ಗುರುವಾರ, ಜನವರಿ 06, 2011

ಮಧ್ಯಪ್ರದೇಶದ ಆರೆಸ್ಸೆಸ್ ಕಚೇರಿಯಲ್ಲೇ ಪ್ರಯೋಗ ನಡೆಸುತ್ತಿದ್ದ ಸ್ಫೋಟ ಆರೋಪಿಗಳು!

ಹೊಸದಿಲ್ಲಿ, ಜ. 6: 2007ರಲ್ಲಿ ತಮ್ಮ ಮೊದಲ ಬಾಂಬ್ ಸ್ಫೋಟದಲ್ಲಿ ಯಶಸ್ವಿಯಾಗುವುದಕ್ಕೆ ಮುಂಚೆ ಸ್ವಾಮಿ ಅಸೀಮಾನಂದನ ಹೊರತಾಗಿಯೂ, ಮೊಳಕೆಯೊಡೆಯುತ್ತಿದ್ದ ಭಯೋತ್ಪಾದನಾ ಸಂಘಟನೆಯನ್ನು 1999ರಲ್ಲೇ ಪತ್ತೆ ಹಚ್ಚ ಬಹುದಾಗಿತ್ತು.
ಅಸೀಮಾನಂದನ ನಿಕಟವರ್ತಿಗಳು 2007ರ ಸ್ಫೋಟಕ್ಕೂ ಮೊದಲೇ ಈ ಕುರಿತ ಸಿದ್ಧತೆಯಲ್ಲಿ ನಿರತರಾಗಿದ್ದರು. ಆರೆಸ್ಸೆಸ್ ಕಚೇರಿಯಲ್ಲೇ ಈ ಗುಂಪು ಸ್ಫೋಟಕ ಸಲಕರಣೆಗಳ ಬಳಕೆಯ ಕುರಿತ ಪ್ರಯೋಗ ನಡೆಸುತ್ತಿತ್ತು ಎಂದು ವರದಿಯೊಂದು ತಿಳಿಸಿದೆ.
ಸಂಜೋತಾ ಎಕ್ಸ್‌ಪ್ರೆಸ್, ಮಕ್ಕಾ ಮಸೀದಿ ಮತ್ತು ಅಜ್ಮೀರ್ ಸ್ಫೋಟ ನಡೆಸುವುದಕ್ಕೆ ಈ ಭಯೋತ್ಪಾದಕ ತಂಡವು ತಯಾರಿ ನಡೆಸುತ್ತಿತ್ತು. ಮಾತ್ರವಲ್ಲದೆ, ಒಂದು ಕಡೆಯಿಂದ ಇನ್ನೊಂದೆಡೆಗೆ ಪರಾರಿಯಾಗುತ್ತಲೇ ಗುಂಪು ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳುತ್ತಿತ್ತು ಎಂದು ಹೇಳಲಾಗಿದೆ.
1999ರಲ್ಲೇ ಮಧ್ಯಪ್ರದೇಶದ ದಂಗರ್‌ಗಾಂವ್‌ನ ಆರೆಸ್ಸೆಸ್ ಕಚೇರಿಯಲ್ಲಿ ಗುಂಪಿನ ಮೂವರು ಪ್ರಮುಖ ಸದಸ್ಯರು ಡಿಟೋನೇಟರ್‌ಗಳ ಪ್ರಯೋಗದಲ್ಲಿ ನಿರತರಾಗಿದ್ದರು ಎಂದು ಅಜ್ಮೀರ್ ಸ್ಫೋಟ ಪ್ರಕರಣದ ಸಾಕ್ಷಿಯೊಬ್ಬರು ತನಿಖಾ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಆ ಮೂವರನ್ನು ಮಧ್ಯ ಪ್ರದೇಶದ ಮಾಹು ಜಿಲ್ಲೆಯ ಆರೆಸ್ಸೆಸ್ ಪ್ರಚಾರಕ ಸುನಿಲ್ ಜೋಶಿ, ಇಂದೋರ್‌ನ ಪ್ರಚಾರಕ ಸಂದೀಪ್ ಡಾಂಗೆ ಮತ್ತು ಜಾರ್ಖಂಡ್‌ನ ಜಮ್ಮತಾದ ಇನ್ನೋರ್ವ ಪ್ರಚಾರಕ ದೇವೇಂದ್ರ ಗುಪ್ತಾ ಎಂದು ಗುರುತಿಸಲಾಗಿದೆ. ಈ ಮೂವರೂ ಅಜ್ಮೀರ್ ಸ್ಫೋಟದ ಆರೋಪಿಗಳೆಂದು ಇದೀಗ ಗುರುತಿಸಲಾಗಿದೆ.
ಸಾಕ್ಷಿ (ಹೆಸರು ಬಹಿರಂಗಪಡಿಸಲಾಗಿಲ್ಲ)ಯು 1998-99ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ಗೆ ಸೇರಿದ್ದು, ಆ ಸಂದರ್ಭ ದಂಗರ್‌ಗಾಂವ್‌ನ ಆರೆಸ್ಸೆಸ್ ಕಚೇರಿಗೆ ಅವರು ನಿರಂತರವಾಗಿ ಭೇಟಿ ನೀಡಲು ಆರಂಭಿಸಿದ್ದರು ಎಂದು ಹೇಳಲಾಗಿದೆ.
ಒಂದು ದಿನ ಕಚೇರಿಯಲ್ಲಿ ಸ್ಫೋಟಕ ಸದ್ದು ಕೇಳಿಸಿತ್ತು. ಆಗ ತಾನು ಕಚೇರಿಯ ಛಾವಣಿಗೆ ಹೋಗಿ ನೋಡಿದ್ದೆ, ಅಲ್ಲಿ ಜೋಶಿ, ಗುಪ್ತಾ ಮತ್ತು ಡಾಂಗೆ ಒಂದೆಡೆ ಒತ್ತೊತ್ತಾಗಿ ಕುಳಿತಿದ್ದುದನ್ನು ಕಂಡೆ.
ತಾವು ಡಿಟೋನೇಟರ್ ಪರೀಕ್ಷಿಸುತ್ತಿದ್ದೇವೆ ಎಂದು ಜೋಶಿ ಆ ಸಂದರ್ಭ ತನಗೆ ತಿಳಿಸಿದ್ದುದಾಗಿ ಸಾಕ್ಷಿ ತನಿಖಾ ಸಂಸ್ಥೆಗೆ ವಿವರಣೆ ನೀಡಿದ್ದಾರೆ.
ಆ ಬಳಿಕ 2000ರಲ್ಲಿ ಜೋಶಿ ಮತ್ತು ಡಾಂಗೆ ಮೈದಾನವೊಂದರಲ್ಲಿ ಪೈಪ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳೊಂದಿಗೆ ಪ್ರಯೋಗ ನಿರತರಾಗಿದ್ದುದನ್ನೂ ತಾನು ನೋಡಿರುವುದಾಗಿ ಸಾಕ್ಷಿ ತನಿಖಾ ಸಂಸ್ಥೆಗೆ ತಿಳಿಸಿರುವುದಾಗಿ ವರದಿಯೊಂದು ಹೇಳಿದೆ.
ಆದಾಗ್ಯೂ, ಕೊನೆಗೂ ಡಾಂಗೆ ಮತ್ತು ಪ್ರಕರಣದ ಇನ್ನೋರ್ವ ಆರೋಪಿ, ಆರೆಸ್ಸೆಸ್ ಪ್ರಚಾರಕ ರಾಮ್‌ಜೀ ಕಲ್ಸಂಗ್ರ ತಯಾರಿಸಿದ ಬಾಂಬ್‌ನ್ನು ಸ್ಫೋಟಕ್ಕೆ ಬಳಸಲಾಗಿದೆ.
2007ರಲ್ಲಿ ಜೋಶಿಯ ಹತ್ಯೆಯಾಗಿರುವುದರಿಂದ ಆತನ ಹೆಸರನ್ನು ವಿಚಾರಣೆಗೆ ಕಳುಹಿಸಲಾಗಿಲ್ಲ. ಡಾಂಗೆ ಮತ್ತು ಕಲ್ಸಂಗ್ರ ಇನ್ನೂ ತಲೆ ಮರೆಸಿಕೊಂಡಿದ್ದಾರೆ.
ಮೂಲಗಳ ಪ್ರಕಾರ, 2008ರಲ್ಲಿ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿ ತನಿಖಾ ಸಂಸ್ಥೆಗಳು ವ್ಯಾಪಕ ತನಿಖೆಯಲ್ಲಿ ತೊಡಗಿದ್ದಾಗ, ಡಾಂಗೆ ಮತ್ತು ಕಲ್ಸಂಗ್ರಗೆ ಗುಪ್ತಾ ಜಾರ್ಖಂಡ್‌ನಲ್ಲಿ ತಲೆ ಮರೆಸಿಕೊಂಡಿರಲು ಸಹಕರಿಸಿದ್ದನೆನ್ನಲಾಗಿದೆ.
''ಮಾಲೆಗಾಂವ್‌ನಲ್ಲಿ ಕೇವಲ ಐದು-ಆರು ಮಂದಿ ಸತ್ತಿದ್ದಾರೆ. ಆದರೆ ಕನಿಷ್ಠ ನಾಲ್ಕು-ಐದು ಸಾವಿರ ಮಂದಿ ಸಾಯಬೇಕಾಗಿತ್ತು'' ಎಂದು ಮಾಲೆಗಾಂವ್ ಸ್ಫೋಟದ ಕುರಿತು ಸುದ್ದಿ ಪತ್ರಿಕೆಯಲ್ಲಿ ಓದಿದ ಬಳಿಕ ಕಲ್ಸಂಗ್ರ ಹೇಳಿರುವುದಾಗಿ ಸಾಕ್ಷಿಯು ತಿಳಿಸಿದ್ದಾರೆ.
ಸಾಕ್ಷಿಯು ಮೊದಲು ಗುಪ್ತಾನ ಆಪ್ತರಾಗಿದ್ದು, ಇದೀಗ ತನಿಖಾ ಸಂಸ್ಥೆಗೆ ಸಾಕ್ಷಿ ನುಡಿಯುತ್ತಿದ್ದಾರೆ. ತನ್ನನ್ನು ಪೊಲೀಸರು ಜೀವಂತವಾಗಿ ಹಿಡಿಯಲು ಸಾಧ್ಯವಾಗದಂತೆ ತನಗೆ ತಾನೇ ಗುಂಡು ಹೊಡೆದುಕೊಂಡು ಸಾಯಲು ಸಿದ್ಧನಿರುವುದಾಗಿ ಕಲ್ಸಂಗ್ರ ಹೇಳಿರುವುದನ್ನು ತಾನು ಕೇಳಿಸಿದ್ದುದಾಗಿ ಸಾಕ್ಷಿ ತನಿಖಾ ಸಂಸ್ಥೆಗೆ ತಿಳಿಸಿರುವುದಾಗಿ ವರದಿಯಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ