
ಹೊಸದಿಲ್ಲಿ, ಮಾ.9: ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ತುಳಸಿ ಪ್ರಜಾಪತಿಯನ್ನು ಪೊಲೀಸರೊಂದಿಗೆ ಸಂಚು ರೂಪಿಸಿ ಗುಜರಾತ್‌ನ ಮಾಜಿ ಗೃಹ ಸಚಿವ ಅಮಿತ್ ಶಾ ಹತ್ಯೆ ನಡೆಸಿದ್ದಾರೆ ಎಂದು ಸಿಬಿಐ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಅಮಿತ್ ಶಾ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯ ಆಪ್ತರಾಗಿದ್ದಾರೆ.ಗುಜರಾತ್ ಪೊಲೀಸ್ ಗುಂಪಿನೊಂದಿಗೆ ಅಮಿತ್ ಶಾ ಸಂಚು ರೂಪಿಸಿ 2006ರಲ್ಲಿ ಪ್ರಜಾಪತಿಯನ್ನು ಮುಗಿಸಿದ್ದಾರೆ ಎಂದು ಸಿಬಿಐ ಹೇಳಿದೆ.
ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಕಾರಣದಿಂದ ಪ್ರಜಾಪತಿಯ ಹತ್ಯೆ ಮಾಡಲಾಗಿದೆ. ಪ್ರಜಾಪತಿಯ ಹತ್ಯೆಯ ಮೊದಲು ಅಮಿತ್ ಶಾ ಮತ್ತು ಐಪಿಎಸ್ ಅಧಿಕಾರಿ ರಾಜ್‌ಕುಮಾರ್ ಪಾಂಡ್ಯನ್ ನಡುವೆ ಹಲವು ದೂರವಾಣಿ ಮಾತುಕತೆ ನಡೆದಿದೆ ಎಂದು ಸಿಬಿಐ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಸೊಹ್ರಾಬುದ್ದೀನ್ ಮತ್ತು ಪ್ರಜಾಪತಿ ಎನ್‌ಕೌಂಟರ್ ಪ್ರಕರಣಗಳೆರಡನ್ನೂ ಒಂದಾಗಿ ತಮ್ಮ ತನಿಖಾಧಿಕಾರಿಗಳಿಗೆ ವಹಿಸಬೇಕೆಂದು ಆಗ್ರಹಿಸಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರಿಂದ ಹತ್ಯೆಗೊಳಗಾದ ಪ್ರಜಾಪತಿಯ ತಾಯಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಜನವರಿ 12, 2010ರಲ್ಲಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ ಮೇರೆಗೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.
ಪ್ರಜಾಪತಿಯ ಹತ್ಯೆ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್‌ನ ‘ಪ್ರಮುಖ ಅಂಗ’ವಾಗಿರುವುದರಿಂದ ಪ್ರಜಾಪತಿ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಬೇಕೆಂಬ ಅರ್ಜಿಗೆ ಸಿಬಿಐ ವಕೀಲೆ ಕೆಬಿಎಸ್ ತುಳಸಿ ಬೆಂಬಲ ಸೂಚಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ