ಶುಕ್ರವಾರ, ಡಿಸೆಂಬರ್ 24, 2010

ಬಿಜೆಪಿಯಿಂದ ನೀತಿ ಸಂಹಿತೆ ಉಲ್ಲಂಘನೆ: ದ.ಕ.ಜಿಲ್ಲಾಧಿಕಾರಿಗೆ ದೂರು

ಮಂಗಳೂರು, ಡಿ.24: ಮುಖ್ಯಮಂತ್ರಿಯವರ ನಗರಾಭಿವೃದ್ಧಿ ಸಲಹೆಗಾರ ಡಾ. ರವೀಂದ್ರ ನಿನ್ನೆ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಜಿ.ಪಂ., ತಾ.ಪಂ. ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದೇ ಅಲ್ಲದೆ, ಸರಕಾರಿ ವಾಹನದಲ್ಲಿ ಪ್ರಯಾಣಿಸಿ ಅಧಿಕಾರಿಗಳ ಸಭೆಯನ್ನು ನಡೆಸುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮಾಜಿ ಶಾಸಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗೆ ದೂರು ನೀಡಲಾಯಿತು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನೆಗೆ ಮಂಗಳೂರಿಗೆ ಗುರುವಾರ ಅಧಿಕೃತ ಭೇಟಿ ನೀಡಿದ್ದ ಡಾ. ರವೀಂದ್ರ, ಬಿಜೆಪಿ ಕಚೇರಿಯಲ್ಲಿ ಸಚಿವರಾದ ವಿ.ಎಸ್. ಆಚಾರ್ಯ ಮತ್ತು ಕೃಷ್ಣ ಪಾಲೆಮಾರ್ ಜೊತೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು ಹಾಗೂ ಬಿಜೆಪಿ ಪರ ಪ್ರಚಾರ ನಡೆಸುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಮಾತ್ರವಲ್ಲದೆ ಅವರು ಬಿಜೆಪಿ ಚುನಾವಣಾ ಅಭ್ಯರ್ಥಿಗಳ ಜೊತೆ ಮೂಡಾದ ಸರಕಾರಿ ವಾಹನವನ್ನು ಪ್ರಚಾರ ಕಾರ್ಯಕ್ಕೆ ಬಳಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಸುಬೋದ್ ಯಾದವ್‌ಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸುಬೋದ್ ಯಾದವ್, ‘ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಈ ಬಗ್ಗೆ ದೂರು ಬಂದಿದ್ದು, ನೀತಿ ಸಂಹಿತೆ ವರದಿ ತರಿಸಿಕೊಂಡು ಅದರ ಆಧಾರದಲ್ಲಿ ದೂರಿನ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಭರವಸೆ ನೀಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ