ಶುಕ್ರವಾರ, ಜನವರಿ 07, 2011

‘ಸೌದಿ ದೊರೆಯ ಶೀಘ್ರ ಮರಳುವಿಕೆ ಕಷ್ಟಸಾಧ್ಯ’

ವಾಷಿಂಗ್ಟನ್, ಜ.7: ಸೌದಿ ಅರೇಬಿಯದ ದೊರೆ ಅಬ್ದುಲ್ಲಾ ತಮ್ಮ ಸಾಮ್ರಾಜ್ಯಕ್ಕೆ ಮರಳಲು ಸಿದ್ಧರಾಗಿದ್ದಾರೆ ಎಂಬ ಹೇಳಿಕೆಯು ದೊರೆಯ ಅನಾರೋಗ್ಯಕ್ಕೆ ಸಂಬಂಧಿಸಿದ ಆತಂಕವನ್ನು ದೂರಗೊಳಿಸುವ ನಿಟ್ಟಿನದ್ದಾಗಿದೆ ಎಂದು ತಜ್ಞರೊಬ್ಬರು ಅಭಿಪ್ರಾಯಿಸಿದ್ದಾರೆ.
‘‘ಸರಕಾರಿ ಅಧಿಕಾರಿಗಳು ಸಕಾರಾತ್ಮಕ ಸಂಜ್ಞೆಗಳನ್ನು ನೀಡಲು ಯತ್ನಿಸುತ್ತಿದ್ದಾರೆ. ಭೀತಿ ಹಾಗೂ ಸಂದೇಹಗಳನ್ನು ದೂರಗೊಳಿಸಲು ಅವರು ಈ ರೀತಿ ಮಾಡುತ್ತಿದ್ದಾರೆ’’ ಎಂದು ಐಜಿಎ ನಿರ್ದೇಶಕ ಅಲಿ ಅಲ್‌ಅಹ್ಮದ್ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಹೇಳಿಕೆಯೊಂದನ್ನು ನೀಡಿರುವ ಸೌದಿ ದೊರೆ ಅಬ್ದುಲ್ಲಾರ ಪುತ್ರಿ, ತಮ್ಮ ತಂದೆಯ ಆರೋಗ್ಯವು ಸುಧಾರಿಸುತ್ತಿದೆ ಹಾಗೂ ಅವರು ಶೀಘ್ರದಲ್ಲೇ ಅಮೆರಿಕದಿಂದ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ.
‘‘ವಾಸ್ತವವೆಂದರೆ, ಜನರು ಹೇಳಿರು ವುದಕ್ಕಿಂತಲೂ ಅಧಿಕ ಸಮಯ ಸೌದಿ ದೊರೆ ಅಮೆರಿಕದಲ್ಲಿ ಇರಬೇಕಾಗುತ್ತದೆ. ಅವರ ಈ ವಯಸ್ಸಿನಲ್ಲಿ ಮಾಡಲಾಗುವ ಶಸ್ತ್ರಕ್ರಿಯೆಯ ಬಳಿಕ ಸುಧಾರಿಸಕೊಳ್ಳಲು ಯಾವುದೇ ವ್ಯಕ್ತಿಗೆ ಕನಿಷ್ಠ ಅರು ತಿಂಗಳಿನಿಂದ ಹಿಡಿದು ಒಂದು ವರ್ಷದ ಅವಧಿ ಬೇಕಾಗುತ್ತದೆ’’ ಎಂದು ಅಲ್ ಅಹ್ಮದ್ ಅಭಿಪ್ರಾಯಿಸಿದ್ದಾರೆ.
‘‘ಮೊರೊಕ್ಕೊದಲ್ಲಿ ಅವರ ಅರಮನೆಯನ್ನು ಸಿದ್ಧಗೊಳಿಸಲಾಗಿದೆ ಹಾಗೂ ಅವರ ಯೋಗಕ್ಷೇಮ ನೋಡಿಕೊಳ್ಳಲು ಓರ್ವ ಸಿಬ್ಬಂದಿಯು ಅಲ್ಲಿಗೆ ತೆರಳಲಿರುವ ವಿಚಾರ ನಮಗೆ ತಿಳಿದಿದೆ. ಆದರೆ ದೊರೆಯ ಪುತ್ರಿ ತಿಳಿಸಿರುವಂತೆ ಅವರ ಆರೋಗ್ಯವೂ ಇನ್ನೂ ಸುಧಾರಿಸಬೇಕಿದೆ’’ ಎಂದು ತಜ್ಞರು ತಿಳಿಸಿದ್ದಾರೆ.
ಸೌದಿ ದೊರೆ ಬೆನ್ನುನೋವಿನ ಚಿಕಿತ್ಸೆಗಾಗಿ ಕಳೆದ ನವೆಂಬರ್‌ನಲ್ಲಿ ಅಮೆರಿಕಕ್ಕೆ ತೆರಳಿದ್ದರು. ನವೆಂಬರ್ 24ರಂದು ಅವರಿಗೆ ಮೊದಲ ಯಶಸ್ವಿ ಶಸ್ತ್ರಕ್ರಿಯೆ ನಡೆಸಲಾಗಿತ್ತು. ಬಳಿಕ ಅವರಿಗೆ ಡಿಸೆಂಬರ್ 3ರಂದು ಪೂರಕ ಶಸ್ತ್ರಕ್ರಿಯೆ ನಡೆಸಲಾಗಿತ್ತು. ಸೌದಿ ದೊರೆ ತಮ್ಮ ಅಮೆರಿಕ ಪ್ರವಾಸದ ವೇಳೆ ಯುವರಾಜ ಸುಲ್ತಾನರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. 85ರ ಹರೆಯದ ಸುಲ್ತಾನರಿಗೂ ಅಸ್ವಸ್ಥತೆ ಕಾಡುತ್ತಿದೆ ಎನ್ನಲಾಗಿದೆ. ಅವರಿಗೂ ಬಹಿರಂಗಗೊಳಿಸದ ಕಾಯಿಲೆಯೊಂದಕ್ಕೆ ಸಂಬಂಧಿಸಿ 2009ರಲ್ಲಿ ಶಸ್ತ್ರಕ್ರಿಯೆ ನಡೆಸಲಾಗಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ