ಶುಕ್ರವಾರ, ಫೆಬ್ರವರಿ 04, 2011

ಭಾರತದಲ್ಲಿ ಶರಿಯತ್ ಕಾನೂನಿನ ಇಸ್ಲಾಮಿಕ್ ಬ್ಯಾಂಕ್

ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ತನ್ನ ಮೊತ್ತ ಮೊದಲ ಇಸ್ಲಾಮಿಕ್ ಬ್ಯಾಂಕನ್ನು ಶೀಘ್ರದಲ್ಲೇ ಕಾಣಲಿದೆ. ಈ ಸಂಬಂಧ ಇದ್ದ ಅಡೆತಡೆಗಳು ಸದ್ಯದ ಮಟ್ಟಿಗೆ ಕೇರಳ ಉಚ್ಚ ನ್ಯಾಯಾಲಯದಲ್ಲಿ ನಿವಾರಣೆಯಾಗಿವೆ.

ಈ ರೀತಿಯಾಗಿ ಶರಿಯತ್ ಕಾನೂನಿನ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಇಸ್ಲಾಮಿಕ್ ಬ್ಯಾಂಕ್ ಸ್ಥಾಪಿಸಲು ಹೊರಟಿರುವುದು ಕೇರಳ ಸರಕಾರ. ಇದನ್ನು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿ ಮತ್ತು ಕೇರಳದ ಹಿಂದೂ ಸಂಘಟನೆ 'ಹಿಂದೂ ಐಕ್ಯ ವೇದಿ' (Hindu Aikya Vedi) ಪ್ರಶ್ನಿಸಿತ್ತು.

ನ್ಯಾಯಮೂರ್ತಿ ಜೆ. ಚಲಮೇಶ್ವರ್ ಮತ್ತು ಪಿ.ಆರ್. ರಾಮಚಂದ್ರ ಮೆನನ್ ನೇತೃತ್ವದ ವಿಭಾಗೀಯ ಪೀಠವು ಇಸ್ಲಾಮಿಕ್ ಬ್ಯಾಂಕ್ ಸ್ಥಾಪನೆ ವಿರುದ್ಧದ ಅರ್ಜಿಗಳನ್ನು ವಜಾಗೊಳಿಸಿದ್ದು, ಕೇರಳ ಸರಕಾರದ ಆದೇಶವು ಯಾವ ರೀತಿಯಲ್ಲಿ ಧರ್ಮವೊಂದನ್ನು ನೇರವಾಗಿ ಬೆಂಬಲಿಸುತ್ತದೆ ಎನ್ನುವುದನ್ನು ಅರ್ಜಿದಾರರು ನಿರೂಪಿಸಿಲ್ಲ ಎಂದು ತೀರ್ಪಿನಲ್ಲಿ ಹೇಳಿದೆ.

ಕೇರಳ ಸರಕಾರವು ಶರಿಯತ್ ಕಾನೂನುಗಳ ಅಡಿಯಲ್ಲಿ ಇಸ್ಲಾಮಿಕ್ ಬ್ಯಾಂಕ್ ಸ್ಥಾಪಿಸಲು ಹೊರಟಿರುವುದು ಭಾರತದ ಸಂವಿಧಾನದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿದೆ. ಸಂವಿಧಾನದ 27 ವಿಧಿಯ ಪ್ರಕಾರ ಸರಕಾರಿ ಸಂಸ್ಥೆಯು ಯಾವುದೇ ಧರ್ಮದ ಪರವಾಗಿರಬಾರದು ಎಂಬ ಅಂಶವನ್ನು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

2009ರ ಡಿಸೆಂಬರಿನಲ್ಲಿ 'ಅಲ್-ಬರಾಕಾ ಫೈನಾನ್ಶಿಯಲ್ ಸರ್ವಿಸಸ್' ಎಂಬ ನೋಂದಾಯಿತ ಸಂಸ್ಥೆಯ ಅಡಿಯಲ್ಲಿ ಕೇರಳ ರಾಜ್ಯ ಸರಕಾರವು ಬ್ಯಾಂಕ್ ಒಂದನ್ನು ಸ್ಥಾಪಿಸುವ ನಿರ್ಧಾರಕ್ಕೆ ಬಂದಿತ್ತು. ಇದರಲ್ಲಿ ಶೇ.11ರ ಶೇರು ಹೊಂದುವುದು ಕೇರಳ ರಾಜ್ಯ ಕೈಗಾರಿಕಾಭಿವೃದ್ಧಿ ನಿಗಮದ ಉದ್ದೇಶವಾಗಿತ್ತು.

17 ಸದಸ್ಯರನ್ನು ಆಡಳಿತ ಮಂಡಳಿಯಲ್ಲಿ ಹೊಂದಿರುವ 'ಅಲ್-ಬರಾಕಾ' ಸಂಸ್ಥೆಯಲ್ಲಿನ 14 ಪ್ರವರ್ತಕರು 4.20 ಕೋಟಿ ರೂಪಾಯಿಗಳನ್ನು ಬಂಡವಾಳವಾಗಿ ಹೂಡಿದ್ದರು. ಈ ಸಂಸ್ಥೆಗೆ ಗಲ್ಫ್ ಮೂಲದ ಉದ್ಯಮಿ ಪಿ. ಮೊಹಮ್ಮದ್ ಆಲಿ ಅಧ್ಯಕ್ಷ ಹಾಗೂ ಸಿ.ಕೆ. ಮೆನನ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಈ ಬ್ಯಾಂಕ್‌ನ ವ್ಯವಹಾರಗಳಲ್ಲಿ ಇಸ್ಲಾಮಿಕ್ ಕಾನೂನು ಶರಿಯತ್ ಪಾಲನೆ ನಿಯಮಗಳು ಪಾಲನೆಯಾಗುವಂತೆ ನೋಡಿಕೊಳ್ಳುವುದು ಮತ್ತು ಸಲಹೆಗಳನ್ನು ನೀಡಲು ಇಸ್ಲಾಮಿಕ್ ಧರ್ಮಗುರುಗಳ ಸಮಿತಿಯೊಂದನ್ನು ರಚಿಸಲು ಕೂಡ ನಿರ್ಧರಿಸಲಾಗಿತ್ತು.

ಆದರೆ ಸರಕಾರದ ನಿರ್ಧಾರಕ್ಕೆ 2010ರ ಜನವರಿ ತಿಂಗಳಲ್ಲಿ ಕೇರಳ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಅಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ವಿತ್ತ ಸಚಿವಾಲಯ ಮತ್ತು ಕೇರಳ ರಾಜ್ಯ ಕೈಗಾರಿಕಾಭಿವೃದ್ಧಿ ನಿಗಮಕ್ಕೆ ನೋಟೀಸು ಜಾರಿ ಮಾಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ರಿಸರ್ವ್ ಬ್ಯಾಂಕ್, ಪ್ರಸಕ್ತ ಕಾನೂನುಗಳು ಇಂತಹ ಬ್ಯಾಂಕ್ ಸ್ಥಾಪನೆಗೆ ಅನುಮತಿ ನೀಡುವುದಿಲ್ಲ ಎಂದು ಹೇಳಿತ್ತು.

ತನ್ನ ಯೋಜನೆಗಳು ಕಾರ್ಯಗತಗೊಳ್ಳುವುದು ಕಷ್ಟ ಎಂದು ಒಂದು ಹಂತದಲ್ಲಿ ಭರವಸೆ ಕಳೆದುಕೊಂಡಿದ್ದ ಕೇರಳ ಸರಕಾರ, ತನ್ನ ಉದ್ದೇಶ ಇಸ್ಲಾಮಿಕ್ ಬ್ಯಾಂಕ್ ಸ್ಥಾಪನೆ ಮಾಡುವುದು ಅಲ್ಲ. ಬದಲಿಗೆ ಬಡ್ಡಿರಹಿತ ನಿಯಮಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಹಣಕಾಸು ಸಂಸ್ಥೆಯನ್ನು ಅಸ್ತಿತ್ವಕ್ಕೆ ತರುವುದು ಎಂದು ವಿಧಾನಸಭೆಯಲ್ಲೇ ಹೇಳಿತ್ತು.

ಹೈಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿರುವ ಸುಬ್ರಮಣ್ಯನ್ ಸ್ವಾಮಿ, ತಾನು ತೀರ್ಪನ್ನು ಪೂರ್ಣವಾಗಿ ಓದಿದ ನಂತರ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುವ ಕುರಿತು ನಿರ್ಧಾರಕ್ಕೆ ಬರುತ್ತೇನೆ. ವರದಿಯಾಗಿರುವ ಆಧಾರಗಳಲ್ಲಿ ನನ್ನ ಅರ್ಜಿ ವಜಾಗೊಂಡಿರುವುದಾದರೆ, ಅದನ್ನು ಪ್ರಶ್ನಿಸುತ್ತೇನೆ ಎಂದು ಹೇಳಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ