ಶನಿವಾರ, ನವೆಂಬರ್ 27, 2010

ಪುತ್ತೂರು: ಸ್ಫೋಟಕ ತಯಾರಿಕಾ ಕೇಂದ್ರದ ವಿರುದ್ಧ ಪ್ರತಿಭಟನೆ

ಪುತ್ತೂರು, ನ.27: ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಳಮೊಗ್ರು ಗ್ರಾಮದ ಮಗಿರೆ ಎಂಬಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸ್ಫೋಟಕ ತಯಾರಿಕಾ ಕೇಂದ್ರದ ವಿರುದ್ಧ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿ ಸ್ಫೋಟಕ ತಯಾರಿಕಾ ಕೇಂದ್ರ ಆರಂಭಿಸಬಾರದು ಎಂದು ಎಚ್ಚರಿಸಿದ್ದಾರೆ.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕುಂಬ್ರ ವರ್ತಕ ಸಂಘದ ಗೌರವಾಧ್ಯಕ್ಷ ಶ್ಯಾಂ ಸುಂದರ್ ರೈ, ಅಪಾಯಕಾರಿ ಸ್ಫೋಟಕ ತಯಾರಿಕಾ ಕೇಂದ್ರವನ್ನು ಇಲ್ಲಿ ಸ್ಥಾಪಿಸುವುದು ಬೇಡ ಎಂದರು. ಸ್ಫೋಟಕ ಘಟಕ ತೆರೆಯಲು ಅನುಮತಿ ನೀಡಿದ ಕುರಿತು ಸೂಕ್ತ ತನಿಖೆಯಾಗಬೇಕು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರನ್ನು ತನಿಖೆ ಗೊಳಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಸ್ಥಳೀಯರಾದ ಬುಜಂಗ ಆಚಾರ್ಯ ಮಾತನಾಡಿ, ಹಲವಾರು ಮನೆಗಳಿರುವ ಮಗಿರೆ ಪ್ರದೇಶದ ವ್ಯಾಪ್ತಿಯಲ್ಲಿ ಅಪಾಯಕಾರಿ ಸ್ಫೋಟಕ ತಯಾರಿಕಾ ಕೇಂದ್ರವನ್ನು ತೆರೆಯಲು ಅನುಮತಿ ನೀಡುವ ಮೂಲಕ ಗ್ರಾಮ ಪಂಚಾಯತ್ ಸದಸ್ಯರು ಇಲ್ಲಿನ ಜನತೆಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು. ಸ್ಥಳೀಯ ಪ್ರಮುಖರಾದ ಬಾಬು ಮಗಿರೆ, ಆದಂ ಕುಂಞಿ ಡಿಂಬ್ರಿ, ಈಚು ಡಿಂಬ್ರಿ, ಮುಹಮ್ಮದ್ ಮಗಿರೆ, ಧರ್ಮಣ್ಣ ಮಗಿರೆ, ಫಾರೂಕ್ ಮಗಿರೆ, ಹಮೀದ್ ಬಿಗಿಲಿ ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ