ಪುತ್ತೂರು: ಬೈಕ್‌ನಲ್ಲಿ ತೆರಳು ತ್ತಿದ್ದ ಸುನ್ನಿ ರಕ್ಷಣಾ ಸಮಿತಿಯ ಮುಖಂಡರಾದ ಮುಸ್ಲಿಂ ಧಾರ್ಮಿಕ ನಾಯಕ ಹುಸೈನ್ ದಾರಿಮಿ ರೆಂಜಲಾಡಿ ಅವರನ್ನು ತಂಡವೊಂದು ತಡೆದು ನಿಲ್ಲಿಸಿ ಬಲಾತ್ಕಾರವಾಗಿ ಜೀಪಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿ ಕೂರ ಮಸೀದಿಯಲ್ಲಿ ಕೂಡಿ ಹಾಕಿ ಜೀವ ಬೆದರಿಕೆ ಒಡ್ಡಿರುವ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ.
ಕೂರ ತಂಙಳ್ ಮತ್ತು ಕೂರ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಅವರ ಪ್ರಚೋದನೆಯಂತೆ ಬರೆಪ್ಪಾಡಿಯ ಅಶ್ರಫ್, ಸವಣೂರಿನ ಸಲಾಂ, ಸವಣೂರು ಪಲ್ಲತ್ತಾರುವಿನ ಅಶ್ರಫ್ ಸೇರಿದಂತೆ ೮ ಮಂದಿಯ ತಂಡ ಈ ಕೃತ್ಯ ಎಸಗಿರುವುದಾಗಿ ಹುಸೈನ್ ದಾರಿಮಿ ರೆಂಜಲಾಡಿ ಆರೋಪಿಸಿದ್ದಾರೆ.
ತಾನು ರೆಂಜಲಾಡಿಯ ಮನೆಯಿಂದ ಸೋಮವಾರ ಬೆಳಿಗ್ಗೆ ಸುಮಾರು ೭ ಗಂಟೆಯ ವೇಳೆಗೆ ಬೈಕ್‌ನಲ್ಲಿ ಪುತ್ತೂರಿಗೆ ತೆರಳುತ್ತಿದ್ದ ವೇಳೆ ಭಕ್ತಕೋಡಿ (ಬಡಕೋಡಿ) ತಿರುವು ಬಳಿಯಿಂದ ಜೀಪಿನಲ್ಲಿ ಹಿಂಬಾಲಿಸಿಕೊಂಡು ಬಂದ ತಂಡ ಕೊಡಿನೀರು ಬಳಿ ಜೀಪನ್ನು ತನ್ನ ಬೈಕ್‌ಗೆ ಅಡ್ಡವಿಟ್ಟು ತಡೆದು ನಿಲ್ಲಿಸಿದೆ. ನೀವು ಕೂರ ಮಸೀದಿಗೆ ಬರುವಂತೆ ಕೂರ ತಂಙಳ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕೂರ ಮಸೀದಿಯ ಅಧ್ಯಕ್ಷರು ನಿಮ್ಮನ್ನು ಕರೆತರಲು ನಮ್ಮನ್ನು ಕಳುಹಿಸಿದ್ದಾರೆ ಎಂದು ತಂಡದ ಇಬ್ಬರು ಹೇಳಿದ್ದು, ಆ ವೇಳೆ ತಾನು ನಾನೇ ಪುತ್ತೂರಿಗೆ ಹೋಗಿ ಆ ಬಳಿಕ ಕೂರ ಮಸೀದಿಗೆ ಬರುತ್ತೇನೆ ಎಂದಿದ್ದೆ. ಆ ವೇಳೆ ತನ್ನ ಮೊಬೈಲ್ ಅನ್ನು ಕಿತ್ತುಕೊಂಡ ತಂಡ ನನ್ನನ್ನು ಬಲಾತ್ಕಾರವಾಗಿ ಜೀಪಿಗೆ ಎಳೆದು ಹಾಕಿ ಕೂರ ಮಸೀದಿಗೆ ಕರೆದೊಯ್ದ ದಾರಿಯುದ್ದಕ್ಕೂ ಕೈಯಿಂದ ಯದ್ವಾತದ್ವಾ ಹೊಡೆದು ಚಿತ್ರಹಿಂಸೆ ನೀಡಿದೆ. ಅಲ್ಲದೆ ತಂಡದ ಅಪರಿಚಿತ ವ್ಯಕ್ತಿಯೊಬ್ಬ ತಲವಾರು ತೋರಿಸಿ ಸಿ. ಎಂ. ಉಸ್ತಾದರನ್ನು ಕೊಂದ ರೀತಿಯಲ್ಲಿಯೇ ನನ್ನನ್ನು ಕೊಲೆಗೈಯುವುದಾಗಿ ಬೆದರಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ಕೂರ ಮಸೀದಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ತನ್ನನ್ನು ಕೂಡಿ ಹಾಕಿದ ತಂಡ ಅಲ್ಲಿಯೂ ಚಿತ್ರ ಹಿಂಸೆ ನೀಡಿದೆ. ತನ್ನನ್ನು ಕೂರ ಮಸೀದಿಗೆ ಕೊಂಡೊಯ್ದು ಕೂಡಿ ಹಾಕಿದ ೧೦ ನಿಮಿಷದೊಳಗಾಗಿ ಅಲ್ಲಿಗೆ ಆಗಮಿಸಿದ ಕೂರ ತಂಙಳ್ ನೀನು ತಪ್ಪು ಮಾಡಿರುವ ಧರ್ಮಭ್ರಷ್ಟ (ಕಾಫರ್) ಎಂದು ನಿಂದಿಸಿ, ನಾನು ಬಿಟ್ಟರೆ ಇವರು ನಿನ್ನನ್ನು ಕೊಲ್ಲುತ್ತಾರೆ ಎಂದು ಹೇಳುತ್ತಾ ತಂಡಕ್ಕೆ ಪ್ರಚೋದನೆ ನೀಡಿರುವುದಾಗಿ ಅವರು ಆರೋಪಿಸಿದ್ದಾರೆ.
ಘಟನೆ ವೇಳೆ ಕೂರ ಮಸೀದಿಯಲ್ಲಿ ಸುಮಾರು ೫೦೦ ಮಂದಿ ಸೇರಿದ್ದು, ಇದೊಂದು ಪೂರ್ವಯೋಜಿತ ಕೃತ್ಯ. ಕೂರ ತಂಙಳ್ ಅವರೇ ಈ ಪ್ರಕರಣದ ಪ್ರಮುಖ ಆರೋಪಿ ಎಂದು ಪುತ್ತೂರಿನ ಮಹಾವೀರ ಅಸ್ಪತ್ರೆಯಲ್ಲಿ ದಾಖ ಲಾಗಿರುವ ಹುಸೈನ್ ದಾರಿಮಿ ಆರೋಪಿಸಿದ್ದಾರೆ.
ಎಸ್ಸೆಸ್ಸೆಫ್ ಮುಖಂಡ ಅಬ್ದುಲ್ ಅಝೀಝ್ ಸಖಾಫಿ ಅವರ ಮೇಲೆಯೂ ತನಗೆ ಗುಮಾನಿಯಿದೆ ಎಂದು ಹುಸೈನ್ ದಾರಿಮಿ ಶಂಕೆ ವ್ಯಕ್ತಪಡಿಸಿದ್ದಾರೆ. ಪುತ್ತೂರಿನಲ್ಲಿ ಇತ್ತೀಚೆಗೆ ತಾನು ಹಾಗೂ ಸುನ್ನಿ ರಕ್ಷಣಾ ಸಮಿತಿಯ ಮುಖಂ ಡರು ಸುದ್ದಿಗೋಷ್ಠಿ ನಡೆಸಿ ಕೂರ ತಂಙಳ್ ವಿರುದ್ದ ಮಾತನಾಡಿದ್ದು, ಇದೇ ದ್ವೇಷದ ಹಿನೆಲೆಯಲ್ಲಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹುಸೈನ್ ದಾರಿಮಿ ತಿಳಿಸಿದ್ದಾರೆ. ಘಟನೆ ಕುರಿತು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಹುಸೈನ್ ದಾರಿಮಿ ಕಾಣೆಯಾದ ಬಗ್ಗೆ ಅವರ ಪತ್ನಿ ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕೂರ ಮಸೀದಿಗೆ ತೆರಳಿ ಹುಸೈನ್ ದಾರಿಮಿಯನ್ನು ಠಾಣೆಗೆ ಕರೆದುಕೊಂಡು ಬಂದು ಬಳಿಕ ಆಸ್ಪತ್ರೆಗೆ ದಾಖಲಿಸಿದ್ದರೆಂದು ಸಂಪ್ಯ ಠಾಣಾಧಿಕಾರಿ ನಾಗರಾಜ್ ತಿಳಿಸಿದ್ದಾರೆ.
ದಾರಿಮಿ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲು
ಉಪ್ಪಿನಂಗಡಿ: ಕೂರ ತಂಞಳ್ ವಿರುದ್ಧ ವಿವಾದಿತ ಹೇಳಿಕೆ ನೀಡಿದ ಎಸ್.ಬಿ. ದಾರಿಮಿ ವಿರುದ್ಧ ಎಸ್.ಎಸ್.ಎಫ್ ಸಂಘಟನೆ ಕಾರ‍್ಯ ಕರ್ತರು ಠಾಣೆಯೆದುರು ಮೆರವಣಿಗೆ ನಡೆಸಿ ದೂರು ನೀಡಿದರು.
ದೂರಿನಲ್ಲಿ ಕೇಂದ್ರ ಜುಮಾ ಮಸೀದಿ ಉಪ್ಪಿನಂಗಡಿಯ ಎಸ್.ಬಿ. ಮಹಮ್ಮದ್ ದಾರಿಮಿ, ಸರ್ಫುದ್ಧೀನ್ ತಂಞಳ್ ಸಾಲ್ಮರ, ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ, ಸಂಪ್ಯದ ಅಬ್ದುಲ್ ಹಮೀದ್ ದಾರಿಮಿ, ಪುತ್ತೂರು ಸೈಯ್ಯದ್ ಯಯ್ಯಾ ತಂಞಳ್ ಇವರು ಖಾಝಿ ಹಾಗೂ ಆಧ್ಯಾತ್ಮಿಕ ನೇತಾರರು ಆಗಿರುವ ಸೈಯ್ಯದ್ ಫಝಲ್ ಕೋಯ ತಂಞಳ್‌ರವರ ಮೇಲೆ ಮಾನಹಾನಿಕರ ಆರೋಪ ಮಾಡಿ ಮುಸ್ಲಿಂ ಬಾಂಧವರ ನಡುವೆ ಗುಂಪುಗಳನ್ನು ಸೃಷ್ಟಿಸಿ ದ್ವೇಷವನ್ನುಂಟು ಮಾಡಿ ಸೌಹಾರ್ದತೆ ಬಾಧಕ ಕೃತ್ಯವನ್ನು ಮಾಡಿದ್ದಾರೆ ಎಂದು ಆರೋಪಿಸಿದ ಕಾರ‍್ಯಕರ್ತರು ದಾರಿಮಿ ವಿರುದ್ಧ ದೂರನ್ನು ದಾಖಲಿಸಿದರು.
ಬಳಿಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ದಾರಿಮಿ ಗುಂಪು ತನ್ನ ಸ್ವಾರ್ಥಕ್ಕಾಗಿ ಕೂರ ತಂಞಳ್‌ರವರಿಗೆ ತೀವ್ರ ನೋವುಂಟು ಮಾಡಿದ್ದಾರೆ. ಇದರಿಂದ ಮುಸ್ಲಿಮರಲ್ಲಿ ಎರಡು ಪಂಗಡವನ್ನು ಸೃಷ್ಟಿಸಿ ಸೌಹಾರ್ದತೆಗೆ ಧಕ್ಕೆಯುಂಟು ಮಾಡಿದ್ದಾರೆ. ಈ ರೀತಿ ವಿಷಬೀಜ ಬಿತ್ತುವವರಿಗೆ ಉಗ್ರ ಸಂಘಟನೆಗಳೊಂದಿಗೆ ಕೈವಾಡವಿದೆಯೆಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದರಿಂದಾಗಿ ಸಮಾಜದಲ್ಲಿ ಅಶಾಂತಿ ನೆಲೆಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಬೆಳ್ತಂಗಡಿಯಲ್ಲೂ ದೂರು ದಾಖಲು
ಬೆಳ್ತಂಗಡಿ: ಕೂರ ತಂಙಳ್‌ರವರ ಬಗ್ಗೆ ಅವಹೇಳನ ಹಾಗೂ ಮಾನಹಾನಿ ಆರೋಪಣೆ ಮಾಡಿ ಪತ್ರಿಕಾಗೋಷ್ಠಿ ನಡೆಸಿದ ಬಗ್ಗೆ ತಾಲೂಕು ಸುನ್ನೀ ಸಂಘಟನೆಗಳ ಒಕ್ಕೂಟ ೫ ಮಂದಿಯ ಮೇಲೆ ದೂರು ನೀಡಿದೆ.
ಉಪ್ಪಿನಂಗಡಿ ಜುಮ್ಮ ಮಸೀದಿ ಖತೀಬ ಎಸ. ಬಿ. ಮಹಮ್ಮದ ದಾರಿಮಿ, ಪುತ್ತೂರು ರೆಂಜಲಾಡಿ ಹುಸೈನ ದಾರಿಮಿ, ಸಂಪ್ಯದ ಅಬ್ದುಲ ಹಮೀದ ದಾರಿಮಿ, ಸಾಲ್ಮರ ಶರ್ಪುದ್ದೀನ ತಂಙಳ್, ಕಲ್ಲೇಗ ಸುಲೈಮಾನ ಮೌಲವಿ ಎಂಬುವರು ನಮ್ಮ ಸಹಾಯಕ ಹಾಗೂ ಆಧ್ಯಾತ್ಮಿಕ ನೇತಾರರಾದ ಫಝಲ ಕೋಯಮ್ಮ ತಂಙಳ್‌ರವರ ಮೇಲೆ ಮಾನಹಾನಿಯಾದ ಆರೋಪವನ್ನು ಮಾಡಿ ಮುಸ್ಲಿಂ ಗುಂಪುಗಳ ಮಧ್ಯೆ ದ್ವೇಷವನ್ನುಂಟು ಮಾಡಿ ಸೌಹಾರ್ದತೆಗೆ ಬಾಧಕವಾದ ಕೃತ್ಯವನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮುಸ್ಲಿಂ ಸಮಾಜಕ್ಕೆ ಅಪಮಾನ ಮಾಡಿ ವಿಷ ಬೀಜವನ್ನು ಬಿತ್ತಿದ ಈ ಐದು ಮಂದಿಯ ವಿರುದ್ದ ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಒಕ್ಕೂಟದ ಅಧ್ಯಕ್ಷರು ಬೆಳ್ತಂಗಡಿ ಪೊಲೀಸ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿಗಳ ಸೆರೆಗೆ ಆಗ್ರಹಿಸಿ ಪ್ರತಿಭಟನೆ
ಹುಸೈನ್ ದಾರಿಮಿ ರೆಂಜಲಾಡಿಯವರನ್ನು ಕೂರ ತಂಙಳ್ ಪರ ಗುಂಪೊಂದು ಕರೆದೊಯ್ದು ಹಲ್ಲೆ ನಡೆಸಿ ಕೂರ ಮಸೀದಿಯಲ್ಲಿ ಕೂಡಿ ಹಾಕಿದ್ದು, ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿ ಎಸ್ಕೆಎಸ್ಸೆಸ್ಸೆಫ್ ಸಂಘಟನೆಯ ನೂರಾರು ಮಂದಿ ಸಂಪ್ಯ ಠಾಣೆಯ ಎದುರು ಸೋಮವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದರು. ಘಟನೆಯ ಪ್ರಮುಖ ಸೂತ್ರಧಾರರಾದ ಕೂರ ತಂಙಳ್ ಅವರನ್ನು ಯಾರ ಒತ್ತಡಕ್ಕೂ ಮಣಿಯದೆ ತಕ್ಷಣ ಬಂಧಿಸಬೇಕು ಎಂದು ಪ್ರತಿಭಟನಾ ಕಾರರು ಆಗ್ರಹಿಸಿದರು. ಕೂರ ತಂಙಳ್ ಗೂಂಡಾಗಿರಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.
ಒಂದು ಹಂತದಲ್ಲಿ ಠಾಣೆಯೊಳಗೆ ಮುತ್ತಿಗೆ ಹಾಕಿದ ಹುಸೈನ್ ದಾರಿಮಿ ಬೆಂಬಲಿಗರು ಪೊಲೀಸರು ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸತೊಡಗಿದರು. ಆ ವೇಳೆ ಪೊಲೀಸರು ಅವರನ್ನು ಮನವೊಲಿಸಿ ಠಾಣೆಯ ಆವರಣದಿಂದ ಹೊರ ಕಳುಹಿಸಿದರು.
ಇದೇ ವೇಳೆ ಅಲ್ಲಿಗೆ ಆಗಮಿಸಿದ ಎಸ್ಸೆಸ್ಸೆಫ್ ಕಾರ್ಯಕರ್ತನೊಬ್ಬನಿಗೆ ಪ್ರತಿಭಟನಕಾರರು ಹಲ್ಲೆ ನಡೆಸಿದ ಘಟನೆಯೂ ನಡೆಯಿತು.
ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅಬ್ಬಾಸ್ ದಾರಿಮಿ, ಉಮ್ಮರ್ ದಾರಿಮಿ ಬಪ್ಪಳಿಗೆ, ಅಝೀಝ್ ದಾರಿಮಿ ಕಲ್ಲೇಗ, ಸಿರಾಜುದ್ದೀನ್ ಫೈಝಿ ಬಪ್ಪಳಿಗೆ, ಉಮ್ಮರ್ ದಾರಿಮಿ ಬಪ್ಪಳಿಗೆ, ರಶೀದ್ ಹಾಜಿ ಪರ್ಲಡ್ಕ, ಜಲೀಲ್ ಫೈಝಿ, ಶರೀಫ್ ಸಾಲ್ಮರ, ಎಂ.ಎ.ಹುಸೈನ್ ಕೆನರಾ, ಎಲ್.ಟಿ.ರಜಾಕ್, ಕೆ.ಎಂ. ಬಾವ, ಅದ್ದು ಯಾನೆ ಅಬ್ದುಲ್ ರಹಿಮಾನ್ ಪಡೀಲು ಮತ್ತಿತರರು ಇದ್ದರು.
ಆರೋಪಿಗಳ ಬಂಧನಕ್ಕೆ ವಿವಿಧ ಸಂಘಟನೆಗಳ ಆಗ್ರಹ
ಹುಸೈನ್ ದಾರಿಮಿ ಮೇಲೆ ನಡೆದ ಹಲ್ಲೆಯನ್ನು ದಾರಿಮೀಸ್ ಅಸೋಶಿ ಯೇಶನ್ ಕರ್ನಾಟಕ, ತಾಲೂಕು ಎಸ್ಕೆಎಸ್ಸೆಸ್ಸೆಫ್, ತಾಲೂಕು ದಾರಿಮೀಸ್ ಅಸೋಶಿಯೇಶನ್, ತಾಲೂಕು ಫೈಝಿ ಅಸೋಶಿಯೇಶನ್, ರೇಂಜ್ ಮದ್ರಸ ಮೆನೇಜ್‌ಮೆಂಟ್ ಅಸೋಸಿಯೇಶನ್, ತಾಲೂಕು ರೇಂಜ್ ಮುಅಲ್ಲಿಂ ಅಸೋಶಿಯೇಶನ್ ಖಂಡಿಸಿದೆ.
ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ಮತ್ತು ಘಟನೆ ನಡೆಯಲು ಪ್ರಚೋದನೆ ನೀಡಿದವರನ್ನು ಕೂಡಲೇ ಬಂಧಿಸಬೇಕೆಂದು ದಾರಿಮಿಸ್ ಅಸೋಸಿಯೇಶನ್‌ನ ಮೂಸೆ ಹಾಜಿ ಮತ್ತು ಎಸ್ಕೆಎಸ್ಸೆಸ್ಸೆನ ಜಿಲ್ಲಾಧ್ಯಕ್ಷ ಅಬ್ಬಾಸ್ ದಾರಿಮಿ ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ