ಶುಕ್ರವಾರ, ಜನವರಿ 07, 2011

ಮಸೀದಿ ಧ್ವಂಸ ಪ್ರಕರಣದ ಪ್ರಕ್ರಿಯೆ ವಿಳಂಬ: 9ರಂದು ಕಾನೂನು ಮಂಡಳಿ ಸಭೆ

ಲಕ್ನೋ, ಜ.7: ಬಾಬರಿ ಮಸೀದಿ ಧ್ವಂಸ ಪ್ರಕರಣದ ಪ್ರಕ್ರಿಯೆಗಳು ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಚರ್ಚೆಯೊಂದನ್ನು ನಡೆಸಲು ಜನವರಿ 9ರಂದು ಹೊಸದಿಲ್ಲಿಯಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸಭೆ ಕರೆಯಲಾಗಿದೆ ಎಂದು ಮಂಡಳಿಯ ಹಿರಿಯ ಸದಸ್ಯ ಝಫರ್‌ಯಾಬ್ ಜಿಲಾನಿ ತಿಳಿಸಿದ್ದಾರೆ.
ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ರಾಯ್ ಬರೇಲಿಯ ವಿಶೇಷ ನ್ಯಾಯಾಲಯ ಮತ್ತು ಲಕ್ನೋದ ಸಿಬಿಐ ನ್ಯಾಯಾಲಯದಲ್ಲಿ ನಡೆಯುತ್ತಿದ್ದರೂ ಅದು ದೈನಂದಿನ ಪ್ರಕ್ರಿಯೆಗಳಲ್ಲಿ ನಡೆಯುತ್ತಿಲ್ಲ.ಹಾಗಾಗಿ ಪ್ರಕ್ರಿಯೆಗಳು ನಿಧಾನಗತಿಯಲ್ಲಿ ನಡೆಯುತ್ತಿವೆ ಎಂದು ಅವರು ತಿಳಿಸಿದರು.
ರಾಯ್ ಬರೇಲಿ ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು 15 ದಿನಗಳಿಗೊಮ್ಮೆ ತೆಗೆದುಕೊಳ್ಳುತ್ತಿರುವುದಕ್ಕೆ ಮಂಡಳಿ ಅಸಮಾಧಾನ ಗೊಂಡಿದೆ.
ಅಯೋಧ್ಯೆ ಹಕ್ಕು ದಾವೆಯ ವಿಚಾರಣೆಯನ್ನು ದೈನಂದಿನ ಪ್ರಕ್ರಿಯೆಯಲ್ಲಿ ನಡೆಸಿದಂತೆ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕು.ಇದರಿಂದ ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸಲು ಸಾಧ್ಯವಾಗಲಿದೆ ಎಂದು ಜೀಲಾನಿ ಹೇಳಿದರು.
ಬಾಬರಿ ಮಸೀದಿ ಕ್ರಿಯಾ ಸಮಿತಿಯ ಸಂಚಾಲಕರೂ ಆಗಿರುವ ತಾವು ವೈಯಕ್ತಿಕವಾಗಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ವಿಚಾರಣೆ ತ್ವರಿತವಾಗಿ ನಡೆಯಲು ಸಹಕರಿಸುವಂತೆ ಮನವಿ ಮಾಡುವುದಾಗಿ ಅವರು ತಿಳಿಸಿದರು.
ಇದೂ ಸೇರಿದಂತೆ ಬಾಬರಿ ಮಸೀದಿಗೆ ಸಂಬಂಧಿಸಿದ ಇನ್ನೂ ಹಲವು ವಿಷಯಗಳ ಬಗ್ಗೆ ಜನವರಿ 9ರಂದು ಕಾನೂನು ಮಂಡಳಿಯ ಕಾನೂನು ವಿಭಾಗದ ಸಭೆ ನಡೆಯಲಿದೆ ಎಂದು ಜೀಲಾನಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ