ಸೋಮವಾರ, ಜನವರಿ 31, 2011

ಪ್ರತಿಪಕ್ಷಗಳಿಂದ ಜೀವ ಬೆದರಿಕೆ: ಮುಖ್ಯಮಂತ್ರಿ ಯಡಿಯೂರಪ್ಪ ಅಳಲು

ಬೆಂಗಳೂರು, ಜ.31: ಪ್ರತಿಪಕ್ಷಗಳು ತನ್ನ ವಿರುದ್ಧ ಮಾಟ ಮಂತ್ರ ಮಾಡಿ ತನ್ನನ್ನು ಮುಗಿಸಲು ಷಡ್ಯಂತ್ರ ನಡೆಸುತ್ತಿವೆ. ಮನೆಯಿಂದ ವಿಧಾನಸಭೆಗೆ ಹಾಗೂ ವಿಧಾನಸಭೆಯಿಂದ ಮನೆಗೆ ಬರಲು ಭಯವಾಗುತ್ತಿದೆ. ವಿಧಾನಸಭೆಯಿಂದ ಮನೆಗೆ ತಲುಪುತ್ತೇನೆ ಎಂಬ ಭರವಸೆ ನನಗಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಳಲು ತೋಡಿಕೊಂಡಿದ್ದಾರೆ.

ಮೈಸೂರಿನಲ್ಲಿ ಸುತ್ತೂರು ಮಠಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರ ಜೊತೆ ಮಾತನಾಡಿ, ಮಾಟ ಮಂತ್ರದಿಂದ ನನ್ನನ್ನು ಜೀವಂತ ಮುಗಿಸಲು ಪ್ರಯತ್ನಿಸಲಾಗುತ್ತಿದೆ. ದೇವೇಗೌಡರ ಕುಟುಂಬದ ಸದಸ್ಯರು ಮಾಟಮಂತ್ರದಲ್ಲಿ ಪರಿಣತರು. ಅವರು ಯಾವುದಕ್ಕೂ ಅಂಜುವವರಲ್ಲ ಎಂದು ಆಪಾದಿಸಿದರು.
ಆದರೆ ನಾನು ಯಾವುದೇ ಬೆದರಿಕೆಗೆ ಜಗ್ಗುವುದಿಲ್ಲ. ದೇವರು ಮೆಚ್ಚುವ ರೀತಿಯಲ್ಲಿ ಅಧಿಕಾರದ ಕೊನೆಯವರೆಗೆ ನಾಡಿನ ಜನತೆಗಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಫೆಬ್ರವರಿ ತಿಂಗಳಲ್ಲಿ ಬಜೆಟ್ ಮಂಡಿಸುತ್ತೇನೆ. ಮಾರ್ಚ್ ತಿಂಗಳಲ್ಲಿ ವಿರೋಧ ಪಕ್ಷಗಳ ಹಗರಣಗಳನ್ನು ಮನೆ ಮನೆಗೆ ತಲುಪಿಸುತ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಟೀಕೆ
ಜನರ ಅನುಕಂಪ ಗಳಿಸಲು ಯಡಿಯೂರಪ್ಪ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಈಗ ಅಪರಾಧ ಪ್ರಜ್ಞೆ ಕಾಡುತ್ತಿದೆ. ವಾಮಾಚಾರ ಮಾಡುವವರಿಗೇ ವಾಮಾಚಾರದ ಭಯ ಉಂಟಾಗುತ್ತದೆ. ಇದೇ ಕಾರಣಕ್ಕೆ ಯಡಿಯೂರಪ್ಪ ಈ ಹಿಂದೆ ತನ್ನ ಹೆಸರನ್ನು ಪರಿಷ್ಕರಿಸಿಕೊಂಡಿದ್ದರು. ನನಗೆ ಮೂಢನಂಬಿಕೆ, ವಾಮಾಚಾರಗಳಲ್ಲಿ ನಂಬಿಕೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜಕೀಯ ಜೀವನದಲ್ಲಿರುವವರು ಜಾತ್ಯತೀತ ವೌಲ್ಯಗಳಲ್ಲಿ ನಂಬಿಕೆ ಇರಿಸಬೇಕು. ವೌಢ್ಯಗಳ ಬಗ್ಗೆ ನಂಬಿಕೆ ಇರಕೂಡದು ಎಂದು ಅವರು ಹೇಳಿದರು.
ಅದೇ ರೀತಿ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪನವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ