ಬುಧವಾರ, ಜನವರಿ 19, 2011

ಅಕ್ರಮ ಧಾರ್ಮಿಕ ಕಟ್ಟಡಗಳ ತೆರವು

ವಿಟ್ಲ: ಸುಪ್ರೀಂಕೋರ್ಟ್‌ನ ಆದೇಶದಂತೆ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕಲ್ಲಡ್ಕ-ಕಾಞಂಗಾಡ್ ರಾಷ್ಟ್ರೀಯ ಹೆದ್ದಾರಿಯ ವೀರಕಂಭ ಮತ್ತು ಗೋಳ್ತಮಜಲು ವ್ಯಾಪ್ತಿಯಲ್ಲಿ ಅಕ್ರಮ ಧಾರ್ಮಿಕ ಹರಕೆ ಡಬ್ಬಿ ಹಾಗೂ ಕಟ್ಟಡಗಳ ತೆರವು ಕಾರ್ಯಾಚರಣೆ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ಮಂಗಳವಾರ ನಡೆಯಿತು.
ವೀರಕಂಭ ಗ್ರಾಮದ ಗಿಲ್ಕಿಂದಯ ಈರ್ವರು ಉಳ್ಳಾಕುಳ ದೇವಸ್ಥಾನಗಳ ದ್ವಾರದ ಬಳಿಯ ಕಾಣಿಗೆ ಡಬ್ಬಿ, ನೆಟ್ಲ ಸದಾಶಿವ ದೇವರ ಕಟ್ಟೆಯ ಹಾಗೂ ಕಲ್ಲಡ್ಕ ಮತ್ತು ಗೋಳ್ತಮಜಲು ಮೊಯ್ದಿನ್ ಜುಮಾ ಮಸೀದಿಯ ಹರಕೆ ಡಬ್ಬಿಗಳನ್ನು ತೆರವುಗೊಳಿಸಲಾಯಿತು. ಕಲ್ಲಡ್ಕ-ಗೋಳ್ತಮಜಲು-ವೀರಕಂಭ ವ್ಯಾಪ್ತಿಯಲ್ಲಿರುವ ಅಕ್ರಮ ಧಾರ್ಮಿಕ ಕೇಂದ್ರಗಳ ಕಟ್ಟಡಗಳನ್ನು ತೆರವುಗೊಳಿಸಲು ಇದಕ್ಕೆ ಸಂಬಂಧಪಟ್ಟವರಿಗೆ ನೋಟೀಸು ಜಾರಿ ಮಾಡಿದ್ದರು ಕೂಡಾ ಇದನ್ನು ಯಾರೂ ತೆರವುಗೊಳಿಸಿರಲಿಲ್ಲ.
ನಿನ್ನೆ ಬೆಳಿಗ್ಗೆ ಬಂಟ್ವಾಳ ತಹಶೀಲ್ದಾರ ರವಿಚಂದ್ರ ನಾಯಕ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಅರುಣ್ ಕುಮಾರ್ ಹಾಗೂ ಲೋಕೇಶ್ ಇವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ನಲ್ಲಿ ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೆ ಇಲಾಖೆಯ ನಿರ್ದೇಶನಕ್ಕೆ ಇಲ್ಲಿಯ ಗ್ರಾಮಸ್ಥರು ಸಂಪೂರ್ಣ ಬೆಂಬಲವನ್ನು ನೀಡಿದರು. ಅದೇ ರೀತಿ ವೀರಕಂಭ ಪ್ರದೇಶದ ಭಜನಾ ಮಂದಿರದ ಕಾಣಿಕೆ ಹುಂಡಿ ಮತ್ತು ಅಲ್ಲಿಯ ಜುಮಾ ಮಸೀದಿಯ ಕಾಣಿಕೆ ಡಬ್ಬಿಗಳನ್ನು ತೆರವುಗೊಳಿ ಸಲಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ