ಭಾನುವಾರ, ನವೆಂಬರ್ 28, 2010

ಅಜ್ಮೀರ್ ದರ್ಗಾ ಸ್ಫೋಟ: ಸದ್ಯವೇ ಇನ್ನಷ್ಟು ಬಂಧನ ಸಾಧ್ಯತೆ

ಜೈಪುರ, ನ.27: ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದ ಸಂಬಂಧ ಇನ್ನೂ ಕೆಲವು ಬಂಧನಗಳಾಗುವ ಸಾಧ್ಯತೆಗಳಿವೆ ಹಾಗೂ ಕೆಲವು ದೊಡ್ಡ ಹೆಸರುಗಳು ಮುಂದಿನ ದಿನಗಳಲ್ಲಿ ಬಯಲಿಗೆ ಬರಲಿವೆ ಎಂದು ರಾಜಸ್ಥಾನದ ಗೃಹ ಸಚಿವ ಶಾಂತಿಕುಮಾರ್ ಧಾರಿವಾಲ್ ಸೂಚನೆ ನೀಡಿದ್ದಾರೆ. ಆದರೆ, ತನಿಖೆಯ ಮೇಲೆ ಪ್ರಭಾವ ಬೀರಲಾಗುತ್ತದೆಯೆಂಬುದನ್ನು ಅವರು ನಿರಾಕರಿಸಿದ್ದಾರೆ.
ಭಯೋತ್ಪಾದಕ ನಿಗ್ರಹ ದಳವನ್ನು ರಾಜಕೀಕರಿಸಲಾಗುತ್ತಿದೆಯೆಂಬ ಆರೋಪದ ವಿರುದ್ಧ ಪ್ರತಿಕ್ರಿಯಿಸಿದ ಧಾರಿವಾಲ್, ತನಿಖೆ ತಂಡವು ವಿಚಾರಣೆಯ ಅವಧಿಯಲ್ಲಿ ಹೊರ ಬಂದ ಸುಳಿವು ಹಾಗೂ ಮಾಹಿತಗಳನ್ನಾಧರಿಸಿಯೇ ಕೆಲಸ ಮಾಡುತ್ತಿದೆಯೆಂದು ಪ್ರತಿಪಾದಿಸಿದರು.
ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಪುರಾವೆ ಹಾಗೂ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ತನಿಖೆ ಪ್ರಭಾವಿತವಾಗುವ ಪ್ರಶ್ನೆಯೇ ಇಲ್ಲ. ತನಿಖೆಯಲ್ಲಿ ಹೆಸರಿಸಲಾಗುವ ಯಾವನೇ ವ್ಯಕ್ತಿಯೂ ಅಪರಾಧವನ್ನು ಬಹಿರಂಗವಾಗಿ ಒಪ್ಪಿಕೊಳ್ಳುವುದಿಲ್ಲ ಎಂದ ಅವರು, ರಾಜಸ್ಥಾನದಲ್ಲಿ ಕಾನೂನು -ಸುವ್ಯವಸ್ಥೆ ಪರಿಸ್ಥಿತಿ ಉತ್ತಮವಾಗಿದೆ ಎಂದರು.
ಅಜ್ಮೀರ್ ದರ್ಗಾ ಸ್ಫೋಟದ ಸಂಬಂಧ ತನ್ನ ವಿರುದ್ಧ ನೀಡಿದ್ದ ಹೇಳಿಕೆಯೊಂದರ ವಿರುದ್ಧ ಹಿರಿಯ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಕಳೆದ ವಾರ ಧಾರಿವಾಲ್‌ಗೆ ಕಾನೂನು ನೋಟಿಸೊಂದನ್ನು ಕಳುಹಿಸಿದ್ದಾರೆ.
ವಕೀಲರ ಮುಖಾಂತರ ಕಳುಹಿಸಿದ ಈ ನೋಟಿಸ್‌ನಲ್ಲಿ, ಧಾರಿವಾಲ್ ಇಂದ್ರೇಶ್ ಕುರಿತಾದ ವಾಸ್ತವಗಳನ್ನು ತಿರುಚಿದ್ದಾರೆ ಹಾಗೂ ತನಿಖೆಯ ಮೇಲೆ ಪ್ರಭಾವ ಬೀರುತ್ತಿದ್ದಾರೆಂದು ಆರೋಪಿಸಲಾಗಿದೆ.
ಪ್ರಕರಣದ ಆರೋಪಿ ಅಸೀಮಾನಂದರನ್ನು ವಶಕ್ಕೆ ತೆಗೆದುಕೊಳ್ಳುವ ಬಗ್ಗೆ ಇದೇ ವೇಳೆ, ಅಜ್ಮೀರ್‌ನಿಂದ ಎಟಿಎಸ್ ತಂಡವೊಂದು ಹೈದರಾಬಾದ್‌ಗೆ ಪ್ರಯಾಣಿಸಿದೆ. ಅಸೀಮಾನಂದರನ್ನು ಇತ್ತೀಚೆಗೆ ಸಿಬಿಐ ಬಂಧಿಸಿದೆ. ಅಸೀಮಾನಂದ ಈ ಎಲ್ಲ ಸ್ಫೋಟಗಳ ರೂವಾರಿಯಾಗಿದ್ದು, ಅಜ್ಮೀರ್ ಸ್ಫೋಟದ ಪಿತೂರಿಕಾರನೆನ್ನಲಾಗಿರುವ ಆರೆಸ್ಸೆಸ್ ಪ್ರಚಾರಕ ಸುನೀಲ್ ಜೋಶಿ ಎಂಬಾತ ಆತನ ನಿಕಟವರ್ತಿಯೆಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಅಸೀಮಾನಂದ ಹಾಗೂ ಇತರ ಕೆಲವು ಆರೋಪಿಗಳ ವಿಚಾರಣೆಯಿಂದ ಪ್ರಕರಣದಲ್ಲಿ ಪ್ರಗತಿ ಸಾಧಿಸುವ ಭರವಸೆಯನ್ನು ಎಟಿಎಸ್ ವ್ಯಕ್ತಪಡಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ