ಶನಿವಾರ, ನವೆಂಬರ್ 27, 2010

ಇಂಡಿಯಾ ಫ್ರಟೆರ್ನಿಟಿ ಫೋರಂ ಸ್ವಯಂ ಸೇವಕರ ಸೇವೆ ಶ್ಲಾಘನೀಯ – ಶ್ರೀಮತಿ ಲತೀಫಾ ಅಬೂಬಕರ್

ಮಕ್ಕಾ : ಅನಿವಾಸಿ ಭಾರತೀಯರ ಸಂಘಟನೆ ಇಂಡಿಯಾ ಫ್ರಟೆರ್ನಿಟಿ ಫೋರಂ ಸ್ವಯಂ ಸೇವಕರ ನಿಸ್ವಾರ್ಥ ಸೇವೆ ಶ್ಲಾಘನೀಯವಾದುದು ಎಂದು ಭಾರತದಿಂದ ಹಜ್ ಯಾತ್ರೆಗೆ ಬಂದಿರುವ ಶ್ರೀಮತಿ ಲತೀಫಾ ಅಬೂಬಕರ್ ಹೇಳಿದ್ದಾರೆ. ವಿಶ್ವ ಕನ್ನಡಿಗ ನ್ಯೂಸಿನೊಂದಿಗೆ ಮಾತನಾಡಿದ ಹಾಸನ ಜಿಲ್ಲೆಯ ಸಕಲೇಶಪುರದವರಾದ ಇವರು ತಮ್ಮ ಪತಿ ಪಿ.ಎಂ.ಅಬೂಬಕರ್ ಅವರ ಜೊತೆ ಹಜ್ ನಿರ್ವಹಿಸಲು ಹಜ್ ಸಮಿತಿಯ ಮುಖಾಂತರ ಬಂದಿದ್ದು ಮೀನಾ ಪ್ರದೇಶದ ತಮ್ಮ ಅನುಭವಗಳನ್ನು ಪತ್ರಿಕೆಯ ಜೊತೆ ಹಂಚಿಕೊಂಡರು.
 
ಮೀನಾ ಪ್ರದೇಶದಲ್ಲಿ ಕಲ್ಲೆಸೆಯುವ ಧಾರ್ಮಿಕ ವಿಧಿ ಆರಂಭಗೊಳ್ಳುತ್ತಿದ್ದಂತೆ ಲಕ್ಷಾಂತರ ಜನರಿಂದ ತುಂಬಿ ತುಳುಕುತ್ತಿದ್ದ ಮೀನಾ ಪ್ರದೇಶದಲ್ಲಿ  ನಡೆಯುವುದೇ  ದುಸ್ತರ ಎನಿಸತೊಡಗಿತ್ತು . ಅಲ್ಲದೆ ರಸ್ತೆಯ ಪರಿಚಯವೂ ಇಲ್ಲದೆ ಯಾತ್ರಾರ್ಥಿಗಳು ಪರದಾಡುತ್ತಿದ್ದರು. ಸಿಕ್ಕಸಿಕ್ಕವರ ಬಳಿ ತಮ್ಮ ವಾಸಸ್ಥಳದ ಬಗ್ಗೆ ಮಾಹಿತಿ ಕೇಳುತ್ತಿದ್ದರು. ಕೆಲವರು ತಮ್ಮ ಜೊತೆ ಇದ್ದು ಕಳೆದುಹೋದ ತಮ್ಮವರಿಗಾಗಿ ಹುಡುಕುತ್ತಿದ್ದರು. ಇಂತಹ ಸಂದರ್ಭಗಳಲ್ಲಿ ಇಂಡಿಯಾ ಫ್ರಟೆರ್ನಿಟಿ ಫೋರಂ ಸ್ವಯಂ ಸೇವಕರು ತಮ್ಮ ಅನುಭವ ಮತ್ತು ಸರಳತೆ ಹಾಗೂ ವಿನಯದಿಂದ ಅವರನ್ನು ಉಪಚರಿಸಿ ಅವರಿಗೆ ಮಾಹಿತಿ ನೀಡುತ್ತಿದ್ದ ದೃಶ್ಯ ಅವರ ಸೇವಾ ಮನೋಭಾವನೆಗೆ ಸ್ಪಷ್ಟ ನಿದರ್ಶನವಾಗಿತ್ತು ಎಂದು ಹೇಳಿದೆರು.
 
ತಾವು ಮೀನಾ ಪ್ರದೇಶಕ್ಕೆ ಕಲ್ಲೆಸೆಯುವ ಕಾರ್ಯವನ್ನು ನಿರ್ವಹಿಸಲು ಹೋಗುತ್ತಿದ್ದಾಗ ನಮ್ಮ ಜೊತೆ ಸಕಲೇಶಪುರದ ಮತ್ತೊಂದು ದಂಪತಿಗಳೂ ಇದ್ದರು. ನಾವು ಒಟ್ಟಿಗೆ ಹೋಗುತ್ತಿದ್ದಂತೆ ದಾರಿ ಮಧ್ಯೆ ಅವರ ಪತಿ ದಾರಿ ತಪ್ಪಿದರು . ಇದರಿಂದಾಗಿ ನಾವು ಮತ್ತು ಅವರ ಪತ್ನಿ ಒಂದು ಕಡೆಯಾದರೆ ಅವರು ಇನ್ನೊಂದು ಕಡೆಯಾದರು. ಅವರಿಗಾಗಿ ನಾವು ಎಷ್ಟೇ ಹುಡುಕಾಡಿದರೂ ಅವರು ನಮಗೆ ಸಿಗಲಿಲ್ಲ. ಇನ್ನೊಂದು ಕಡೆ ಅವರೂ ನಮಗೆ ಹುಡುಕುತ್ತಿದ್ದರು. ಇದರಿಂದಾಗಿ ನಾವು ಅವರು ಕಳೆದುಹೋದ ಜಾಗದಲ್ಲಿಯೇ ನಿಂತು ಅವರು ಇಲ್ಲಿಗೆ ಮರಳಿ ಬರಬಹುದು ಎಂದು ಅವರಿಗಾಗಿ ಸುಮಾರು ಎರಡು ಘಂಟೆಗಳಿಗೂ ಅಧಿಕ ಕಾಲ ಕಾದೆವು. ಆದರೂ ಅವರ ಪತ್ತೆ ಇರಲಿಲ್ಲ. ಇತ್ತ ಕಾದು ಕಾದು ಆಯಾಸವಾಗಿದ್ದ ನಮಗೆ ತಮ್ಮ ನಿಗದಿತ ಸ್ಥಳಕ್ಕೆ ವಾಪಾಸು ಹೋಗಲು ಸಹ ರಸ್ತೆಯ ಪರಿಚಯ ಇರಲಿಲ್ಲ. ಈ ಸಂದರ್ಭದಲ್ಲಿ ಇಲ್ಲಿನ ಪರಿಸ್ಥಿಯ ಬಗ್ಗೆ ತಬೂಕಿನಲ್ಲಿರುವ ತಮ್ಮ ಮಗನಿಗೆ ಮಾಹಿತಿ ನೀಡಿದೆವು.
 
ಅಬ್ದುಲ್ ಲತೀಫ್ ಹೆಮ್ಮಾಡಿ
ತಬೂಕಿನಿಂದ ಹಜ್ ಸ್ವಯಂ ಸೇವಕರ ಸೇವೆಗಾಗಿ ಹೋಗಿದ್ದ ಇಂಡಿಯಾ ಫ್ರಟೆರ್ನಿಟಿ ಫೋರಮಿನ ಸಕ್ರಿಯ ಕಾರ್ಯಕರ್ತ ಅಬ್ದುಲ್ ಲತೀಫ್ ಹೆಮ್ಮಾಡಿಯವರಿಗೆ ಈ ವಿಷಯವನ್ನು ತಬೂಕಿನಿಂದ ದೂರವಾಣಿ ಮೂಲಕ ತಿಳಿಸಲಾಯಿತು ಜೊತೆಗೆ ನಮ್ಮ ದೂರವಾಣಿ ಸಂಖ್ಯೆಯನ್ನು ಸಹ ಕೊಡಲಾಯಿತು. ಆದರೆ ನಾವಿದ್ದ  ಜಾಗವನ್ನು ಪತ್ತೆ ಹಚ್ಚುವುದು ಅಷ್ಟು ಸುಲಭವಿರಲಿಲ್ಲ. ಎಕೆಂದರ ಅಲ್ಲಿ ಹೇಳಿಕೊಳ್ಳುವಂತ ಪರಿಚಯದ ಯಾವುದೇ ಫಲಕ ಇರಲಿಲ್ಲ. ಹಾಗಾಗಿ ನಾವು ಇರುವ ಸ್ಥಳದ ಬಗ್ಗೆ ಅವರಿಗೆ ಮಾಹಿತಿ ಕೊಡುವುದು ಕಷ್ಟವಾಗಿತ್ತು. ಆದರೂ ಒಂದು ಘಂಟೆಯ ನಿರಂತರ ಪರಿಶ್ರಮದ ನಂತರ ಆ ಅರವತ್ತು ಲಕ್ಷ ಯಾತ್ರಾರ್ಥಿಗಳ ಮಧ್ಯೆ ಅಬ್ದುಲ್ ಲತೀಫ್ ರವರು ನಮ್ಮನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಜೊತೆಗೆ ಆ ಕೂಡಲೇ ನಮಗೆ ಬೇಕಾದ ವ್ಯವಸ್ಥೆಗಳನ್ನು ಏರ್ಪಾಡು ಮಾಡಿ ನಮ್ಮನ್ನು ನಾವಿದ್ದ ಜಾಗದವರೆಗೂ ಕೊಂಡೊಯ್ದು ಬಿಟ್ಟರು. ಅಲ್ಲದೆ ಕಾಣೆಯಾಗಿದ್ದ ವ್ಯಕ್ತಿಯ ಬಗ್ಗೆ ಇಂಡಿಯಾ ಫ್ರಟೆರ್ನಿಟಿ ಫೋರಮಿನ ಸಹಾಯ ಕೇಂದ್ರಕ್ಕೆ ಮಾಹಿತಿ ನೀಡಿ ಅವರನ್ನೂ ಕರೆದುಕೊಂಡು ಬಂದು ನಮ್ಮ ಜೊತೆ ಬಿಟ್ಟರು. ಇದರಿಂದಾಗಿ ತಮ್ಮ ಪತಿ ಕಾಣದೆ ಕಂಗಾಲಾಗಿದ್ದ ಅವರ ಪತ್ನಿಯ ಮೊಗದಲ್ಲೂ ಮಂದಹಾಸ ಮೂಡಿತ್ತು. ಹೋಗುವಾಗ ತಮ್ಮ ದೂರವಾಣಿ ಸಂಖ್ಯೆಯನ್ನು ನಮಗೆ ಕೊಟ್ಟ ಇಂಡಿಯಾ ಫ್ರಟೆರ್ನಿಟಿ ಫೋರಮಿನ ಈ ಕಾರ್ಯಕರ್ತ ಯಾವ ಸಹಾಯ ಬೇಕಾದರೂ ನನ್ನನ್ನು ಕರೆಯಿರಿ ಎಂದು ಹೇಳಿ ನಮ್ಮನ್ನು ಬೀಳ್ಕೊಟ್ಟ. ಇಂತಹ ಒಂದು ಸೇವೆ ಸಲ್ಲಿಸುವ ಮೂಲಕ ಅಲ್ಲಾಹನ ಆರಾಧನೆಗೆ ಬಂದ ವೃದ್ಧ , ಅಸಹಾಯಕ ಯಾತ್ರಾರ್ಥಿಗಳ ಸೇವೆಯನ್ನು ಮಾಡುತ್ತಿರುವ ಇಂಡಿಯಾ ಫ್ರಟೆರ್ನಿಟಿ ಫೋರಂ ಸ್ವಯಂ ಸೇವಕರ ಈ ಸೇವೆ ಎಂದೆಂದಿಗೂ ಹಜ್ ಯಾತ್ರೆಯ ನೆನಪುಗಳಲ್ಲಿ ಚಿರಸ್ಥಾಯಿಯಾಗಿರುವುದಂತೂ ಸತ್ಯ ಎಂದು ಅವರು ತಮ್ಮ ಅನುಭವ ಹಂಚಿಕೊಂಡರು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ