ಶುಕ್ರವಾರ, ಡಿಸೆಂಬರ್ 24, 2010

ಹೊಸದಿಲ್ಲಿ:ಮಕ್ಕಾ ಮಸೀದಿ, ಅಜ್ಮೀರ್ ಸ್ಫೋಟ ಪ್ರಕರಣ: ಸಿಬಿಐನಿಂದ ಆರೆಸ್ಸೆಸ್‌ ನಾಯಕ ಇಂದ್ರೇಶ್‌ ವಿಚಾರಣೆ

ಹೊಸದಿಲ್ಲಿ: 2007ರಲ್ಲಿ ಹೈದರಾಬಾದ್‌ನ ಮಕ್ಕಾ ಮಸೀದಿ ಯಲ್ಲಿ ಹಾಗೂ ಅಜ್ಮೀರ್ ದರ್ಗಾದಲ್ಲಿ ನಡೆದ ಭೀಕರ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿ, ಸಿಬಿಐ ಅಧಿಕಾರಿಗಳು ಗುರುವಾರ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್‌ರನ್ನು ವಿಚಾರಣೆಗೊಳಪಡಿಸಿದ್ದಾರೆ. ಹರಿದ್ವಾರದಲ್ಲಿ ಬಂಧಿತನಾದ ಕೇಸರಿ ಉಗ್ರವಾದದ ಪ್ರಮುಖ ಕೊಂಡಿ ಸ್ವಾಮಿ ಅಸೀಮಾನಂದನ ತೀವ್ರ ವಿಚಾ ರಣೆಯ ಬಳಿಕ ಆರೆಸ್ಸೆಸ್ ಮುಖಂಡ ನನ್ನು ಸಿಬಿಐ ಪ್ರಶ್ನಿಸಿರು ವುದು ಗಮ ನಾರ್ಹವಾಗಿದೆ. ಅಜ್ಮೀರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನ ಎಟಿಎಸ್ ಸಲ್ಲಿಸಿದ ಚಾರ್ಜ್‌ಶೀಟ್ ನಲ್ಲಿ ಇಂದ್ರೇಶ್‌ರ ಹೆಸರನ್ನು ಪ್ರಸ್ತಾಪಿಸ ಲಾಗಿದೆಯಾದರೂ, ಅವರನ್ನು ಆರೋಪಿಯೆಂದು ಪರಿಗಣಿಸ ಲಾಗಿಲ್ಲ.
ಅಜ್ಮೀರ್ ಸ್ಫೋಟದ ಸಂಚು ರೂಪಿಸಲು 2005ರ ಅಕ್ಟೋಬರ್ 31ರಂದು ಜೈಪುರದ ಗುಜರಾತ್ ಅತಿಥಿಗೃಹದಲ್ಲಿ ನಡೆದ ರಹಸ್ಯ ಸಭೆಯಲ್ಲಿ ಇಂದ್ರೇಶ್ ಕೂಡಾ ಹಾಜರಿದ್ದರೆಂದು ದೋಷಾರೋಪ ಪಟ್ಟಿಯು ತಿಳಿಸಿದೆ. ಈ ಗುಪ್ತ ಸಭೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತ ರಾದ ದೇವೇಂದರ್ ಗುಪ್ತಾ, ಲೋಕೇಶ್ ಶರ್ಮಾ, ಚಾದರ್ ಶೇಖರ್ ಲಾವೆ, ಸಂದೀಪ್ ಡಾಂಗೆ ಹಾಗೂ ರಾಮ್‌ಜಿ ಕಾಲಾಸಂಗ್ರೆ ಕೂಡಾ ಭಾಗವಹಿಸಿದ್ದರೆಂದು ದೋಷಾ ರೋಪ ಪಟ್ಟಿ ಹೇಳಿದೆ. ಇವರೆಲ್ಲರನ್ನೂ ಆರೋಪಿಗಳೆಂದು ಚಾರ್ಜ್‌ಶೀಟ್ ಹೆಸರಿಸಿದೆ.
‘‘ನೀವೆಲ್ಲಾ ಯಾವುದಾದರೂ ಧಾರ್ಮಿಕ ಸಂಘಟನೆಯನ್ನು ಸೇರಿ ಅದರಲ್ಲಿ ಕೆಲಸ ಮಾಡಲು ಪ್ರಾರಂಭಿಸಬೇಕು. ಆಗ ಯಾರಿಗೂ ನಿಮ್ಮ ಮೇಲೆ ಸಂಶಯ ಬರುವುದಿಲ್ಲ. ಹೀಗೆ ಮಾಡಿದರೆ ನಿಮಗೆ ನಿಮ್ಮ ಕೆಲಸವನ್ನು ಯಶಸ್ವಿಯಾಗಿ ಮುಗಿಸಬಹುದು ’’ ಎಂದು ಇಂದ್ರೇಶ್ ಈ ಗುಪ್ತಸಭೆಯಲ್ಲಿ ಭಾಗವಹಿಸಿದ್ದ ಕೇಸರಿ ಉಗ್ರರಿಗೆ ಹೇಳಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ. ಭಾರತೀಯ ದಂಡಸಂಹಿತೆಯ 160ನೆ ಸೆಕ್ಷನ್‌ನಡಿ ಇಂದ್ರೇಶ್ ಕುಮಾರ್‌ರನ್ನು ಪ್ರಶ್ನಿಸಲು ಸಿಬಿಐ ನೋಟಿಸ್ ಜಾರಿಗೊಳಿಸಿತ್ತು. ಈ ಸೆಕ್ಷನ್‌ನನ್ವಯ ಸಂಬಂಧಪಟ್ಟ ತನಿಖಾ ಸಂಸ್ಥೆಯು, ಪ್ರಕರಣದ ವಾಸ್ತವಾಂಶಗಳು ಹಾಗೂ ಸನ್ನಿವೇಶಗಳ ಬಗ್ಗೆ ಅರಿವಿದ್ದವನನ್ನು ತನ್ನ ಮುಂದೆ ಹಾಜರಾಗಲು ತಿಳಿಸಬಹುದಾಗಿದೆ. ಮಕ್ಕಾ ಮಸೀದಿಯಲ್ಲಿ 2007ರ ಮೇ 18ರಂದು ಶುಕ್ರವಾರ ಪ್ರಾರ್ಥನೆಯ ವೇಳೆ ನಡೆದ ಸ್ಫೋಟದಲ್ಲಿ ಕನಿಷ್ಠ 9 ಮಂದಿ ಮೃತಪಟ್ಟು, 70ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
2007ರಲ್ಲಿ ಅಜ್ಮೀರ್‌ನ ಮುಈನುದ್ದೀನ್ ಚಿಶ್ತಿ ದರ್ಗಾದ ಆವರಣದಲ್ಲಿ ನಡೆದ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದರು. ಹೈದರಾಬಾದ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಡಿ.18ರಂದು ಹೈದರಾಬಾದ್‌ನ ನ್ಯಾಯಾಲಯದಲ್ಲಿ ಸಲ್ಲಿಸಿದ 80 ಪುಟಗಳ ಚಾರ್ಜ್‌ಶೀಟ್‌ನಲ್ಲಿ ದೇವೇಂದ್ರ ಗುಪ್ತಾ ಹಾಗೂ ಲೋಕೇಶ್ ಶರ್ಮಾರನ್ನು ಆರೋಪಿಗಳೆಂದು ಗುರುತಿಸಲಾಗಿತ್ತು. ಪ್ರಸ್ತುತ ಇವರಿಬ್ಬರೂ ಹೈದರಾಬಾದ್‌ನಲ್ಲಿ ನ್ಯಾಯಾಂಗ ರಿಮಾಂಡ್‌ನಲ್ಲಿದ್ದಾರೆ. ಇಬ್ಬರು ಕೂಡಾ ಅಜ್ಮೀರ್ ಸ್ಫೋಟ ಪ್ರಕರಣದಲ್ಲೂ ಆರೋಪಿ ಗಳಾಗಿದ್ದಾರೆ.
ಗುಪ್ತ ಹಾಗೂ ಶರ್ಮಾಗೆ ಕೇಸರಿ ಸಂಘಟನೆಗಳ ಜೊತೆ ಸಂಪರ್ಕವಿತ್ತೆಂದು ಸಿಬಿಐ ಆರೋಪಿಸಿದೆ. ಪ್ರಕರಣದ ಪ್ರಧಾನ ಆರೋಪಿಗಳಾದ ಸಂದೀಪ್ ಡಾಂಗೆ ಹಾಗೂ ರಾಮ್‌ಚಂದ್ರ ಕಾಲ್‌ಸಂಗ್ರಾ ಯಾನೆ ರಾಮ್‌ಜಿ ಇನ್ನೂ ತಲೆಮರೆಸಿಕೊಂಡಿದ್ದಾರೆ. ಇನ್ನೋರ್ವ ಆರೋಪಿ ಅಸೀಮಾನಂದನನ್ನು ಸಿಬಿಐ ಪ್ರಶ್ನಿಸುತ್ತಿದೆ. ಇನ್ನೋರ್ವ ಆರೋಪಿ ಸುನೀಲ್ ಜೋಶಿಯನ್ನು ಡಿಸೆಂಬರ್ 29,2007ರಲ್ಲಿ ಮಧ್ಯಪ್ರದೇಶದ ದೇವಸ್‌ನಲ್ಲಿ ಮೂವರು ಅಪರಿಚಿತರು ಗುಂಡಿಕ್ಕಿ ಕೊಲೆ ಮಾಡಿದ್ದರು.
ಕಳೆದ ನಾಲ್ಕು ವರ್ಷಗಳಿಂದ ಆರೆಸ್ಸೆಸ್‌ನ ಕೇಂದ್ರೀಯ ಕಾರ್ಯಸಮಿತಿಯ ಸದಸ್ಯರಾಗಿರುವ ಇಂದ್ರೇಶ್, ಹೈದರಾಬಾದ್ ಸ್ಫೋಟ ಪ್ರಕರಣದಲ್ಲಿ ತನ್ನ ಯಾವುದೇ ಪಾತ್ರವಿಲ್ಲವೆಂದು ಹೇಳಿದ್ದಾರೆ ಮತ್ತು ಕಾಂಗ್ರೆಸ್‌ನ ಸಂಚಿನಿಂದಾಗಿ ಸಿಬಿಐ ತನ್ನನ್ನು ವಿಚಾರಣೆಗೊಳಪಡಿಸಿದೆಯೆಂದು ಅವರು ಆಪಾದಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ