ಬೆಂಗಳೂರು, ಫೆ. 19: ರಾಜ್ಯದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ಮುಖಂಡರುಗಳು ನಡೆಸಿರುವ ದೊಡ್ಡ ಅಕ್ರಮವೊಂದನ್ನು ಸೋಮವಾರ ದಾಖಲೆಗಳ ಸಮೇತ ಬಹಿರಂಗಪಡಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರಕಾರದ ವಿರುದ್ಧ ಹೊಸಬಾಂಬ್ ಸಿಡಿಸಿದ್ದಾರೆ. ಗುಜರಾತ್ ಮಾದರಿ ಆಡಳಿತದ ಮಾತನಾಡುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅದೇ ಮಾದರಿಯಲ್ಲೆ ಅಧಿಕಾರ ದುರುಪಯೋಗದ ಸಾಕ್ಷಿ ನಾಶ ಪಡಿಸುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿನಾ ಕಾರಣ ಜೆಡಿಎಸ್ ಮೇಲೆ ಗೂಬೆ ಕೂರಿಸುತ್ತಿರುವ ಯಡಿಯೂರಪ್ಪ ಲೋಕಾಯುಕ್ತ ವ್ಯಾಪ್ತಿಗೆ ಬಾರದಿದ್ದರೂ, ನಮ್ಮ ಕುಟುಂಬದ ಸದಸ್ಯರ ಆಸ್ತಿ ತನಿಖೆಗೆ ದೂರು ನೀಡಿದ್ದಾರೆ. ಅದಕ್ಕೆ ನಾವೇನೂ ನ್ಯಾಯಾಲಯದಿಂದ ತಡೆಯಾಜ್ಞೆ ತರುವುದಿಲ್ಲ ಎಂದು ಲೇವಡಿ ಮಾಡಿದರು. ಯಡಿಯೂರಪ್ಪ ತಿಂಗಳಿಗೊಮ್ಮೆ ಮುಂದಿನ ತಿಂಗಳಿಂದ ನನ್ನ ನಡವಳಿಕೆ ಬದಲಾವಣೆ ಮಾಡಿಕೊಳ್ಳುವುದಾಗಿ ಪ್ರಕಟಿಸುತ್ತಾರೆ. ಆದರೆ, ‘ನಾಯಿ ಬಾಲ ಡೊಂಕು’ ಎಂಬ ಗಾದೆ ಮಾತಿನಂತೆ ಅವರನ್ನು ಬದಲಾವಣೆ ಮಾಡಲು ಬ್ರಹ್ಮನಿಂದಲೂ ಸಾಧ್ಯವಿಲ್ಲ ಎಂದು ಟೀಕಿಸಿದ ಕುಮಾರಸ್ವಾಮಿ ಯವರ ಹೇಳಿಕೆಗಳು ಕೇವಲ ತಾತ್ಕಾಲಿಕ ಎಂದರು.
ರಾಜ್ಯದ ಜನತೆ ಜ್ವಲಂತ ಸಮಸ್ಯೆಗಳಲ್ಲಿ ತೊಳಲಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾವಿರ ದಿನ ಪೂರೈಸಿದ ಸರಕಾರ ಸಾಧನಾ ಸಮಾವೇಶ ಆಯೋಜಿಸಿದೆ. ಆ ಮೂಲಕ ಜಾತ್ರೆ ನಡೆಸಲಾಗುತ್ತಿದೆ. ಇದರಿಂದ ವಿರೋಧ ಪಕ್ಷಗಳ ಬಾಯಿಮುಚ್ಚಿಸಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ಬೂತ್ ಮಟ್ಟದ ನಾಲ್ವರು ಕಾರ್ಯಕರ್ತರ ಸಮಾವೇಶಕ್ಕೆ ಸಾವಿರಾರು ಬಸ್‌ಗಳ ಅಗತ್ಯವೇನಿತ್ತು ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ಸಂತೆಯಲ್ಲಿ ಮಾತನಾಡಬೇಡಿ ಎಂದು ಮುಖ್ಯಮಂತ್ರಿಗಳೇ ಹೇಳುತ್ತಾರೆ. ಆದರೆ, ವಿಧಾನಸಭೆಯಲ್ಲಿ ಚರ್ಚೆಗೆ ಬಂದರೆ ಪಲಾಯನ ಮಾಡುತ್ತಾರೆ. ವಿಪಕ್ಷಗಳ ಬಣ್ಣ ಬಯಲು ಮಾಡುತ್ತೇನೆ ಎಂದು ಬ್ಲಾಮೇಲ್ ಮಾಡುತ್ತಿದ್ದಾರೆ. ಇದಕ್ಕೆ ಜಗ್ಗುವುದಿಲ್ಲ ಎಂದು ಎಚ್ಚರಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ