ಗುರುವಾರ, ಜನವರಿ 06, 2011

‘ಸರ್ಕಾರದ ವಿರುದ್ಧ ಇಂದು ನಿಲುವಳಿ ಸೂಚನೆ’

ಬೆಂಗಳೂರು: ‘ರಾಜ್ಯ ಸರ್ಕಾರ ಹಗರಣಗಳಲ್ಲಿ ಸಿಲುಕಿದ್ದು, ಅದರ ವಿರುದ್ಧ ಶುಕ್ರವಾರ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಲಾಗುವುದು’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಗುರುವಾರ ಇಲ್ಲಿ ತಿಳಿಸಿದರು.ಈ ಇಬ್ಬರೂ ಮುಖಂಡರು ವಿಧಾನಮಂಡಲದ ಜಂಟಿ ಅಧಿವೇಶನ ನಂತರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.

ಅವಿಶ್ವಾಸ: ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಪಕ್ಷಪಾತದಿಂದ ನಡೆದುಕೊಳ್ಳುತ್ತಿದ್ದು, ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಕೋರಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ವಿಧಾನಸಭೆ ಕಾರ್ಯದರ್ಶಿಗೆ ಗುರುವಾರ ಪತ್ರ ಬರೆದಿದ್ದಾರೆ.

‘ಸಭಾಧ್ಯಕ್ಷರು ಪ್ರತಿಪಕ್ಷಗಳ ಶಾಸಕರನ್ನು ಸದನದಿಂದ ಹೊರಗಿಡುವ ಹುನ್ನಾರ ನಡೆಸಿದ್ದಾರೆ. ಆಡಳಿತ ಪಕ್ಷದ ಶಾಸಕರಿಂದ ದೂರು ಸ್ವೀಕರಿಸಿ, ನೇರವಾಗಿ ಸದನ ಸಮಿತಿಗಳನ್ನು ರಚಿಸುತ್ತಿದ್ದಾರೆ. ಸದನ ಸಮಿತಿಗೆ ಯಾರನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು ಎನ್ನುವ ವಿಚಾರದಲ್ಲಿ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕೇವಲ ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಮತ್ತು ರೇವಣ್ಣ ದೂರಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ