ಮಂಗಳವಾರ, ಡಿಸೆಂಬರ್ 14, 2010

ಅಮಾಯಕರ ಬಂಧನ ಖಂಡಿಸಿ ಮಂಗಳೂರಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಬೃಹತ್ ಪ್ರತಿಭಟನೆ

ಕ್ರಪೆ ವಿಶ್ವ ಕನ್ನಡಿಗ ನೂಸ್
 
ಮಂಗಳೂರು : ಪೊಲೀಸರು ದುರುದ್ದೇಶಪೂರ್ವಕವಾಗಿ ತಮ್ಮ ಸಂಘಟನೆಯ ಸದಸ್ಯರನ್ನು ಬಂಧಿಸಿ ಅವರ ವಿರುದ್ಧ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಸಂಘಟನೆಯನ್ನು ಮಟ್ಟ ಹಾಕಲು ಕೋಮುವಾದಿ ಶಕ್ತಿಗಳೊಂದಿಗೆ ಸೇರಿ ಶ್ರಮಿಸುತ್ತಿದ್ದಾರೆಂದು ಆರೋಪಿಸಿ ಸಾವಿರಾರು ಸಂಖ್ಯೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಮತ್ತು ನಾಗರೀಕರು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
 
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪಿಯುಸಿಎಲ್ ಅಧ್ಯಕ್ಷ ಪಿ.ಬಿ. ಡೇಸಾ ಸಮಾಜದಲ್ಲಿ ಅತೀ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆ ಪೋಲಿಸರಿಂದ ಆಗುತ್ತಿದೆ. ಪೊಲೀಸರು ಕೆಲ ಕೋಮುವಾದಿ ಶಕ್ತಿಗಳೊಂದಿಗೆ ಸೇರಿ ಒಂದು ನಿರ್ದಿಷ್ಟ ಸಮುದಾಯ ಮತ್ತು ಆ  ಸಮುದಾಯದ ಸಂಘಟನೆಗಳನ್ನು ಗುರಿ ಮಾಡಿ ದಾಳಿ ಮಾಡುತ್ತಿದ್ದಾರೆ. ಪೋಲೀಸರ ಈ ದೌರ್ಜನ್ಯಗಳಿಗೆ ಬೆದರದೆ ಅವರ ವಿರುದ್ಧ ಖಾಸಗಿ ದೂರು ದಾಖಲಿಸಲು ನಾಗರೀಕರು ಮುಂದಾಗಬೇಕು ಎಂದು ಹೇಳಿದರು. ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್ಪೆಕ್ಟರ್ ವೆಂಕಟೇಶ್ ಪ್ರಸನ್ನ ಕಲ್ಲಡ್ಕದ ಕೋಮುವಾದಿ ನಾಯಕೊಬ್ಬರ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿದ್ದು ನಿರಪರಾಧಿಗಳ ಮೇಲೆ ಕೇಸು ದಾಖಲಿಸಿ ಹಣಕ್ಕಾಗಿ ಮುಗ್ಧರನ್ನು ಪೀಡಿಸುತ್ತಾರೆ ಎಂದರು. ರಾಜ್ಯದಲ್ಲಿ ಕೆಲವು ನಿಷ್ಟಾವಂತ ಪೋಲಿಸರಿದ್ದು ಕೋಮುವಾದಿಗಳು ಅವರನ್ನು ಕೆಲಸ ನಿರ್ವಹಿಸದಂತೆ ಮೂಲೆಗುಂಪು ಮಾಡಿದ್ದಾರೆ ಎಂದು ಆರೋಪಿಸಿದರು. ಜಿಲ್ಲೆಯ ಪೋಲಿಸರನ್ನು ಯಾವುದೇ ಕಾರಣಕ್ಕೂ ನಂಬಬೇಡಿ , ನೌಶಾದ್ ಖಾಸಿಂಜಿಯನ್ನು ಕೊಂದ ಪೊಲೀಸರು ಪೋಲಿಸ್ ದೌರ್ಜನ್ಯದ ವಿರುದ್ಧ ಧ್ವನಿಯೆತ್ತುವವರನ್ನು ಸಹ ಕೊಲೆ ಮಾಡಬಹುದು . ಆದರೆ ಇದಾವುದಕ್ಕೂ ಅಂಜದೆ ಇವರ ದೌರ್ಜನ್ಯದ ವಿರುದ್ಧ ಹೋರಾಡಬೇಕು ಎಂದರು.
 
 
ಕಾರ್ಯಕ್ರಮದಲ್ಲಿ ಮಾತನಾಡಿದ ಪಿ.ಎಫ್.ಐ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಮೈಸೂರಿನಲ್ಲಿ ಪಿಎಫ್‌ಐ ಸಂಘಟನೆಯ ರಾಜ್ಯ ಮಟ್ಟದ ಜಿಲ್ಲಾ ಮುಖಂಡರ ಸಮಾವೇಶ ಇತ್ತು. ಈ ಸಮಾವೇಶಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಒಂಭತ್ತು ಕಾರ್ಯಕರ್ತರು  ಟ್ರವೇರಾ ಗಾಡಿಯಲ್ಲಿ ಹೊರಟಿದ್ದರು. ಇವರನ್ನು ಶನಿವಾರ ಮಧ್ಯರಾತ್ರಿ ಬಂಟ್ವಾಳ ಪೊಲೀಸರು ಬಿ.ಸಿರೋಡ್ ಕೈಕಂಬ ಬಳಿ ಬಂಟ್ವಾಳ ಪೊಲೀಸರು ಬಂಧಿಸಿ ಅವರ ಮೇಲೆ ಹತ್ಯಾ ಸಂಚಿನ ಆರೋಪ ಹೊರಿಸಿ ಕೇಸು ದಾಖಲಿಸಿದ್ದಾರೆ. ಬಂಧಿತರಲ್ಲಿ ಪೋಲಿಯೋ ಪೀಡಿತ ರಿಯಾಜ್ ಎನ್ನುವ ಯುವಕನೂ ಇದ್ದಾನೆ. ಆತನಿಗೆ ಸರಿಯಾಗಿ ನಡೆಯಲು ಆಗುತ್ತಿಲ್ಲ. ಇಂಥವನನ್ನು ಜೊತೆಯಾಗಿಸಿಕೊಂಡು ಕೊಲ್ಲಲುಯಾರಾದರೂ ಹೋಗುತ್ತಾರೆಯೇ ಎಂದು ಪ್ರಶ್ನಿಸಿದರು.  ಬಂಧಿತ ಭೂಗತ ಪಾತಕಿ ಮಾಡೂರು ಇಸುಬುನನ್ನು ಮುಂದಿಟ್ಟುಕೊಂಡು ಪೊಲೀಸರು ಆತನ ಕ್ರಿಮಿನಲ್ ಕೃತ್ಯಗಳನ್ನು ಸಂಘಟನೆಯ ಮೇಲೆ ಹೊರಿಸುವ ಯತ್ನ ಮಾಡುತ್ತಿದ್ದಾರೆ. ಒಬ್ಬ ಕ್ರಿಮಿನಲ್ ಅನ್ನು ಮುಂದಿಟ್ಟು ಕೊಂಡು ತಮ್ಮ ದುರುದ್ದೇಶ ಸಾಧನೆಗಾಗಿ ಅಮಾಯಕ ನಾಗರೀಕರನ್ನು ಬಂಧಿಸುತ್ತಿದ್ದಾರೆ. ಇದಕ್ಕೆ ಜಿಲ್ಲೆಯ ಕೆಲವು ಕೋಮುವಾದಿ ಪತ್ರಿಕೆಗಳು ಸಾಥ್ ನೀಡುತ್ತಿವೆ. ಜಿಲ್ಲೆಯ ಒಂದು ಪತ್ರಿಕೆಯಂತೂ ಇಲ್ಲ ಸಲ್ಲದ ಕಪೋಕಲ್ಪಿತ ಸುದ್ಧಿಗಳನ್ನು ಪ್ರಕಟಿಸುತ್ತಿದೆ. ಇಂತಹ ಪತ್ರಿಕೆಗಳನ್ನು ಮುಸ್ಲಿಂ ಸಮುದಾಯ ಮತ್ತು ಸೌಹಾರ್ದ ಪ್ರಿಯ ನಾಗರೀಕರು ಬಹಿಷ್ಕರಿಸಬೇಕು ಎಂದು ಹೇಳಿದರು. ಪ್ರತಿಭಟನೆಯಲ್ಲಿ ಪಿ.ಎಫ್.ಐ ಸಂಘಟನೆಯ ಹಲವು ರಾಜ್ಯ ಮತ್ತು ಜಿಲ್ಲಾ ನಾಯಕರು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ