ಚಿಕ್ಕಮಗಳೂರು, ಜ.18: ರಾಜ್ಯ ಬಿಜೆಪಿ ಸರಕಾರವು 1964 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆಯ ಬದಲು ಹೊಸ ಕಾಯ್ದೆ ‘ಸಂಪೂರ್ಣ ಜಾನುವಾರು ಹತ್ಯೆ ನಿಷೇಧ ಕಾಯ್ದೆ 2010’ ಜಾರಿಗೊಳಿಸಲು ಹೊರಟಿರುವುದು ಮಾಂಸಹಾರಿಗಳಿಗೆ ಮಾತ್ರವಲ್ಲ, ರೈತಾಪಿ ವರ್ಗದವರ ಮೇಲೂ ಆತಂಕಕಾರಿ ಪರಿಣಾಮ ಬೀರಲಿದೆ ಎಂದು ಜಾನುವಾರು ಹತ್ಯೆ ಕಾಯ್ದೆ ವಿರೋಧಿ ವೇದಿಕೆಯ ರಾಜ್ಯ ಸಂಚಾಲಕ ಗೌಸ್ ಮುಹಿಯುದ್ದೀನ್ ತಿಳಿಸಿದ್ದಾರೆ.
ಸರಕಾರದ ಜಾನುವಾರು ಹತ್ಯೆ ಕಾಯ್ದೆ ವಿರುದ್ಧ ಹಾಗೂ ಚಿಕ್ಕಮಗಳೂರಿನಲ್ಲಿ ಕಸಾಯಿಖಾನೆಗೆ ಅನುಮತಿ ಕೋರಿ ಜಾನುವಾರು ಹತ್ಯೆ ಕಾಯ್ದೆ ವಿರೋಧಿ ವೇದಿಕೆಯು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಬೆಲೆಯೇರಿಕೆ, ಕೃಷಿ ಸಾಲಗಳ ಹೊರೆಯನ್ನು ಭರಿಸಲಾರದೆ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಅಲ್ಲದೆ ಜಾನುವಾರೊಂದನ್ನು ಸಾಕಲು ದಿನಕ್ಕೆ ಕನಿಷ್ಠ 30 ರೂ. ವೆಚ್ಚ ತಗಲುತ್ತದೆ. ಈ ಹಿನ್ನೆಲೆಯಲ್ಲಿ ನಿರುಪಯುಕ್ತ, ಉಳುಮೆಗೆ ಯೋಗ್ಯ ವಲ್ಲದ ಜಾನುವಾರುಗಳನ್ನು ಮಾರಾಟ ಮಾಡುವುದು ಬಡರೈತರಿಗೆ ಅನಿವಾರ್ಯವಾಗುತ್ತದೆ ಹಾಗೂ ಉತ್ತಮ ಜಾನುವಾರುಗಳನ್ನು ಖರೀದಿಸಲು ಸಾಧ್ಯವಾಗುತ್ತದೆ ಎಂದು ಮುಹಿಯುದ್ದೀನ್ ತಿಳಿಸಿದರು.
1964ರ ಗೋರಕ್ಷಣಾ ಕಾಯ್ದೆ 12 ವರ್ಷಕ್ಕೆ ಮೇಲ್ಪಟ್ಟಿರುವ ನಿರುಪಯುಕ್ತ ಜಾನುವಾರುಗಳನ್ನು ಆಹಾರವಾಗಿ ಬಳಸಬಹುದು ಎಂದು ಉಲ್ಲೇಖಿಸಿದೆ. ಆದರೆ ಬಿಜೆಪಿ ಸರಕಾರ ಬಡವರ ಆಹಾರ ಕಿತ್ತುಕೊಳ್ಳುವ ಉದ್ದೇಶದಿಂದ ಹೊಸ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಕಸಾಯಿಖಾನೆಗೆ ಅನುಮತಿ ಕೋರಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲ ರಿಗೆ ಮನವಿ ಸಲ್ಲಿಸಲಾಯಿತು. ಪಿಎಫ್‌ಐ ಜಿಲ್ಲಾಧ್ಯಕ್ಷ ಅಲ್ತಾಫ್, ಜಾತಿ ವಿನಾಶ ವೇದಿಕೆಯ ಹೂವಪ್ಪ, ಮಂಜುನಾಥ್ ಧರಣಿಯ ನೇತೃತ್ವ ವಹಿಸಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ