಟುವಟಿಕೆಯಲ್ಲಿ ನಿರತರಾಗಿರುವ ಆರೋಪವನ್ನು ಹೊತ್ತಿರುವ ಅಭಿನವ್ ಭಾರತ ಮತ್ತು ಇತರ ಸಂಘಟನೆಗಳನ್ನು ಒಗ್ಗೂಡಿಸುವಲ್ಲಿ ಅಸೀಮಾನಂದ ಪ್ರಮುಖ ಪಾತ್ರ ವಹಿಸಿದ್ದನೆಂದು ಆರೋಪಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ