- ''''ತೇಜಸ್'' ಲಘು ಯುದ್ಧ ವಿಮಾನ ಗಗನಕ್ಕೆ ಚಿಮ್ಮುತ್ತಿದ್ದಂತೆ ಕರತಾಡನ ಮುಗಿಲು ಮುಟ್ಟಿತು.
ಬೆಂಗಳೂರು : ಅಲ್ಲಿ ವಾಯುಸೇನೆಯ ಬ್ಯಾಂಡ್ ಮೊಳಗುತ್ತಿತ್ತು. ದೇಶದ ರಕ್ಷಣೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡ ವಿಶಿಷ್ಟ ದಿರಿಸಿನಲ್ಲಿದ್ದ ವಾಯು, ನೌಕಾಸೇನೆಗಳ ಹಿರಿಯ ಅಧಿಕಾರಿಗಳ ಶಿಸ್ತಿನ ನಡೆಯಿತ್ತು. ರಣ ಬಿಸಿಲಿನಲ್ಲೂ ದೇಶದ ವೈಜ್ಞಾನಿಕ, ರಕ್ಷಣಾತ್ಮಕ ಸಾಧನೆಯ ಕ್ಷಣಕ್ಕಾಗಿನ ಕುತೂಹಲ ಅಲ್ಲಿತ್ತು.
27 ವರ್ಷಗಳ ಸತತ ಪರಿಶ್ರಮ, ಪ್ರಯೋಗದ ನಂತರ ದೇಶವನ್ನು ಕಾಯಲು ಬಾಂಬರ್, ಟ್ಯಾಂಕ್‌ಗಳನ್ನು ಬಗಲಿಗೆ ಸಿಕ್ಕಿಸಿಕೊಂಡು 'ತೇಜಸ್' ಲಘು ಯುದ್ಧ ವಿಮಾನ ಗಗನಕ್ಕೆ ಚಿಮ್ಮುತ್ತಿದ್ದಂತೆ ಕರತಾಡನ ಮುಗಿಲು ಮುಟ್ಟಿತು. 30ಕ್ಕೂ ಹೆಚ್ಚು ವಿದ್ಯುನ್ಮಾನ ಮಾಧ್ಯಮಗಳ ಕ್ಯಾಮರಾಗಳು, 50ಕ್ಕೂ ಹೆಚ್ಚು ಮಂದಿ ಮುದ್ರಣ ಮಾಧ್ಯಮದ ಛಾಯಾಗ್ರಾಹಕರು ಈ ಅಪೂರ್ವ ದೃಶ್ಯವನ್ನು ಸೆರೆಹಿಡಿದು, ಕ್ಷಣದಲ್ಲಿ ಅನಾವರಣಗೊಂಡ ವಿಜ್ಞಾನಿಗಳ ಯಶಸ್ಸನ್ನು ದೇಶಕ್ಕೆ ಸಾರಿದರು.
ದೇಶದ ರಕ್ಷಣಾ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಕ್ಷಣಕ್ಕೆ ಸಾಕ್ಷಿಯಾದವರು ಬಿಳಿಯ ಪಂಚೆ, ಬಿಳಿ ಅಂಗಿಯಲ್ಲಿ ಸದಾ ಕಾಣಿಸುವ ರಕ್ಷಣಾ ಸಚಿವ ಎ.ಕೆ. ಆಂಟನಿ. ಇವರ ಜತೆಗೆ ವಾಯುಸೇನೆಯ ಮುಖ್ಯಸ್ಥ ಪಿ.ವಿ. ನಾಯಕ್, ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಹಾಗೂ ವಿಮಾನ ವಿನ್ಯಾಸಗೊಳಿಸಿದ ಎಡಿಎಯ ಮಹಾನಿರ್ದೇಶಕ ವಿ.ಕೆ. ಸಾರಸ್ವತ್, ರಕ್ಷಣಾ ಉತ್ಪಾದನೆಯ ಕಾರ್ಯದರ್ಶಿ ಆರ್.ಕೆ. ಸಿಂಗ್, ವಿಮಾನ ತಯಾರಿಸಿದ ಎಚ್‌ಎಎಲ್‌ನ ಅಧ್ಯಕ್ಷ ಅಶೋಕ್‌ನಾಯಕ್, ಎಡಿಎ ನಿರ್ದೇಶಕ ಪಿ.ಎಸ್. ಸುಬ್ರಹ್ಮಣ್ಯಂ ಇವೆರಲ್ಲರೂ ಹರ್ಷದಲ್ಲಿ ಜತೆಯಾದರು.
ಶತ್ರುರಾಷ್ಟ್ರಗಳ ಆಕ್ರಮಣವನ್ನು ಸಮರ್ಥವಾಗಿ ಎದುರಿಸಲು ವಿದೇಶಿ ಲಘು ಯುದ್ಧ ವಿಮಾನಗಳನ್ನೇ ಅವಲಂಬಿಸಿದ್ದ ಭಾರತವೀಗ ಸ್ವದೇಶಿ ನಿರ್ಮಿತ ಲಘು ಯುದ್ಧವಿಮಾನವನ್ನು ಹೊಂದುವಂತ ಕಾಲ ಸನ್ನಿಹಿತವಾಯಿತೆಂದು ರಕ್ಷಣಾ ಮಂತ್ರಿ ಇದೇ ಸಂದರ್ಭದಲ್ಲಿ ಘೋಷಿಸಿದರು.
ದೇಶೀಯ ಜ್ಞಾನ, ತಂತ್ರಜ್ಞಾನ ಬಳಸಿ 10 ವರ್ಷದ ಹಿಂದೆ ಸಿದ್ಧಗೊಂಡ 'ತೇಜಸ್'ನ್ನು 1500 ಬಾರಿ ವಿವಿಧ ರೀತಿಯ ಪರೀಕ್ಷೆಗೆ ಒಳಪಡಿಸಿದ ತರುವಾಯ ವಾಯುಸೇನೆ ಮತ್ತು ನೌಕಾದಳಕ್ಕೆ ಸೇರಲು ಪ್ರಾಥಮಿಕ ಅರ್ಹತೆ ಪಡೆದಿದೆ ಎಂದು ಸೋಮವಾರ ಅಧಿಕೃತವಾಗಿ ಘೋಷಿಸಲಾಯಿತು. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು 'ಕಾರ್ಯಾಚರಣೆಯ ಆರಂಭಿಕ ಪ್ರಮಾಣ ಪತ್ರ'ವನ್ನು ವಾಯುಪಡೆ ಮುಖ್ಯಸ್ಥ ಪಿ.ವಿ. ನಾಯಕ್ ಅವರಿಗೆ ಹಸ್ತಾಂತರಿಸಿದರು.
ಯುದ್ಧದ ತೇಜಸ್ಸು : ರಷ್ಯ ತಂತ್ರಜ್ಞಾನ ಬಳಸಿ ತಯಾರಿಸಿದ ದೇಶದ ವಾಯು-ನೌಕಾಪಡೆಯಲ್ಲಿ ಬಲಿಷ್ಠವೆಂದೇ ಖ್ಯಾತವಾದ ಮಿಗ್-21 ಯುದ್ಧವಿಮಾನಕ್ಕಿಂತ ಇದು ಬಲಶಾಲಿ ಹಾಗೂ ಆಕ್ರಮಣಕಾರಿಯಾಗಿದೆ.
ಸುಮಾರು 200 ಮೀಟರ್ ದೂರದಿಂದಲೇ ಶತ್ರುಪಡೆಯ ಮೇಲೆ ಬಾಂಬರ್‌ಗಳನ್ನು ಎಸೆಯಬಲ್ಲ, ಟ್ಯಾಂಕರ್‌ಗಳನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯದ ಇದರ ಮೊದಲ ವೈಶಿಷ್ಟé. ಓರ್ವ ಪೈಲಟ್ ಕುಳಿತುಕೊಳ್ಳಬಹುದಾದ ಸಣ್ಣ ವಿಮಾನ ಇದಾಗಿದ್ದು 8.2 ಮೀಟರ್ ಅಗಲ, 13.2 ಮೀಟರ್ ಉದ್ಧವಿದೆ. 4.4 ಮೀಟರ್ ಎತ್ತರವಿದೆ.
ವಾಯುನೆಲೆಯಿಂದ ಮತ್ತೂಂದು ವಾಯುನೆಲೆಗೆ, ನೌಕೆಯಿಂದ ಗಗನಕ್ಕೆ, ಭೂಮಿಯಿಂದ ಗಗನ ಹಾಗೂ ನೌಕಾನೆಲೆಗೆ ಚಿಮ್ಮಬಹುದಾದ ವಿಶಿಷ್ಟ ಸಾಮರ್ಥಯ ಹೊಂದಿದೆ. ಡಿಜಿಟಲ್ ಫ್ಲೈಟ್ ಕಂಟ್ರೋಲ್ ಹೊಂದಿರುವ ತೇಜಸ್, ರಾಡಾರ್‌ನ ನಿಯಂತ್ರಣದಲ್ಲಿ ಶತ್ರುವಿವನ ಮೇಲೆ ದಾಳಿ ಎಸಗುವ ಶಕ್ತಿಯನ್ನು ಹೊಂದಿದೆ.
ಏಕಕಾಲಕ್ಕೆ 4 ಟನ್ ಸಾಮರ್ಥ್ಯದ ಬಾಂಬರ್ ಹಾಗೂ ಟ್ಯಾಂಕ್‌ಗಳನ್ನು ಹೊತ್ತೂಯ್ದು ಶತ್ರುಪಡೆಯ ಮೇಲೆ ದಾಳಿ ಎಸಗಬಲ್ಲದು. ನಾಲ್ಕನೇ ತಲೆಮಾರಿನ ಲಘು ಯುದ್ಧ ವಿಮಾನ ಇದಾಗಿದ್ದು, ಮಾರ್ಕ್ 1 ಇಂಜಿನ್‌ನಿಂದ ರೂಪು ಪಡೆದಿದೆ. ಸುರಕ್ಷತೆ ಹಾಗೂ ಆಕ್ರಮಣಕಾರಿ ಗುಣ ಇದರಲ್ಲಿ ಮೇಳೈಸಿದ್ದು ಅತೀ ಶೀತ ಹಾಗೂ ಅತೀ ಉಷ್ಣ ವಾತಾವರಣದಲ್ಲೂ ಕಾರ್ಯನಿರ್ವಹಿಸುವ ದಕ್ಷತೆ ಹೊಂದಿದೆ.
ಖರ್ಚೆಷ್ಟು : 27 ವರ್ಷಗಳ ಸುದೀರ್ಘ ಸಂಶೋಧನೆ, ಹಲವು ಏಳುಬೀಳು, ಹತಾಶೆಯ ನಂತರ ತೇಜಸ್ ತೇಜೋಮಯವಾಗಿ ಹೊರಹೊಮ್ಮಿದೆ. 12 ಸಾವಿರ ಕೋಟಿ ರೂ. ಇದರ ಸಂಶೋಧನೆ ಹಾಗೂ ಅಭಿವೃದ್ಧಿಗೆ ಖರ್ಚಾಗಿದೆ. ಒಟ್ಟಾರೆ 25 ಸಾವಿರ ಕೋಟಿ ಖರ್ಚು ಮಾಡಿ ಇದನ್ನು ಸಿದ್ಧಗೊಳಿಸಲಾಗಿದೆ.
ಬೆಂಗಳೂರಿನಲ್ಲಿರುವ ಏರೋನಾಟಿಕಲ್ ಡೆವಲಪ್‌ಮೆಂಟ್ ಅಥಾರಿಟಿ, ಡಿಆರ್‌ಡಿಓ, ಎಚ್‌ಎಎಲ್ ಮತ್ತಿತರ ಸಂಸ್ಥೆಗಳು ಇದರ ಸಂಶೋಧನೆಯಲ್ಲಿ ಸಕ್ರಿಯರಾಗಿದ್ದರು. ಎಚ್‌ಎಎಲ್ ಈ ವಿಮಾನವನ್ನು ಸಿದ್ಧಪಡಿಸಿದ್ದು, ಮೊದಲ ಹಂತದಲ್ಲಿ ನಾಲ್ಕು ವಿಮಾನಗಳನ್ನು ಸಿದ್ಧಗೊಳಿಸಲಾಗಿದೆ.
ವಾಯುಸೇನೆಯು ಈಗಾಗಲೇ 20 ತೇಜಸ್ ಉತ್ಪಾದಿಸಿಕೊಡುವಂತೆ ಎಚ್‌ಎಎಲ್ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಇನ್ನೂ ಹೆಚ್ಚುವರಿಯಾಗಿ 20 ಬೇಕೆಂಬ ಪ್ರಸ್ತಾವನೆ ಸದ್ಯವೇ ಸಲ್ಲಿಸಲ್ಪಡಲಿದೆ. ಮಾರ್ಕ್1 ಇಂಜಿನ್ ಹೊಂದಿದ 83 ತೇಜಸ್‌ಗೆ ವಾಯುಸೇನೆ ಬೇಡಿಕೆ ಇಟ್ಟಿದೆ.
ಪೈಲಟ್ ಅನುಭವ
ಅದೊಂದು ಅಪೂರ್ವ ಅನುಭವ. ಇಲ್ಲಿಯವರೆಗೆ ಅನೇಕ ನಾಗರಿಕ ವಿಮಾನಗಳನ್ನು ಓಡಿಸಿದ್ದೇನೆ. ಆದರೆ 2009ರಲ್ಲಿ ತೇಜಸ್‌ನಲ್ಲಿ ಒಬ್ಬನೇ ಕುಳಿತು ವಿಮಾನವನ್ನು ನಭಕ್ಕೆ ಚಿಮ್ಮಿಸಿ, ಓಡಾಡಿಸಿದಾಗ ಆದ ಅನುಭವ ರೋಮಾಂಚನಕಾರಿ. ಕಳೆದ 6 ವರ್ಷಗಳಿಂದ ತೇಜಸ್‌ನ ವಿವಿಧ ಪ್ರಯೋಗದಲ್ಲಿ ಭಾಗಿಯಾಗಿದ್ದೇನೆ. ತೇಜಸ್ ಆಕ್ರಮಣಕಾರಿ ಗುಣ, ವೇಗದ ಕ್ಷಮತೆ, ಬಾಂಬರ್‌ಗಳನ್ನು ಎಸೆಯುವ ಪರಿ ವಿಸ್ಮಯಕಾರಿ ಎನ್ನುತ್ತಾರೆ ಪೈಲಟ್ ಪಡೆಯ ನಾಯಕತ್ವ ವಹಿಸಿದ್ದ ಡೆಹ್ರಾಡೂನ್ ಮೂಲದ ಪಿ.ಎಸ್. ತ್ಯಾಗಿ. ನಮ್ಮ ಸ್ಕ್ವಾಡ್ರನ್‌ನಲ್ಲಿ 8 ಮಂದಿ ಸತತ 2 ವರ್ಷ ತರಬೇತಿ ಪಡೆದಿದ್ದೇವೆ. ಪೈಲಟ್‌ಗಳಿಗೆ ಇದೊಂದು ಸಾಹಸಮಯ ಅನುಭವ ನೀಡುವ ವಿಮಾನ ಎನ್ನುತ್ತಾರೆ ಅವರು.
ಮಾನವೀಯತೆಯ ವಿಜಯಕ್ಕಾಗಿ ನಾವೆಲ್ಲ ಹಾರೈಸೋಣ http://musthaqbil.blogspot.com
ಸೋಮವಾರ, ಜನವರಿ 10, 2011
# ಭಾರತಕ್ಕೆ ಯುದ್ಧ ''''THEJASS'' ; ಮೊದಲ ಸ್ವದೇಶಿ ಲಘುಯುದ್ಧ ವಿಮಾನ ವಾಯುಪಡೆಯ ತೋಳಿಗೆ ತೇಜಸ್ ಬಲ
27 ವರ್ಷದ ಕನಸು ನನಸು ; ಮಿಗ್-21 ಗಿಂತ ಬಲಶಾಲಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ