ಸೋಮವಾರ, ಜನವರಿ 31, 2011

ಸರಕಾರದ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ: ಬಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರಕುಮಾರ್

ಸರಕಾರದ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ: ಬಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರಕುಮಾರ್ 
ಸರಕಾರದ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ: ಬಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರಕುಮಾರ್

ಮಂಗಳೂರು, ಜ.31: ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿಗೆ ಸಂಬಂಧಿಸಿ ನ್ಯಾ.ಸೋಮಶೇಖರ್ ಆಯೋಗದ ವರದಿಯಲ್ಲಿ ತನ್ನನ್ನು ಪ್ರಚೋದನಕಾರಿ ಹೇಳಿಕೆಯ ಹಿನ್ನೆಲೆಯಲ್ಲಿ ಆರೋಪಿಯನ್ನಾಗಿ ಉಲ್ಲೇಖಿಸಲಾಗಿದೆ. ಆದರೆ, ಈ ವರದಿ ಬರುವ ಮೊದಲು ರಾಜ್ಯ ಸರಕಾರವು ತನ್ನ ಮೇಲೆ 307 ಪ್ರಕರಣವನ್ನು ದಾಖಿಲಿಸಿ ತನ್ನನ್ನು ಬಂಧಿಸಿ 42 ದಿನಗಳ ಕಾಲ ಜೈಲು ವಾಸವನ್ನು ವಿಧಿಸುವ ಮೂಲಕ ಅನ್ಯಾಯ ಮಾಡಿದೆ. ಇಲ್ಲಿ ರಾಜ್ಯ ಸರಕಾರವು ವರದಿಗೆ ತದ್ವಿರುದ್ಧವಾಗಿ ನಡೆದುಕೊಂಡಿದ್ದು, ಈ ಬಗ್ಗೆ ಸರಕಾರದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ವಕೀಲರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬಜರಂಗದಳದ ಮಾಜಿ ರಾಜ್ಯ ಸಂಚಾಲಕ, ವರದಿಯಲ್ಲಿ ಚರ್ಚ್ ದಾಳಿ ರೂವಾರಿ ಎಂದು ಪರಿಗಣಿಸ್ಪಟ್ಟಿರುವ ಮಹೇಂದ್ರಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ನಡೆದ ಚರ್ಚ್ ದಾಳಿಗೆ ಸಂಬಂಧಿಸಿ ನ್ಯಾ. ಸೋಮಶೇಖರ್ ಆಯೋಗವು ಇತ್ತೀಚೆಗೆ ಸರಕಾರಕ್ಕೆ ಸಲ್ಲಿಸಿರುವ ಅಂತಿಮ ವರದಿಯ ಕುರಿತಂತೆ ಮಂಗಳೂರು ಪತ್ರಕರ್ತರ ಅಧ್ಯಯನ ಕೇಂದ್ರದ ವತಿಯಿಂದ ಇಲ್ಲಿನ ಸಹೋದಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ವರದಿಯ ಪರ ಮತ್ತು ವಿರೋಧಿ ತಂಡಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಿದ್ದರು.
ಆಯೋಗದ ತೀರ್ಪು ಯಾವುದೇ ರೀತಿಯ ಮಹತ್ವವನ್ನು ಪಡೆದಿಲ್ಲ ಎಂದ ಅವರು, ಘಟನೆಯಲ್ಲಿ ಬಜರಂಗದಳದ ಪಾತ್ರವನ್ನು ಒಪ್ಪಿಕೊಳ್ಳಲು ಮಾತ್ರ ಹಿಂಜರಿದರು.
ನ್ಯಾ. ಸೋಮಶೇಖರ ಆಯೋಗವು ಸಲ್ಲಿಸಿದ್ದ ಮಧ್ಯಂತರ ವರದಿಗೆ ವಿರೋಧಾಭಾಸದ ವರದಿಯನ್ನು ಅಂತಿಮವಾಗಿ ಸಲ್ಲಿಸಿದೆ ಎಂದು ಕರ್ನಾಟಕ ಥಿಯಲಾಜಿಕಲ್ ಕಾಲೇಜಿನ ಪ್ರೊಫೆಸರ್ ಹಾಗೂ ಬಾಸೆಲ್ ಮಿಶನ್‌ನ ಡಾ.ಎಚ್.ಎಂ. ವಾಟ್ಸನ್, ಡಾ.ಎಫ್. ಅನಿಲ್‌ಕುಮಾರ್ ಅಭಿಪ್ರಾಯಿಸಿದರು.

ಸರಕಾರದಿಂದ ನೇಮಕವಾದ ಆಯೋಗವು ತನಗೆ ನೀಡಿರುವ ಸೌಲಭ್ಯಗಳಿಗೆ ಋಣಿಯಾಗಿದ್ದುಕೊಂಡು ಸರಕಾರದ ಪರವಾದ ವರದಿ ನೀಡುವುದು ಸಹಜ ಎಂದು ಕ್ರೈಸ್ತ ಪರ ಸಾಕ್ಷಿಗಳ ಪರವಾಗಿ ಆಯೋಗದೆದುರು ವಾದ ಮಂಡಿಸಿದ್ದ ವಕೀಲ ಎಂ.ಪಿ. ನೊರೊನ್ನಾ ತಿಳಿಸಿದರು.
ಆಯೋಗದ ಮಧ್ಯಂತರ ವರದಿಯು ಕೇವಲ ಕ್ರೈಸ್ತ ಪರ ಸಾಕ್ಷಿಗಳ ಆಧಾರದಲ್ಲಿ ನೀಡಿದ್ದಾಗಿದೆ. ಹಿಂದೂ ಪರ ಸಾಕ್ಷಿಗಳ ಹೇಳಿಕೆಯು ಮಧ್ಯಂತರ ವರದಿಯ ಬಳಿಕ ದಾಖಲಿಸಿಕೊಂಡ ಕಾರಣ ಅಂತಿಮ ವರದಿಯಲ್ಲಿ ಬಜರಂಗದಳದ ಪಾತ್ರವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದ ಬಜರಂಗದಳ ಪರ ವಕೀಲ ಜಗದೀಶ್ ಶೇಣವ ವರದಿಯನ್ನು ಸ್ವಾಗತಿಸಿದರು. ಬಜರಂಗದಳದ ಜಿಲ್ಲಾ ಸಂಚಾಲಕ ಶರಣ್ ಪಂಪ್‌ವೆಲ್ ಇದಕ್ಕೆ ಧ್ವನಿಗೂಡಿಸಿದರು
ಬಜರಂಗದಳಕ್ಕೆ ಆಯೋಗವು ಕ್ಲೀನ್ ಚಿಟ್ ನೀಡಿದೆ ಎಂಬ ಮಾತಿಗೆ ಆಕ್ಷೇಪಿಸಿದ ವಕೀಲ ಎಂಪಿ ನೊರೊನ್ನಾ, ಆಯೋಗವು ತನ್ನ ವರದಿಯಲ್ಲಿ ಮಂಗಳೂರಿನ ಎಡೊರೇಶನ್ ಮೊನೆಸ್ಟರಿಯಲ್ಲಿ ನಡೆದ ಘಟನೆ ಸೇರಿದಂತೆ 8 ಕಡೆಗಳಲ್ಲಿ ನಡೆದ ದಾಳಿಗಳಲ್ಲಿ ಶಂಕಿತ ಬಜರಂಗದಳವೇ ಕಾರಣ ಎಂಬುದನ್ನು ಉಲ್ಲೇಖಿಸಿದೆ. ಇದು ಮುಖ್ಯಮಂತ್ರಿಗೆ ಸಲ್ಲಿಸಿದ ಅಂತಿಮ ವರದಿಯಲ್ಲಿದೆ ಎಂದು ಬಹಿರಂಗ ಪಡಿಸಿದರು.
ವರದಿಯನ್ನು ಇಷ್ಟರವರೆಗೆ ಸ್ವಾಗತಿ ಸಿದ್ದ ಬಜರಂಗದಳದ ಪರವಾಗಿದ್ದವರು ಈ ಸಂದರ್ಭ ಕಕ್ಕಾಬಿಕ್ಕಿಯಾದರಲ್ಲದೇ, ಇಷ್ಟರವರೆಗೆ ಇದು ತಮಗೆ ಗೊತ್ತಿಲ್ಲ. ಈ ಬಗ್ಗೆ ಪರಿಶೀಲಿಸಬೇಕಿದೆ. ಹಾಗಾದಲ್ಲಿ ವರದಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.
ಪತ್ರಕರ್ತರಾದ ಗಂಗಾಧರ ಪಡುಬಿದ್ರೆ ಸ್ವಾಗತಿಸಿದರು. ವಿನೋಬಾ ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ