ಟ್ರಿಪೊಲಿ, ಫೆ.20: ಕಳೆದ 42 ವರ್ಷಗಳ ದೀರ್ಘಕಾಲದಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಅಧ್ಯಕ್ಷ ಮುಅಮ್ಮರ್ ಗದಾಫಿಯವರನ್ನು ಅಧಿಕಾರದಿಂದ ಕೆಳಗಿಳಿಸುವ ಯತ್ನವಾಗಿ ಸತತ ಐದು ದಿನಗಳಿಂದ ಪ್ರಜಾಪ್ರಭುತ್ವ ಪರ ಬಂಡಾಯದ ವೇಳೆ ಸರಕಾರಿ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 200 ಮಂದಿ ಪ್ರಾಣ ಕಳೆದುಕೊಂಡಿರುವ ಭೀತಿ ವ್ಯಕ್ತವಾಗಿದೆ.
ಲಿಬಿಯದ ಬಂದರು ಪಟ್ಟಣ ಬೆಂಘಾಝಿಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ಸರಕಾರ ನಡೆಸಿದ ದಾಳಿಯಲ್ಲಿ ಸುಮಾರು 200 ಜನರು ಸಾವಿಗೀಡಾಗಿದ್ದಾರೆ ಎಂದು ಬ್ರಿಟನ್‌ನ ಸ್ವತಂತ್ರ ಪತ್ರಿಕೆಯೊಂದು ರವಿವಾರ ವರದಿ ಮಾಡಿದೆ.
ಸರಕಾರದ ವಿರುದ್ಧ ನಡೆದ ಪ್ರತಿಭಟನೆಯು ಸುಮಾರು 100 ಮಂದಿಯ ಪ್ರಾಣಕ್ಕೆ ಕುತ್ತನ್ನುಂಟು ಮಾಡಿರುವುದಾಗಿ ಈ ಮೊದಲು ಕೆಲವು ವರದಿಗಳು ತಿಳಿಸಿದ್ದವು.
ಬೆಂಘಾಝಿ ಪ್ರದೇಶದಲ್ಲಿ ಪ್ರತಿಭಟನಕಾರರ ಮೇಲೆ ಸರಕಾರಿ ಪಡೆಗಳು ನಡೆಸಿದ ಹಠಾತ್ ದಾಳಿಯಲ್ಲಿ ಶನಿವಾರ ಕನಿಷ್ಠ 15 ಮಂದಿ ಮೃತಪಟ್ಟಿದ್ದರು. ಶುಕ್ರವಾರ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ 35 ಮಂದಿಯ ಅಂತ್ಯಕ್ರಿಯೆಗಾಗಿ ಜಮಾಯಿಸಿದ್ದ ಸಾವಿರಾರು ಪ್ರದರ್ಶನಕಾರರ ಮೇಲೆ ಶನಿವಾರ ಸೈನಿಕರು ಗುಂಡು ಹಾರಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.ಶನಿವಾರ ಸಂಭವಿಸಿದ ಹಿಂಸಾಚಾರದಲ್ಲಿ ಅನೇಕರು ಗಾಯಗೊಂಡಿದ್ದಾರೆ ಎಂದು ಅದು ತಿಳಿಸಿದೆ.
ಪ್ರತಿಭಟನಕಾರರನ್ನು ದಮನಗೈಯುವ ಕಾರ್ಯದಲ್ಲಿ ಸರಕಾರಿ ಪಡೆಗಳೊಂದಿಗೆ ಹಣದ ಆಮಿಷಕ್ಕೆ ದುಡಿಯುವ ಕೆಲವು ವಿದೇಶಿಯಗೂ ಸೇರಿದ್ದಾರೆ ಎಂದು ಕೆಲವು ವರದಿಗಳು ವಿವರಿಸಿವೆ. ಶನಿವಾರ ನಡೆದ ಹಿಂಸಾಚಾರಕ್ಕೆ ಮುನ್ನ ಯಮನ್‌ನಲ್ಲಿ ಕನಿಷ್ಠ 84 ಜನರು ಸಾವಿಗೀಡಾಗಿರುವುದಾಗಿ ಮಾನವ ಹಕ್ಕು ಸಂಸ್ಥೆಯೊಂದು ಅಂದಾಜಿಸಿತ್ತು . ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ದಾಳಿ ನಡೆಸುವುದನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಅಂತಾರಾಷ್ಟ್ರೀಯ ಸಮುದಾಯವು ಲಿಬಿಯ ಸರಕಾರವನ್ನು ಒತ್ತಾಯಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ