ಮಂಗಳವಾರ, ಜನವರಿ 11, 2011

ಅಪಘಾತಕ್ಕೀಡಾದ ಬಾಲಕಿಯ ಕೇಸಿಗೆ ವಕೀಲರ ಹಿಂದೇಟು

ಮಂಗಳೂರು: ರಸ್ತೆ ಬದಿ ನಿಂತಿದ್ದ ಬಾಲಕಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಬಾಲಕಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದಾಳೆ. ಬಡತನದಿಂದ ಕಂಗೆಟ್ಟಿರುವ ಬಾಲಕಿಯ ಹೆತ್ತವರು ನ್ಯಾಯವಾದಿಯೊಬ್ಬರ ನಿರೀಕ್ಷೆ ಯಲ್ಲಿದ್ದರೂ ಇನ್ಶೂರೆನ್ಸ್ ಕಡಿಮೆ ಸಿಗುವ ಆತಂಕದಲ್ಲಿರುವ ನ್ಯಾಯವಾದಿಗಳು ಕೇಸು ತೆಗೆದುಕೊಳ್ಳದೆ ಹಿಂದೇಟು ಹಾಕುತ್ತಿರುವ ಅಮಾನವೀಯ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಅಪಘಾತಕ್ಕೀಡಾದ ಬಾಲಕಿಯನ್ನು ಮಂಜೇಶ್ವರ ವರ್ಕಾಡಿಯ ಪುರುಷನ್‌ಕೋಡಿ ನಿವಾಸಿ ನೆಬಿಸಾ ಮತ್ತು ಅಬ್ಬಾಸ್ ದಂಪತಿಯ ಪುತ್ರಿ ಆಯಿಶತ್ತುಲ್ ಸಫ್ವಾನ(೮) ಎಂದು ಗುರುತಿಸಲಾಗಿದೆ. ದಂಪತಿಯ ಮೂವರು ಮಕ್ಕಳ ಪೈಕಿ ಸಫ್ವಾನ ಎರಡನೆಯವಳು. (ಮೊದಲ ಗಂಡು ಮಗುವಿಗೆ ೧೦ ವರ್ಷ, ಮೂರನೇಯ ಹೆಣ್ಣು ಮಗುವಿಗೆ ಮೂರು ವರ್ಷ) ಕಳೆದ ತಿಂಗಳು ಐದರಂದು ಮಂಜೇಶ್ವರದ ಮರ್ಸಿ ಹಾಲಿನಲ್ಲಿ ನಡೆದ ಸಂಬಂಧಿಕರ ವಿವಾಹ ಸಮಾರಂಭದಲ್ಲಿ ಭಾಗವಹಿಸಲೆಂದು ದೊಡ್ಡಮ್ಮ ಖತೀಜಮ್ಮರ ಜೊತೆ ಸಫ್ವಾನಳೂ ಹೋಗಿದ್ದಳು. ಸಮಾರಂಭದ ಬಳಿಕ ಮನೆಗೆ ಮರಳಲೆಂದು ದೊಡ್ಡಮ್ಮರ ಜೊತೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಸಫ್ವಾನಾಳಿಗೆ ಡಿಕ್ಕಿ ಹೊಡೆದಿತ್ತು.
ಇದರ ಪರಿಣಾಮವಾಗಿ ತಲೆ ಮತ್ತು ಇತರ ಭಾಗಗಳಿಗೆ ಗಂಭೀರವಾಗಿ ಗಾಯ ಗೊಂಡಿದ್ದ ಆಕೆಯನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಕಳೆದ ೩೬ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಫ್ವಾನಾಳ ಕೈ-ಕಾಲುಗಳು ಸಂಪೂರ್ಣವಾಗಿ ಬಲ ಕಳೆದುಕೊಂಡಿದ್ದು ಹಿಂದಿನ ಸ್ಥಿತಿಗೆ ತರಲು ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಬಾಲಕಿಯ ಸ್ಥಿತಿಯನ್ನು ಕಂಡು ಮರುಗಿದ ಕಾರು ಮಾಲಕ ೧೫ ಸಾವಿರ ನೀಡಿ ಮಾನವೀಯತೆ ಮೆರೆದರೂ ಆ ಹಣ ಚಿಕಿತ್ಸೆಯ ಒಂದೆರಡು ಚುಚ್ಚು ಮದ್ದಿನ ಖರ್ಚಿಗೂ ಸಾಕಾಗಿಲ್ಲ.
ಇದುವರೆಗೆ ಚಿಕಿತ್ಸೆಯ ಖರ್ಚು ಎರಡೂವರೆ ಲಕ್ಷವನ್ನು ಮೀರಿದೆ. ಇದರ ಪೈಕಿ ಅಲ್ಪಸ್ವಲ್ಪ ಹಣವನ್ನು ಆಸ್ಪತ್ರೆಗೆ ಭೇಟಿ ನೀಡಿದ ದಾನಿಗಳು ನೀಡಿದ್ದರೂ ಅದು ೪೦ ಸಾವಿರವನ್ನೂ ದಾಟಿಲ್ಲ. ಕೂಲಿ ಕೆಲಸ ಮಾಡುತ್ತಿರುವ ಅಬ್ಬಾಸ್ ಮಗಳಿಗಾಗುತ್ತಿರುವ ಖರ್ಚಿನ ಬಗ್ಗೆ ನೆನೆದೇ ಕಂಗಾಲಾಗಿದ್ದಾರೆ. ಇನ್ಶೂರೆನ್ಸ್ ಹಣವಾದರೂ ಸಿಗಲಿ ಎಂಬ ನಿರೀಕ್ಷೆಯಿಂದ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ದುರದೃಷ್ಟವಶಾತ್ ಇದುವರೆಗೂ ಯಾವುದೇ ನ್ಯಾಯವಾದಿಗಳು ಇವರ ಕೇಸನ್ನು ತೆಗೆದುಕೊಳ್ಳಲು ಮುಂದಾಗಿಲ್ಲ. ಈಗಾಗಲೇ ಆಸ್ಪತ್ರಗೆ ಬಂದು ಬಾಲಕಿಯನ್ನು ಭೇಟಿಯಾಗಿರುವ ನ್ಯಾಯವಾದಿಗಳು ಆಕೆಯ ದಯನೀಯ ಪರಿಸ್ಥಿತಿಯನ್ನು ಕಂಡು ಕೇಸು ತೆಗೆದುಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ಕಣೀರು ಸುರಿಸುತ್ತಾ ಹೇಳುವ ನೆಬಿಸಾ ಮಗಳ ಭವಿಷ್ಯವನ್ನು ನೆನೆಸಿ ಕಂಗಾಲಾಗಿದ್ದಾರೆ. ಮೂರನೇ ತರಗತಿ ಕಲಿಯುತ್ತಿರುವ ಬಾಲಕಿಗೆ ಸಾಕಷ್ಟು ಆಸೆ-ಆಕಾಂಕ್ಷೆಗಳಿವೆ. ಆದರೆ ಅದು ಈಡೇರಬೇಕಾದರೆ ದಾನಿಗಳ ನೆರವು ಅಗತ್ಯ. ದಾನಿಗಳು ಯುನಿಟಿ ಆಸ್ಪತ್ರೆ ಅಥವಾ ಸಫ್ವಾನಾಳ ಸಿಂಡಿಕೇಟ್ ಬ್ಯಾಂಕಿನ ವರ್ಕಾಡಿ ಶಾಖೆಯ ಎಸ್.ಬಿ.೪೨೨೮೨೨೦೦೦೯೧೮೨೦ ಇಲ್ಲಿಗೆ ಹಣ ಜಮಾಯಿಸಬಹುದು. ಅಥವಾ ಸಫ್ವಾನಾಳ ತಾಯಿ ನೆಬಿಸಾ ಇವರ ಮೊಬೈಲ್ ಸಂಖ್ಯೆ ೯೭೩೧೪೧೨೮೯೬ ಇದನ್ನು ಸಂಪರ್ಕಿಸಬಹುದು.
ಕೇಸು ಪಡೆಯಲು ಹಿಂಜರಿಕೆ ಏಕೆ?
ಯಾವುದೇ ಅಪಘಾತ ನಡೆದರೂ ನ್ಯಾಯವಾದಿಗಳ ಸಹಾಯಕರ ದಂಡೇ ಆಸ್ಪತ್ರೆಗೆ ಧಾವಿಸುತ್ತದೆ. ಆದರೆ ಸಫ್ವಾನಾಳ ಕೇಸು ತೆಗೆದುಕೊಳ್ಳಲು ಇದುವರೆಗೂ ಯಾವುದೇ ನ್ಯಾಯವಾದಿಗಳು ಮುಂದಾಗದಿರುವ ಹಿಂದಿನ ರಹಸ್ಯವನ್ನು ನ್ಯಾಯವಾದಿಯೊಬ್ಬರು ತಿಳಿ ಸಿದ್ದಾರೆ. ಯಾವುದೇ ಅಪಘಾತ ನಡೆದರೂ ಆ ಕೇಸನ್ನು ವಹಿಸಿಕೊಳ್ಳುವ ನ್ಯಾಯವಾದಿಗಳು ಗಾಯಾಳುವಿನ ಖರ್ಚಿನ ಹಣವನ್ನು ಭರಿಸಿ ವಿಮೆ ಸಿಕ್ಕಿದ ಬಳಿಕ ತಾವು ಪಾವತಿಸಿದ ಹಣವನ್ನು ಪಡೆಯುತ್ತಾರೆ. ಯುವಕರು ಅಥವಾ ಕೆಲಸದಲ್ಲಿರುವವರು ಅಪಘಾತಕ್ಕೀಡಾದರೆ ಅವರಿಗೆ ನಾಲ್ಕರಿಂದ ಐದು ಲಕ್ಷ ವಿಮೆ ಪರಿಹಾರ ಸಿಕ್ಕರೆ ಎರಡರಿಂದ ಎರಡೂವರೆ ಲಕ್ಷ ಆಸ್ಪತ್ರೆಯಲ್ಲಿ ಖರ್ಚಾದರೂ ಹಣ ಉಳಿಯುತ್ತದೆ. ಆದರೆ ಸಣ್ಣ ಮಕ್ಕಳು ಅಪಘಾತಕ್ಕೀಡಾದರೆ ಒಂದರಿಂದ ಒಂದೂವರೆ ಲಕ್ಷ ವಿಮೆ ಸಿಗುತ್ತದೆ. ಮಂಜೇಶ್ವರದಲ್ಲಿ ಅಪಘಾತಕ್ಕೀಡಾದ ಬಾಲಕಿಗೂ ಅಷ್ಟೇ ಮೊತ್ತದ ವಿಮೆ ಸಿಗಲಿದ್ದು ಈಗಾಗಲೇ ಆಕೆಯ ಚಿಕಿತ್ಸೆಗೆ ಎರಡೂವರೆ ಲಕ್ಷ ಖರ್ಚಾಗಿದೆ. ಕೇಸನ್ನು ವಹಿಸಿಕೊಂಡ ನ್ಯಾಯವಾದಿಗಳು ಆಕೆಯ ಖರ್ಚು ನೋಡಿಕೊಂಡರೆ ನಷ್ಟವಾಗುವುದರಿಂದ ನ್ಯಾಯವಾದಿಗಳು ಕೇಸು ತೆಗೆದುಕೊಳ್ಳದೆ ಮಾನವೀಯತೆಯನ್ನು ಮರೆತಿದ್ದಾರೆನ್ನುವ ಮಾಹಿತಿ ಪತ್ರಿಕೆಗೆ ಲಭಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ