ಕೇಪ್‌ಟೌನ್: ಸೋಲಿನ ಸುಳಿಯಲ್ಲಿದ್ದ ತಂಡವನ್ನು ತನ್ನ ವೇಗದ ಅರ್ಧಶತಕದಿಂದ ಮೇಲೆತ್ತಿದ ಯೂಸುಫ್ ಪಠಾಣ್ ನೆರವಿನಿಂದ ಭಾರತ ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ವಿಕೆಟ್‌ಗಳ ಗೆಲುವು ದಾಖಲಿಸಿಕೊಂಡು ಸರಣಿಯಲ್ಲಿ ೨-೧ರ ಮುನ್ನಡೆಯನ್ನು ಪಡೆದುಕೊಂಡಿದೆ.
ಪಂದ್ಯದ ಅಂತ್ಯದವರೆಗೂ ಅತ್ತಿಂದಿತ್ತ ಸಾಗಿದ ವಿಜಯಲಕ್ಷ್ಮಿ ಕೊನೆಗೂ ಧೋನಿ ಪಡೆಯತ್ತ ವಾಲಿದಳು. ೨೨೧ ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟುತ್ತಿದ್ದ ಭಾರತ ಅಗ್ರ ಸರದಿಯ ಕುಸಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿತು. ಆದರೆ ಯೂಸೂಫ್ ಕೇವಲ ೫೦ ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಬೋಥಾ ಒಂದೇ ಓವರ್‌ನಲ್ಲಿ ಮೂರು ಸಿಕ್ಸರ್ ಸಿಡಿಸಿ ೫೯ ರನ್ ಬಾರಿಸಿ ತಂಡವನ್ನು ಗೆಲುವಿನ ಹೆಬ್ಬಾಗಿಲಿಗೆ ತಂದರು. ಅಂತ್ಯದಲ್ಲಿ ಹರ್ಭಜನ್ ೨೩ ರನ್ ಸಿಡಿಸಿ ತಂಡವನ್ನು ಇನ್ನೂ ೧೦ ಎಸೆತ ಬಾಕಿಯಿರುವಂತೆ ಗೆಲುವಿನ ಮೆಟ್ಟಿಲೇರಿಸಿದರು. ಭಾರತ ನಾಲ್ಕು ರನ್ ಮಾಡಿದ್ದಾಗಲೇ ಆರಂಭಿಕ ಮುರಳಿ ವಿಜಯ್(೧) ವಿಕೆಟ್ ಕಳಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ರೋಹಿತ್ ಮತ್ತು ಕೊಹ್ಲಿ ೫೦ ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಸ್ವಲ್ಪ ಮಟ್ಟಿನ ಚೇತರಿಕೆ ನೀಡಿದರು. ಕೊಹ್ಲಿ ವಿಕೆಟ್ ಉರುಳಿಸಿದ ಮೊರ್ಕೆಲ್ ಭಾರತಕ್ಕೆ ಎರಡನೇ ಆಘಾತವಿಕ್ಕಿದರು. ಇದರ ಬೆನ್ನಲ್ಲೇ ರೋಹಿತ್ ಕೂಡ ಮೊರ್ಕೆಲ್‌ಗೆ ವಿಕೆಟ್ ಒಪ್ಪಿಸಿದಾಗ ಭಾರತದ ಮೊತ್ತ ೬೧ಕ್ಕೆ ೩. ಧೋನಿ ೮ ರನ್ ಮಾಡಿ ಪೆವಿಲಿಯನ್ ಹಾದಿ ಹಿಡಿದಾಗ ಭಾರತ ಸೋಲಿನತ್ತ ಮುಖಮಾಡಿತು. ೧೬ ರನ್ ಮಾಡಿದ ಯುವರಾಜ್ ಔಟಾದಾಗ ಭಾರತದ ಮೊತ್ತ ಕೇವಲ ೯೩ ರನ್ ಮಾತ್ರ. ಅದಾಗಲೇ ಭಾರತದ ಅಗ್ರ ಸರದಿಯ ಬ್ಯಾಟ್ಸ್‌ಮೆನ್‌ಗಳು ಗುಡು ಸೇರಿಯಾಗಿತ್ತು.
ಈ ಹಂತದಲ್ಲಿ ಭಾರತ ೯೩ ರನ್‌ಗಳಿಗೆ ಐದು ವಿಕೆಟ್ ಕಳಕೊಂಡು ಸಂಕಷ್ಟದಲ್ಲಿತ್ತು. ಆದರೆ ಯೂಸೂಫ್ ಮತ್ತು ರೈನಾ ಆರನೇ ವಿಕೆಟಿಗೆ ೫೦ ರನ್‌ಗಳ ಜೊತೆಯಾಟ ನಡೆಸಿ ಮತ್ತೆ ತಂಡದ ಹೋರಾಟ ಮುಂದುವರಿಸಿದರು. ೩೭ ರನ್ ಮಾಡಿದ ರೈನಾ ವಿಕೆಟ್ ಕಬಳಿಸಿದ ಮೊರ್ಕೆಲ್ ಭಾರತಕ್ಕೆ ಮತ್ತೊಂದು ಆಘಾತವಿಕ್ಕಿದರು. ೫೯ ರನ್ ಮಾಡಿದ ಯೂಸುಫ್ ಕೂಡ ಮೊರ್ಕೆಲ್‌ಗೆ ವಿಕೆಟ್ ಒಪ್ಪಿಸಿದಾಗ ಭಾರತದ ಗೆಲುವಿನಾಸೆಗೆ ತಣ್ಣೀರು ಬಿತ್ತೆಂದು ಭಾವಿಸಲಾಯಿತು. ಆದರೆ ಹರ್ಭಜನ್ ಮತ್ತು ಜಹೀರ್ ಎಂಟನೇ ವಿಕೆಟಿಗೆ ೨೬ ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ೧೪ ರನ್ ಮಾಡಿ ಜಹೀರ್ ಔಟಾದಾಗ ಭಾರತಕ್ಕೆ ಇನ್ನೂ ೧೩ ರನ್‌ಗಳ ಅಗತ್ಯವಿತ್ತು. ಆಶೀಶ್ ನೆಹ್ರಾ ಗೆಲುವಿನ ಬೌಂಡರಿಯೊಂದಿಗೆ ಆರು ರನ್ ಮಾಡಿ ಹರ್ಭಜನ್‌ಗೆ ಸರಿಯಾದ ಜತೆ ನೀಡಿದರು. ಅಜೇಯರಾಗುಳಿದ ಹರ್ಭಜನ್ ೨೫ ಎಸೆತಗಳಲ್ಲಿ ಎರಡು ಸಿಕ್ಸರ್‌ನೊಂದಿಗೆ ಅಜೇಯ ೨೩ ರನ್ ಸಿಡಿಸಿದರು.
ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ಭಾರತದ ಶಿಸ್ತುಬದ್ಧ ಬೌಲಿಂಗ್ ಹಾಗು ಫೀಲ್ಡಿಂಗ್‌ನಿಂದಾಗಿ ಕುಸಿತ ಕಂಡಿತು. ಜಹೀರ್ ಖಾನ್ ಆತಿಥೇಯರಿಗೆ ಮೊದಲ ಆಘಾತ ನೀಡಿದರು. ೧೬ ರನ್ ಮಾಡಿದ ಹಶಿಮ್ ಅಮ್ಲಾ ಎಡಗೈ ವೇಗಿಗೆ ವಿಕೆಟ್ ಒಪ್ಪಿಸಿದರು. ಇದರ ಬಳಿಕ ದ. ಆಫ್ರಿಕಾದ ಬ್ಯಾಟ್ಸ್‌ಮೆನ್‌ಗಳು ರನ್‌ಗಾಗಿ ಪರದಾಡಿದರು. ಒಂದು ಹಂತದಲ್ಲಿ ೯೦ ರನ್‌ಗಳಿಗೆ ನಾಲ್ಕು ವಿಕೆಟ್ ಕಳಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಡ್ಯುಮಿನಿ ಮತ್ತು ಡು ಪ್ಲೆಸಿಸ್ ೧೧೦ ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಗೌರವಾರ್ಹ ಮೊತ್ತದತ್ತ ಕೊಂಡೊಯ್ಯಲು ಪ್ರಯತ್ನಿಸಿದರು. ಡ್ಯುಮಿನಿ ೫೨ ರನ್ ಮಾಡಿ ಜಹೀರ್‌ಗೆ ಮತ್ತು ಪ್ಲೆಸಿಸ್ ೬೦ ರನ್ ಬಾರಿಸಿ ಮುನಾಫ್‌ಗೆ ಬಲಿಯಾದರು. ಆದರೆ ಆಫ್ರಿಕಾದ ಕೆಳಸರದಿ ಬ್ಯಾಟ್ಸ್‌ಮೆನ್‌ಗಳಿಗೆ ಕ್ರೀಸಿನಲ್ಲಿ ಹೆಚ್ಚು ಹೊತ್ತು ನಿಲ್ಲಲು ಭಾರತದ ಬೌಲರ್‌ಗಳು ಅವಕಾಶ ನೀಡಲಿಲ್ಲ. ವೇಗಿ ಜಹೀರ್ ಖಾನ್ ಮೂರು, ಮುನಾಫ್ ಮತ್ತು ಹರ್ಭಜನ್ ತಲಾ ಎರಡೆರಡು ವಿಕೆಟ್ ಕಬಳಿಸಿದರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ