ಕಾಸರಗೋಡು, ಫೆ.4: ಮಂಗಳೂರು ಖಾಝಿಯಾಗಿದ್ದ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್ ನಿಗೂಢ ಮರಣದ ಕುರಿತು ಸಿಬಿಐ ತನಿಖೆ ಅಂತಿಮ ಹಂತದಲ್ಲಿದ್ದು, ಖಾಝಿ ಮರಣವು ಕೊಲೆ ಎಂಬ ಮಹತ್ವದ ಸುಳಿವು ಲಭಿಸಿವೆ ಎಂದು ಮೂಲಗಳು ತಿಳಿಸಿವೆ.
ಖಾಝಿ ಮರಣ ಕೊಲೆ ಎಂಬ ನೆಲೆಯಲ್ಲಿ ಸಿಬಿಐ ತನಿಖೆ ಸಾಗುತ್ತಿದೆ. ಆದರೆ ಈ ಕುರಿತು ಸಂಪರ್ಕಿಸಿದಾಗ ತನಿಖೆಯ ಹಿತದೃಷ್ಟಿಯಿಂದ ಮಾಹಿತಿ ನೀಡಲು ಸಿಬಿಐ ತನಿಖಾ ತಂಡ ನಿರಾಕರಿಸಿದೆ.
ಮಂಗಳೂರು ಕೇಂದ್ರೀಕರಿಸಿ ಸಿಬಿಐ ತನಿಖೆ ನಡೆಸುತ್ತಿದ್ದು, ಈಗಾಗಲೇ ನೂರಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೆ ಒಳಪಡಿಸಿದೆ. ಕುಟುಂಬಸ್ಥರು, ಶಂಕಿತರು ಮತ್ತು ಮಂಗಳೂರಿನ ಹಲವರಿಂದ ಸಿಬಿಐ ಮಾಹಿತಿ ಕಲೆ ಹಾಕಿದೆ. ಅಲ್ಲದೇ ಶೀಘ್ರದಲ್ಲಿಯೆ ಅಪರಾಧಿಗಳನ್ನು ಕಾನೂನಿನ ಮುಂದೆ ತರಲಾಗುವುದು ಎಂದು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2010ರ ಫೆ.15ರಂದು ಅಬ್ದುಲ್ಲಾ ಮುಸ್ಲಿಯಾರ್ ಮೃತದೇಹವು ಮನೆಯ ಸಮೀಪವಿರುವ ಚೆಂಬರಿಕ ಸಮುದ್ರದಲ್ಲಿ ಪತ್ತೆಯಾಗಿತ್ತು. ಅವರ ಊರುಗೋಲು, ಪಾದರಕ್ಷೆ, ಟಾರ್ಚ್‌ಲೈಟ್ ಆಳೆತ್ತರದ ಕಲ್ಲಿನ ಬಂಡೆಯ ಮೇಲೆ ಬಿದ್ದಿದ್ದವು. ಇದರಿಂದ ಸಾವಿನ ಬಗ್ಗೆ ಆರಂಭದಲ್ಲೇ ಸಾಕಷ್ಟು ನಿಗೂಢತೆ ಕೇಳಿ ಬಂದಿತ್ತು.
ವಯೋವೃದ್ಧರಾಗಿದ್ದ ಖಾಝಿ ಚೆಂಬರಿಕ ಸಮುದ್ರ ತೀರಕ್ಕೆ ಹೇಗೆ ತಲುಪಿದರು ಎಂಬುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ಈ ಬಗ್ಗೆ ಶಂಕೆ ಇದ್ದುದರಿಂದ ಹಲವರನ್ನು ವಿಚಾರಣೆಗೆ ಒಳಪಡಿಸಿದರೂ ಪ್ರಗತಿ ಕಂಡಿರಲಿಲ್ಲ. ಹಲವು ಮನವಿಗಳಿಗೆ ಸ್ಪಂದಿಸಿದ ಸರಕಾರ ಕ್ರೈಂ ಬ್ರಾಂಚ್‌ಗೆ ತನಿಖೆಗೆ ವಹಿಸಿತ್ತು. ಆದರೂ ಯಾವುದೇ ಪ್ರಗತಿ ಕಾಣದಿದ್ದುದರಿಂದ ಹಲವು ಸಂಘಟನೆಗಳು, ಅಭಿಮಾನಿಗಳು ಮತ್ತು ರಾಜಕೀಯ ಪಕ್ಷಗಳು ಒತ್ತಡ ಹೇರಿದ್ದರ ಪರಿಣಾಮ ಆರು ತಿಂಗಳ ಹಿಂದೆ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು.
ಇದರಂತೆ ಸಿಬಿಐ ಅಡಿಶನಲ್ ಸೂಪರಿಡೆಂಟ್ ನಂದಕುಮಾರ್ ನಾಯರ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಲಾಸರ್ ತಂಡವು ಕಾಸರಗೋಡು ಮತ್ತು ಮಂಗಳೂರು ಕೇಂದ್ರೀಕರಿಸಿ ತನಿಖೆ ನಡೆಸುತ್ತಾ ಬಂದಿದೆ. ತನಿಖೆಯಿಂದ ಹಿಂದಿನ ರಹಸ್ಯಗಳನ್ನು ಭೇದಿಸಲು ತಂಡಕ್ಕೆ ಸಾಧ್ಯವಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ