ಸೋಮವಾರ, ಜನವರಿ 10, 2011

ಗೋಹತ್ಯೆ ನಿಷೇಧಿಸಿದರೆ ಜೀವ ಉಳಿಸುವ ಔಷಧಕ್ಕೆ ಪರದಾಟ

ಬೆಂಗಳೂರು : ಗೋಹತ್ಯೆ ನಿಷೇಧಿಸಿದರೆ ಹೃದ್ರೋಗ, ಗ್ಯಾಂಗ್ರಿನ್‌, ಮಿದುಳು ಸರ್ಜರಿಯಂತಹ ಶಸ್ತ್ರಚಿಕಿತ್ಸೆ, ಮಧುಮೇಹ, ರಕ್ತದೊತ್ತಡ, ಅಸ್ತಮಾ, ರಕ್ತಹೀನತೆಯಂತಹ ದೇಶವನ್ನು ಕಾಡುತ್ತಿರುವ ಕಾಯಿಲೆಗಳಿಗೆ ಔಷಧ ಒದಗಿಸಲು ಪರದಾಡಬೇಕಾಗುತ್ತದೆ ಎಂದು ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ ಹೇಳಿದರು.

ಸುಜನ ಸಂಸ್ಥೆ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ 'ಗೋಹತ್ಯಾ ನಿಷೇಧ ಕಾನೂನು ಬೇಕೇ? ಬೇಡವೇ?' ಚಿಂತನಾಗೋಷ್ಠಿಯಲ್ಲಿ ಮಾತನಾಡಿದರು.

ಗೋಮಾಂಸವು ಆಹಾರವಾಗಿ ಮಾತ್ರ ಬಳಕೆಯಲ್ಲಿಲ್ಲ. ಗೋವಿನ ಮಾಂಸ, ಮಜ್ಜೆ, ರಕ್ತ, ಚರ್ಮವನ್ನು ನೂರಾರು ಔಷಧ ತಯಾರಿಕೆಗೆ ಬಳಸಲಾಗುತ್ತಿದೆ. ಗೋವುಗಳು ಸಾಯಿಸದೇ ಇದ್ದರೆ ಸಿನಿಮಾ ನಟಿಯರು ಅಳಲು ಸಾಧ್ಯವಿಲ್ಲ, ಕಾರಿನ ಬ್ರೇಕ್‌ ಹಾಕಲು ಸಾಧ್ಯವಿಲ್ಲವೆಂದರು.


ಗೋಮಾಂಸ ಏಕೆ?

ಹೃದ್ರೋಗಿಗಳಲ್ಲಿ ಹಾಗೂ ಗ್ಯಾಂಗ್ರಿನ್‌ ಆದವರಿಗೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಹಸುವಿನ ತ್ವಾಸನಾಳದ ಒಳಪೊರೆಯಿಂದ ತಯಾರಿಸುವ ಹೆಪ್ಪಾನಿನ್‌ ಔಷಧವೇ ಬೇಕು. ಇದಿಲ್ಲದೇ ಹೃದಯ ಶಸ್ತ್ರಚಿಕಿತ್ಸೆ ಅಸಾಧ್ಯ. ದೇಶದಲ್ಲಿ ಬಹುವಾಗಿ ಕಾಡುತ್ತಿರುವ ಅಸ್ತಮಾ ಕಾಯಿಲೆಗೆ ಸದ್ಯಕ್ಕೆ ಸಿದೌœಷಧವೆಂದು ನಂಬಿರುವ ಸ್ಟಿರಾಯ್ಡನ್ನು ಹಸುವಿನ ಆಡ್ರಿನಾವಿಲ್‌ ಬಳಸಿ ಮಾಡಲಾಗುತ್ತದೆ. ಕಡಿಮೆ ರಕ್ತದೊತ್ತಡ ಇರುವ ರೋಗಿಗಳ ನಾಡಿಬಡಿತವನ್ನು ಹೆಚ್ಚಿಸಲು ಎಪಿನೇಷನ್‌ ಎಂಬ ಗೋದೇಹದ ಪದಾರ್ಥವನ್ನು ಬಳಸಲಾಗುತ್ತದೆ. ಆ್ಯಂಜಿಯೋ ಪ್ಲಾಸ್ಟಿ ಚಿಕಿತ್ಸೆ ನೀಡುವಾಗ ಕೂಡ ಇದು ಅತ್ಯಗತ್ಯ ಎಂದರು.

ಜೀವಕೋಶಗಳಿಗೆ ಶಕ್ತಿವರ್ಧಕವಾಗುವ ಬಿ-12 ಜೀವಸತ್ವವನ್ನು ದನದ ಲಿವರ್‌ನಿಂದ ತಯಾರಿಸಲಾಗುತ್ತದೆ. ಬಿ-12 ಸಸ್ಯಗಳಿಂದ ಸಿಗುತ್ತದೆಯಾದರೂ ಅದು ಬಹಳ ಕಡಿಮೆ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಗೋಮಾಂಸವನ್ನೇ ಬಳಸುವುದು ಅನಿವಾರ್ಯ ಎಂದು ವಿವರಿಸಿದರು.

ವಿಶ್ವದಲ್ಲೇ ಅತಿಹೆಚ್ಚು ಮಧುಮೇಹಿಗಳಿರುವ ರಾಷ್ಟ್ರ ಭಾರತ. ಡಯಾಬಿಟಿಸ್‌ ರೋಗಿಗಳಿಗೆ ದಿವ್ಯ ಔಷಧಿಯಾಗಿರುವ ಇನ್ಸುಲಿನ್‌ನ್ನು ಗೋಮಾಂಸದ ಫ್ರಾಂಕಿಯಾಸ್‌ ಬಳಸಿಯೇ ಉತ್ಪಾದಿಸಲಾಗುತ್ತದೆ. ಮಂಡಿನೋವು, ರುಮ್ಯಾಟಿಕ್‌ ಕಾಯಿಲೆಗಳಿಗೆ ಹಸುವಿನ ಮೂಗಿನ ಹೊಳ್ಳೆಯ ಮಧ್ಯದಲ್ಲಿರುವ ಪದಾರ್ಥವನ್ನು ಬಳಸಿ ಔಷಧ ತಯಾರಿಸಲಾಗುತ್ತದೆ. ಮಿದುಳು ಸರ್ಜರಿ ಮಾಡುವಾಗ ಬಳಸುವ ಬ್ರೈನ್‌ ಡ್ಯುರಾಮಾಟರ್‌ನ್ನು ಹಸು, ಎತ್ತು, ಎಮ್ಮೆ, ಕೋಣದ ಮಿದುಳಿಗೆ ಹೊಂದಿಕೊಂಡಿರುವ ಸಾ³ಂಜಿನಂತಹ ವಸ್ತುವನ್ನೇ ಬಳಕೆಮಾಡಲಾಗುತ್ತದೆ. ಡ್ಯುರಾಮಾಟರ್‌ ಇಲ್ಲದೇ ಯಾವುದೇ ವೈದ್ಯ ಬ್ರೈನ್‌ ಸರ್ಜರಿ ಮಾಡಲು ಮುಂದಾಗುವುದೇ ಇಲ್ಲ ಎಂದು ವಿವರಿಸಿದರು.

ಫ್ಲೆವುಡ್‌ ಅಂಟಿಸಲು ಬೇಕಾದ ಅಂಟು ತಯಾರಿಸಲು, ಬೆಂಕಿ ನಂದಿಸಲು, ರಾಸಾಯನಿಕ ಸಸಾರಜನಕ ತಯಾರಿಕೆಗೆ ಗೋವಿನ ರಕ್ತವನ್ನು ಬಳಕೆ ಮಾಡಲಾಗುತ್ತದೆ. ರಕ್ತ ಹೀನತೆಯಿಂದ ಬಳಲುತ್ತಿರುವ ಮಕ್ಕಳಿಗೆ, ಗರ್ಭಿಣಿಯರಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಒದಗಿಸುವ ಕಬ್ಬಿಣಾಂಶದ ಮಾತ್ರೆಗಳ ಏಕೈಕ ಕಚ್ಚಾವಸ್ತು ಗೋವಿನ ರಕ್ತವೇ ಆಗಿದೆ.

ಕಾರ್‌ನ ಬ್ರೇಕ್‌ಗೆ ಬಳಸುವ ಕೀಲೆಣ್ಣೆ, ವಿಮಾನಕ್ಕೆ ಬಳಸುವ ಕೀಲೆಣ್ಣೆ, ಮುಂಬತ್ತಿ ತಯಾರಿಕೆಗೆ ಬಳಕೆಯಾಗುವ ಟ್ಯಾಲೋ ತೈಲವೂ ಗೋಮೂಲದ್ದೇ ಎಂದು ಹೇಳಿದ ನಾಗೇಶಹೆಗಡೆ, ಐ ಡ್ರಾಪ್‌, ಇಯರ್‌ ಡ್ರಾಪ್‌, ಬಣ್ಣದ ಇಂಕ್‌ ತಯಾರಿಕೆಗೆ ಬಳಸುವ ಗ್ಲಿಸರಿನ್‌ ಗೋಮಾಂಸದ ಉಪ ಉತ್ಪನ್ನವೇ ಆಗಿದೆ ಎಂದರು.

ಆಹಾರ ಪ್ಯಾಕೇಜಿಂಗ್‌ಗೆ ಬಳಸುವ ಎಣ್ಣೆ ಕಾಗದ, ಮಾತ್ರೆಗಳ ಕೋಟಿಂಗ್‌, ಚೂÂಯಿಂಗ್‌ ಗಮ್ಗಳಿಗೆ ಹಸುವಿನ ಗೊರಸು ಹಾಗೂ ಕೋಡಿನಿಂದ ತೆಗೆದ ಪದಾರ್ಥವನ್ನೇ ಬಳಸಲಾಗುತ್ತದೆ. ಆಯಿಂಟ್‌ ಮೆಂಟ್‌, ಪೈನ್‌ ಕಿಲ್ಲರ್‌, ಪ್ಲಾಸ್ಟಿಕ್‌ ಸರ್ಜರಿಗೆ, ವೃದ್ಧರ ಮೂತ್ರ ನಿಯಂತ್ರಣಕ್ಕೆ ಬಳಸುವ ಔಷಧಗಳನ್ನು ಗೋವಿನ ಚರ್ಮದಿಂದ ಸಿಗುವ ಕೊಲಾಜಿನ್‌ ಬಳಸಿಯೇ ಉತ್ಪಾದನೆ ಮಾಡಲಾಗುತ್ತದೆ. ಮುಖದಲ್ಲಿ ಸುಕ್ಕುಗಟ್ಟುವುದನ್ನು ತಡೆಯಲು ಕೂಡ ಇದನ್ನೇ ಬಳಸಲಾಗುವುದೆಂದರು.

ಹಸುವನ್ನು ಕಡಿದ ನಂತರ ಸ್ವಲ್ಪ ಭಾಗವನ್ನು ಮಾತ್ರ ಮಾಂಸಕ್ಕಾಗಿ ಬಳಸಲಾಗುತ್ತದೆ. ಆದರೆ ಉಳಿದ ಅಂಗಗಳ ಬಹುಪಾಲು ಔಷದೀಯ ಬಳಕೆಗೆ ಹೋಗುತ್ತದೆ. ಸತ್ತ ಹಸುವನ್ನಷ್ಟೇ ಬಳಸಿದರೆ ಔಷಧ ಕ್ಷೇತ್ರ ಬೇಡಿಕೆ ಈಡೇರದು. ಗೋಹತ್ಯೆ ನಿಷೇಧಿಸಿದರೆ ಇಡೀ ಔಷದೀಯ ಜಗತ್ತೇ ತತ್ತರಿಸಲಿದ್ದು, ಆಸ್ಪತ್ರೆಗಳು ಔಷಧವಿಲ್ಲದೇ ಪರದಾಡಬೇಕಾಗುತ್ತದೆ. ಅನಿವಾರ್ಯವಾಗಿ ವಿದೇಶದಿಂದ ಆಮದು ಮಾಡಿಕೊಳ್ಳ ಬೇಕಾಗುತ್ತದೆ ಎಂದು ವಿವರಿಸಿದರು.

ಸಂಸ್ಕೃತಿ ಚಿಂತಕ ಜಿ. ರಾಮಕೃಷ್ಣ, ದನ ಕಡಿಯೋದಕ್ಕಿಂತ ನಾಲಿಗೆ, ಕೈ ಕಡಿಯುವುದೇ ಶ್ರೇಯಸ್ಕರ ಎಂಬ ಮಾತುಗಳನ್ನು ರಾಜಕಾರಣಿಗಳು ಆಡುತ್ತಿದ್ದಾರೆ. ಋಗ್ವೇದದಲ್ಲಿ ಗೋಮಾಂಸ ಬೇಯಿಸುವ ಘಮ ಘಮ ವಾಸನೆ ಹೇಗಿತ್ತೆಂಬ ವರ್ಣನೆ ಬರುತ್ತದೆ. ಆಯುರ್ವೇದ ಚರಕ ಸಂಹಿತೆಯಲ್ಲಿ ಯಕ್ಷ್ಮ ರೋಗಕ್ಕೆ ಗೋಮಾಂಸವನ್ನೇ ಔಷಧವಾಗಿ ಬಳಸಬೇಕೆಂದು ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ. ಗೋಮಾಂಸ ತಿನ್ನದೇ ಇದ್ದವರಿಗೆ ಮೊಲ, ಜಿಂಕೆ ಮಾಂಸ ಎಂದು ಸುಳ್ಳು ಹೇಳಿಯಾದರೂ ತಿನ್ನಿಸಿ ಎಂದು ಚರಕ ಸಲಹೆ ಕೊಡುತ್ತಾನೆ ಎಂದು ಹೇಳಿದರು.

ಶತಾವಧಾನಿ ಆರ್‌. ಗಣೇಶ್‌, ಮನುಸ್ಮೃತಿಯಲ್ಲಿ ಮಾಂಸ, ಮದ್ಯ, ಮೈಥುನ ಈ ಮೂರು ದೋಷವಲ್ಲ. ಅವೆಲ್ಲವೂ ಮಾನವ ಸ್ವಭಾವ. ಆದರೆ ಅವನ್ನು ಬಿಡುವುದು ಒಳ್ಳೆಯದು ಎಂದು ವಿವರಿಸಲಾಗಿದೆ. ಶೌತಯಾಗಕ್ಕೆ ಪಶುವಧೆಯನ್ನೇ ಮಾಡಬೇಕೆಂದಿದೆ. ಹಾಗಂತ ಈಗಲೂ ಪಶುವಧೆ ಮಾಡಿ ಯಜ್ಞ ಮಾಡಬೇಕೆಂಬುದು ಸರಿಯೇನಲ್ಲ ಎಂದರು.

ಐಸೆಕ್‌ನ ಅರ್ಥಶಾಸ್ತ್ರಜ್ಞ ಅಜ್ಮಲ್‌ ಪಾಶಾ, ಭಾರತದ ಶೇ.60-70ರಷ್ಟು ಆಹಾರ ಜಾನುವಾರು ಮಾಂಸವನ್ನೇ ಅವಲಂಬಿಸಿದೆ. ಜಾನುವಾರು ಹತ್ಯೆ ನಿಷೇಧಿಸಿದರೆ ಉಳಿದೆಲ್ಲಾ ಆಹಾರಗಳ ಬೆಲೆ ಗಗನಕ್ಕೇರುತ್ತದೆ ಎಂದರು. ಗಾಂಧಿವಾದಿ ಸುರೇಂದ್ರ ಕೌಲಗಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ