ಭಾನುವಾರ, ಫೆಬ್ರವರಿ 20, 2011

ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಅಮಾಯಕರ ಬಂಧನ ‘ಅನ್ಯಾಯದ ಕ್ರಮ’: ಸಚಿವ ಖುರ್ಷಿದ್

ಮುಂಬೈ, ಫೆ.20: 2006ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಸಂಬಂಧ ಒಂಬತ್ತು ಮುಸ್ಲಿಮ್ ಯುವಕರನ್ನು ಬಂಧಿಸಿರು ವುದು ‘ಅನ್ಯಾಯದ ಕ್ರಮ’ ಎಂದು ಬಣ್ಣಿಸಿರುವ ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್, ಪ್ರಕರಣದ ಬಗ್ಗೆ ನ್ಯಾಯ ದೊರಕಿಸಿಕೊಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

‘ತನಿಖೆಯ ವೇಳೆ ಅನ್ಯಾಯ ವೆಸಗಿರುವುದು ಸ್ಪಷ್ಟವಾಗಿದೆ. ಯಾವುದೇ ಪ್ರಕರಣದ ತನಿಖೆಯಲ್ಲಿ ನೂರು ಶೇಕಡಾ ತಪ್ಪು ಸಂಭವಿಸದೆ ಇರಲು ಸಾಧ್ಯವಿಲ್ಲ. ತನಿಖೆಯ ಸಂದರ್ಭದಲ್ಲಿ ಹಲವರು ಬಂಧನ ಕ್ಕೊಳಗಾಗುತ್ತಾರೆ. ಆದರೆ ತನಿಖೆಯ ವೇಳೆ ಹಾಗೂ ನ್ಯಾಯಾಲಯದಲ್ಲಿ ಅವರು ಬಂಧಮುಕ್ತರಾಗುತ್ತಾರೆ. ಆದರೆ ನಿರಂತರವಾಗಿ ‘ಕೆಲವು ವ್ಯಕ್ತಿಗಳನ್ನು’ ಗುರಿಯಾಗಿಸುವುದು ಅನ್ಯಾಯದ ಕ್ರಮ’ ಎಂದು ಉರ್ದು ಸುದ್ದಿ ವಾಹಿನಿಯೊಂದು ಏರ್ಪಡಿಸಿದ್ದ ಕಾರ್ಯಕ್ರಮದ ಬಳಿಕ ಸುದ್ದಿಗಾರ ರೊಂದಿಗೆ ಖುರ್ಷಿದ್ ಹೇಳಿದರು.

‘ತರುವಾಯ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಕರಣದ ಮರು ವಿಮರ್ಶೆ ಹಾಗೂ ಮರು ಚಿಂತನೆ ಅಗತ್ಯವಾಗಿದೆ’ ಎಂದು ಬಾಂಬ್ ಸ್ಫೋಟದಲ್ಲಿ ಕೇಸರಿ ಭಯೋತ್ಪಾದಕರ ಪಾತ್ರವನ್ನು ಪ್ರಸ್ತಾಪಿಸದೆ ಪರೋಕ್ಷವಾಗಿ ಹೇಳಿದರು.
ಗೃಹ ಸಚಿವ ಪಿ.ಚಿದಂಬರಂ ಮತ್ತು ಕಾನೂನು ಸಚಿವ ವೀರಪ್ಪ ಮೊಯ್ಲಿ ತಾರ್ಕಿಕ ಮುಕ್ತಾಯಕ್ಕಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಈ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್‌ರ ಸಂಪರ್ಕದಲ್ಲಿದ್ದಾರೆ ಎಂದು ಖುರ್ಷಿದ್ ಹೇಳಿದರು.

‘ಗೃಹ ಸಚಿವರು ಪ್ರಕರಣವನ್ನು ಪರಿಶೀಲಿಸಿದ್ದಾರೆ. ಮುಖ್ಯಮಂತ್ರಿ ಯವರು ಗೃಹ ಸಚಿವರ ಸಂಪರ್ಕ ದಲ್ಲಿದ್ದಾರೆ. ಅದೇ ರೀತಿ ಗೃಹ ಸಚಿವರೂ ಕಾನೂನು ಸಚಿವರ ಸಂಪರ್ಕದಲ್ಲಿದ್ದಾರೆ’ ಎಂದು ಅವರು ಹೇಳಿದರು. 2008, ಸೆಪ್ಟಂಬರ್ 8ರಂದು 36 ಜನರು ಬಲಿಯಾಗಿ ಹಲವರು ಗಾಯ ಗೊಂಡ ಮಾಲೆಗಾಂವ್ ಸ್ಫೋಟ ಘಟನೆ ಮಹಾರಾಷ್ಟ್ರದ ಇತಿಹಾಸದಲ್ಲೇ ನೋವಿನ ಘಟನೆಯಾಗಿದೆ ಎಂದು ಸಮಾವೇಶದಲ್ಲಿ ಮಾತನಾಡಿದ ಚವಾಣ್ ಹೇಳಿದರು.

‘ರಾಜ್ಯದ ಇತಿಹಾಸದಲ್ಲಿ ಮಾಲೆಗಾಂವ್ ಘಟನೆ ನೋವಿನ ಘಟನೆಯಾಗಿದೆ. ಬಂಧಿತ ನಿರಪರಾಧಿ ಗಳಿಗೆ ನ್ಯಾಯ ದೊರಕಲಿದೆ’ ಎಂದು ಅವರು ಹೇಳಿದರು. ಜನರ ಬೇಡಿಕೆಯ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಈ ಘಟನೆಯ ಬಳಿಕ ಕೆಲವು ವಿಷಯಗಳು ಬೆಳಕಿಗೆ ಬಂದವು ಎಂದ ಚವಾಣ್, ಆರೋಪಿಗಳಿಗೆ ಶಿಕ್ಷೆಯಾಗಬೇಕು ಹಾಗೂ ರಾಜ್ಯದ ಜಾತ್ಯತೀತ ವಾತಾವರಣಕ್ಕೆ ಯಾವುದೇ ಧಕ್ಕೆಯಾಗದೆ ಉಳಿಯ ಬೇಕು ಎಂದು ಅವರು ಹೇಳಿದರು.

2007ರ ಮಕ್ಕಾ ಮಸ್ಜಿದ್ ಸ್ಫೋಟ ಪ್ರಕರಣದ ಆರೋಪಿ ಸ್ವಾಮಿ ಅಸೀಮಾನಂದ, 36 ಜನರು ಬಲಿಯಾಗಿ, 100ಕ್ಕೂ ಅಧಿಕ ಮಂದಿ ಗಾಯಗೊಂಡ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಕೇಸರಿ ಪಡೆಯ ಕೈವಾಡವಿರುವುದರ ಬಗ್ಗೆ ತಪ್ಪೊಪ್ಪಿ ಕೊಂಡಿದ್ದಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ