ಶುಕ್ರವಾರ, ಡಿಸೆಂಬರ್ 03, 2010

‘ಹಿಂದುಳಿದ’ವರನ್ನು ಆತ್ಮಹತ್ಯೆಗೆ ನೂಕುತ್ತಿರುವ ಸರಕಾರ

ಬೆಂಗಳೂರು, ಡಿ. 2: ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳ ಮೇಲೆ ದೌರ್ಜನ್ಯ, ವಂಚನೆ, ಅನ್ಯಾಯ ನಿರಂತರವಾಗಿ ನಡೆಯುತ್ತಿದ್ದು, ಅವರನ್ನು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ತಂದೊಡ್ಡಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.
ಯುವಜನ ಜಾಗೃತಿ ವೇದಿಕೆ ಗುರುವಾರ ಬೆಂಗಳೂರಿನ ‘ಯವನಿಕಾ’ದಲ್ಲಿ ಆಯೋಜಿಸಿದ್ದ ‘ಹಿಂದುಳಿದವರು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್, ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಶರಣರು, ಲೇಖಕಿ ವರದಾ ಶ್ರೀನಿವಾಸ್, ಎಂ.ವೆಂಕಟಸ್ವಾಮಿ, ಅಹಿಂದ ಅಧ್ಯಕ್ಷ ಕೆ.ಮುಕುಡಪ್ಪ ಉಪಸ್ಥಿತರಿದ್ದರು.
ಯುವಜನ ಜಾಗೃತಿ ವೇದಿಕೆ ಇಂದು ಯವನಿಕಾದಲ್ಲಿ ಆಯೋಜಿಸಿದ್ದ ಅನು ಪ್ರಕಾಶನ ಹೊರತಂದ ‘ಹಿಂದುಳಿದವರು’ ಕೃತಿ ಲೋಕಾ ರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
16ನೆ ಶತಮಾನದಲ್ಲಿ ಉಡುಪಿ ದೇವಸ್ಥಾನದಲ್ಲಿ ಶ್ರೀಕೃಷ್ಣನು ಹಿಂದುಳಿದ ವರ್ಗದವ ನಾದ ಕನಕದಾಸನಿಗಾಗಿ ಬೆನ್ನು ತಿರುಗಿಸಿ ದರ್ಶನ ನೀಡಿದ್ದರೂ, ಅಲ್ಲಿನ ವೈದಿಕರು ಇನ್ನೂ ಜಾಗ ಖಾಲಿ ಮಾಡದಿರುವುದು ದುರಂತ
                                   ಡಾ.ದ್ವಾರಕಾನಾಥ್
ಬಿಜೆಪಿ ಸರಕಾರ ಹಿಂದುಳಿದವರನ್ನು ನಿರ್ಲಕ್ಷಿಸಿರುವ ಜೊತೆ ಅವರ ಆಶಯಗಳನ್ನು ದಮನ ಗೊಳಿಸುವ ಕಾರ್ಯಕ್ಕೆ ಕೈಹಾಕಿದೆ. ತನ್ನ ಅವಧಿಯಲ್ಲಿ ಜಾತಿವಾರು ಸಮೀಕ್ಷೆ ಮಾಡಲು ಬಿಡಲಿಲ್ಲ.
ಹಿಂದುಳಿದ ವರ್ಗದ ಪರವಾಗಿ ಸರಿಯಾದ ಕಾರ್ಯವೆಸಗಲು ವಿವಿಧ ರೀತಿಯಲ್ಲಿ ತೊಂದರೆಯನ್ನು ನೀಡಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಮೀಸಲಾತಿ ಅನ್ಯಾಯಕ್ಕೆ ಸರಕಾರವೇ ಕಾರಣ
ತನ್ನ ಕಾಲಾವಧಿಯ ನಂತರ ಆಯೋಗಕ್ಕೆ ಅಧ್ಯಕ್ಷರ ಹಾಗೂ ಸದಸ್ಯರ ನೇಮಕ ಮಾಡಬೇಕಿತ್ತು. ಆದರೆ ಅದನ್ನು ಕೈಚೆಲ್ಲಿರುವ ಸರಕಾರ, ಈಗ ಜಿಲ್ಲಾ, ತಾಲೂಕು ಪಂಚಾಯುತ್ ಚುನಾವಣೆಯ ಮೀಸಲಾತಿಯಲ್ಲಿಯೂ ಹಿಂದುಳಿದ ವರ್ಗದವರಿಗೆ ಘೋರ ಅನ್ಯಾಯ ಮಾಡಲು ಸಂಚು ರೂಪಿಸಿದೆ. ಇದಕ್ಕೆ ಸರಕಾರವೇ ನೇರ ಹೊಣೆ ಹಾಗೂ ಜವಾಬ್ದಾರಿಯನ್ನು ಹೊರಬೇಕು ಎಂದು ದ್ವಾರಕಾನಾಥ್ ಹೇಳಿದರು.
ಜಾಗೃತಗೊಳ್ಳಬೇಕಾದ ಅನಿವಾರ್ಯತೆ
ಸರಕಾರದ ಧೋರಣೆಯ ವಿರುದ್ಧ ಹಿಂದುಳಿದ ವರ್ಗದವರು ಜಾಗೃತಿಗೊಳ್ಳಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಹಿಂದುಳಿದ ವರ್ಗದ ನಾಯಕ ರೆನಿಸಿಕೊಂಡವರು ಇಂದು ಸಂಘಪರಿವಾರದ ಕಾರ್ಯಕರ್ತರಾಗಿ ವೈದಿಕಶಾಹಿ ವ್ಯವಸ್ಥೆಗೆ ಶರಣಾಗಿದ್ದಾರೆ ಎಂದು ದ್ವಾರಕಾನಾಥ್ ಲೇವಡಿ ಮಾಡಿದರು.
ಹಿಂದುಳಿದವರ ಪರ ಯಾರೂ ಇಲ್ಲ
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಗುರು ಪೀಠದ ಪೀಠಾಧ್ಯಕ್ಷ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶರಣರು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಮುಂದುವರಿದ ಎಲ್ಲ ಜಾತಿಯ ಸ್ವಾಮೀಜಿಗಳು ತಮ್ಮ ಜಾತಿಯನ್ನು ಗಟ್ಟಿಗೊಳಿಸುವುದರಲ್ಲಿಯೇ ತೊಡಗಿದ್ದಾರೆ ಹೊರತು, ಹಿಂದುಳಿದವರ ಪರ ಯಾವುದೇ ರೀತಿಯ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂದರು.
ಹಿಂದುಳಿದ ವರ್ಗದ ಜನಾಂಗದವರಿಗೆ ಸಮರ್ಥ ನಾಯಕನ ಅಗತ್ಯವಿದೆ. ಅದಕ್ಕಾಗಿ ನಾವೆಲ್ಲ ಸಂಘಟಿ ತರಾಗಬೇಕು. ಈ ದಿಸೆಯಲ್ಲಿ ಕಾರ್ಯಕ್ರಮಗಳು ನಡೆಯಲಿ. ಅದಕ್ಕೆ ತಮ್ಮ ಬೆಂಬಲವಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್, ದಲಿತರು, ಅಲ್ಪಸಂಖ್ಯಾತರು
ಮತಬ್ಯಾಂಕುಗಳಾಗಿ ಪರಿವರ್ತನೆ ಗೊಂಡಂತೆ ಹಿಂದುಳಿದ ವರ್ಗದವರು ಕೂಡಾ ಮತ ಬ್ಯಾಂಕುಗಳಾಗಿ ಪರಿವರ್ತನೆಗೊಳ್ಳಬೇಕು. ಆಗ ಹಿಂದುಳಿದ ವರ್ಗದವರ ಕಡೆ ಸರಕಾರ ಆಧ್ಯತೆ ನೀಡಬಹುದು ಎಂದರು.
ಗಣ್ಯರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಜೆ.ಶ್ರೀನಿವಾಸನ್, ಸಮತಾ ಸೈನಿಕ ದಳದ ಅಧ್ಯಕ್ಷ ವೆಂಕಟಸ್ವಾಮಿ, ಸಾಹಿತಿ ವರದಾ ಶ್ರೀನಿವಾಸ್, ಪತ್ರಕರ್ತ ಸಮೀಉಲ್ಲಾ ಬಿ., ರಾಜ್ಯ ಅಲೆಮಾರಿ ಸಮುದಾಯಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಾಗಲಗುರು ಮೂರ್ತಿ ಹಾಗೂ ರಾಷ್ಟ್ರೀಯ ಬಹುಸಂಖ್ಯಾತ್ ಸ್ವಯಂ ಸೇವಕ ಸಂಘದ ಅಧ್ಯಕ್ಷ ಜೆ.ಕೃಷ್ಣಪ್ಪರನ್ನು ಗಣ್ಯರು ಸನ್ಮಾನಿಸಿ, ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಅಹಿಂದ ಅಧ್ಯಕ್ಷ ಮುಕುಡಪ್ಪ, ಜ್ಞಾನಭಾರತಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಾಪಕ ಡಾ.ರಾಜಪ್ಪ ದಳವಾಯಿ, ಪತ್ರಕರ್ತ ದಿನೇಶ್ ಕುಮಾರ್ ಎಸ್.ಸಿ., ಯುವಜನ ಜಾಗೃತಿ ವೇದಿಕೆಯ ಅಧ್ಯಕ್ಷ ಹಾಗೂ ಅನು ಪ್ರಕಾಶನದ ಪ್ರಕಾಶಕ ಬಿ.ಎನ್.ರಮೇಶ್ ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ