ಶುಕ್ರವಾರ, ಡಿಸೆಂಬರ್ 03, 2010

ಬಜರಂಗದಳದಿಂದ ಚಾರಿತ್ರ ವಧೆ: ವಿದ್ಯಾರ್ಥಿನಿಯರ ಪ್ರತಿಭಟನೆ

ಸಕಲೇಶಪುರ, ಡಿ. 2: ಪಟ್ಟಣದ ಬಜರಂಗದಳದ ಕಾರ್ಯಕರ್ತರು ಎಸ್‌ಸಿ, ಎಸ್‌ಟಿ ಹಾಸ್ಟೆಲ್ ವಿದ್ಯಾರ್ಥಿನಿ ನಿಲಯಕ್ಕೆ ನುಗ್ಗಿ ದಾಂಧಲೆ ನಡೆಸಿ, ಚಾರಿತ್ರ್ಯವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಲೇಜು ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು ಉಪವಿಭಾಗಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಬಜರಂಗದಳದ ಮುಖಂಡರು ಎಂದು ಹೇಳಿಕೊಂಡು ಬುಧವಾರ ಮಧ್ಯಾಹ್ನ ಯಾವುದೇ ಪೂರ್ವಾನುಮತಿ ಇಲ್ಲದೆ ಹಾಸ್ಟೆಲ್ ಒಳಗಡೆ ನುಗ್ಗಿದ ಯುವಕರು, ವಿದ್ಯಾರ್ಥಿನಿಯರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅಲ್ಲದೆ ಮೈಮಾರಿ ಜೀವಿಸುವ ಹುಡುಗಿಯರು ಎಂಬ ಅರ್ಥ ಬರುವ ಹಾಗೆ ಮಾತನಾಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು.
ತಮ್ಮನ್ನು ಪತ್ರಕರ್ತರು ಎಂದು ಹೇಳುತ್ತಿದ್ದ ಫೋಟೊ ಮತ್ತು ವಿಡಿಯೊ ಕ್ಯಾಮರಾ ಹೊಂದಿದ್ದ ಯುವಕರು ವಿದ್ಯಾರ್ಥಿನಿಯರ ಚಿತ್ರೀಕರಣ ಮಾಡಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು. ಹಾಸ್ಟೆಲಿನ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕರು, ಹುಡುಗಿಯರನ್ನು ಇನ್ನೊಂದು ಧರ್ಮದ ಯುವಕರಿಗೆ ಮಾರಾಟ ಮಾಡುತ್ತಿದ್ದೀರಿ ಎಂದು ಅಶ್ಲೀಲವಾಗಿ ಮಾತನಾಡಿದರು.
ಯುವಕರ ವರ್ತನೆಯಿಂದ ಯಾರಾದರು ಇಲ್ಲಸಲ್ಲದನ್ನು ಮಾಡಿಕೊಂಡರೆ ಇದಕ್ಕೆ ತಾಲೂಕು ಆಡಳಿತವೆ ಹೊಣೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು. ಯುವಕರು ಹಾಸ್ಟೆಲ್‌ನೂಳಗೆ ನುಗ್ಗಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್, ಯುವಕರು ನೀಡಿದ ಹೇಳಿಕೆಯನ್ನು ಮಾತ್ರ ಪಡೆಯುವ ಮೂಲಕ ವಿದ್ಯಾರ್ಥಿನಿಯರಿಗೆ ಕೆಟ್ಟ ಹೆಸರು ಬರಲು ಕಾರಣರಾಗಿದ್ದಾರೆ. ಸೌಜನ್ಯಕ್ಕೂ ವಿದ್ಯಾರ್ಥಿನಿಯರ ಹೇಳಿಕೆಯನ್ನು ಪಡೆದಿಲ್ಲ ಎಂದು ಆರೋಪಿಸಿದ ವಿದ್ಯಾರ್ಥಿನಿಯರು ನ್ಯಾಯ ಸಿಗುವವರೆಗೆ ಜಾಗಬಿಟ್ಟು ಕದಲುವುದಿಲ್ಲ ಎಂದು ಪಟ್ಟಹಿಡಿದರು.
ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಶಾಸಕ ಎಚ್.ಕೆ.ಕುಮಾರಸ್ವಾಮಿ, ನಾಳೆ ಸಂಜೆ ವಿದ್ಯಾರ್ಥಿನಿ ನಿಲಯದಲ್ಲಿ ಅಧಿಕಾರಿಗಳ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಮಹಿಳಾ ಜಾಗೃತಿ ಮಾರ್ಗದರ್ಶಿ ಅಸೋಸಿಯೇಟ್‌ನ ಅಧ್ಯಕ್ಷೆ ಕಲ್ಪನಾ ಕೀರ್ತಿ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಸ್.ಎನ್.ಮಲ್ಲಪ್ಪ, ಬಹುಜನ ನಮಾಜ ಪಕ್ಷದ ಮುಖಂಡ ಕೆ.ಬಿ.ರವಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯದರ್ಶಿ ಸಿದ್ದೀಕ್ ಆನೆಮಹಲ್, ನಾಗರಿಕ ಸಂರಕ್ಷಣಾ ಸಮಿತಿ ಘಟನೆಯನ್ನು ಖಂಡಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ