ಬುಧವಾರ, ಜನವರಿ 05, 2011

ಮಂಗಳೂರು; ಜನವರಿ 7 ರ ಶುಕ್ರವಾರ ಸಂಜೆ ನಗರದಲ್ಲಿ ’ಸ್ನೇಹ ಸಂವಾದ’- ಸೌಹಾರ್ದ ಕಾರ್ಯಕ್ರಮ

ನೈತಿಕ ಶಿಕ್ಷಣ, ಧರ್ಮಗಳ ತುಲನಾತ್ಮಕ ಅಧ್ಯಯನ, ಇಸ್ಲಾಮಿನ ಹಾಗೂ ಪ್ರವಾದಿಗಳ ಸಂದೇಶ ಪ್ರಚಾರ ಮುಂತಾದ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಪರಸ್ಪರ ಪ್ರೀತಿ ವಿಶ್ವಾಸಗಳನ್ನು ಪುನರ್ಜೀವಗೊಳಿಸುವ ಕೆಲಸ
ಪತ್ರಿಕಾ ಪ್ರಕಟಣೆ
image 

ಮಂಗಳೂರು, ಜನವರಿ ೫: ಸಮಾಜದ ನೈತಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಹಾಗೂ ಆರ್ಥಿಕ ಪ್ರಗತಿಗಾಗಿ ರೂಪುಗೊಂಡ ಯುವಕರ ಜಾಗೃತಿ ವೇದಿಕೆಯೇ ’ನ್ಯೂ ಏಜ್ ಇಂಡಿಯ ಫೋರಂ’ ಅಥವಾ ’ನೈಫ್’ ಎಂದರೆ ನವಪೀಳಿಗೆಯ ಭಾರತೀಯ ಒಕ್ಕೂಟ.
ಇದು ಒಂದು ಸ್ವತಂತ್ರ್ರ ವೇದಿಕೆಯಾಗಿದ್ದು ಪ್ರಚಲಿತ ಯಾವುದೇ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳೊಂದಿಗೆ ಇದಕ್ಕೆ ಸಂಬಂಧವಿಲ್ಲ ಹಾಗೂ ಅವುಗಳ ಶಾಖೆಯೋ ಉಪಶಾಖೆಯೋ ಅಲ್ಲ.

ಮನುಷ್ಯ ಸಹಜೀವಿ ಹಾಗೂ ಸಮಾಜಜೀವಿಯಾಗಿದ್ದಾನೆ. ಪರಸ್ಪರ ಕೂಡಿ ಬಾಳುವುದು ಮನುಷ್ಯನಿಗಿರುವ ಅತ್ಯುತ್ತಮ ಗುಣವಾಗಿದೆ. ಆದರೆ ಇಂದು ಇದಕ್ಕೆ ವ್ಯತಿರಿಕ್ತವಾಗಿ ಮನುಷ್ಯ ಮನುಷ್ಯರ ನಡುವೆ ದ್ವೇಷ, ವೈರತ್ವವನ್ನು ನಾವು ಕಾಣುತ್ತೆವೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಕೋಮು ಗಲಭೆಗಳು ಅಖಂಡ ಭಾರತದ ಭದ್ರತೆಗೆ ಮತ್ತು ಬೆಳವಣಿಗೆಗೆ ಮಾರಕವಾಗಿವೆ. ಕೆಲವು ಸ್ಥಾಪಿತ ಹಿತಾಸಕ್ತಿಗಳು ಈ ಕೋಮು ವೈಷಮ್ಯವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿರುವುದು ಕಾಲದ ಮಹಾ ದುರಂತವಾಗಿದೆ. ಹಾಗಾಗಿ ಪರಸ್ಪರ ಹೃದಯಗಳನ್ನು ಬೆಸೆಯುವ, ಮನುಷ್ಯ ಮನುಷ್ಯನನ್ನು ಒಗ್ಗೂಡಿ ಬಾಳುವಂತೆ ಮಾಡಬೇಕಾದುದು ಕಾಲದ ಬೇಡಿಕೆಯಾಗಿದೆ. ಧರ್ಮಗಳೆಂದರೆ ಜೀವನ ವ್ಯವಸ್ಥೆ.ಅದು ಪರಸ್ಪರ ಪ್ರೀತಿಯನ್ನು ಬೋಧಿಸುತ್ತದೆ. ಆದರೆ ದೇವ ನಿರ್ಮಿತ ಧರ್ಮವನ್ನು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ದುರುಪಯೋಗ ಮಾಡುತ್ತಿರುವುದು ಒಂದು ದುರಂತ.

ಪ್ರಸಕ್ತ ಪರಿಸ್ಥಿತಿಯನ್ನು ಅವಲೋಕಿಸಿದಾಗ ಇಂದಿನ ಈ ಕೋಮು ವೈಷಮ್ಯಕ್ಕೆ ಹಲವಾರು ಕಾರಣ ಕಂಡುಬರುತ್ತದೆ. ವಿಭಿನ್ನ ಸಮುದಾಯದವರು ಪರಸ್ಪರ ಸಂಸ್ಕೃತಿಯನ್ನು ಅರಿಯುವ ಪ್ರಯತ್ನ ಮಾಡದೇ, ಇರುವುದು, ತಪ್ಪು ಕಲ್ಪನೆಗಳನ್ನಿಟ್ಟುಕೊಂಡು ಅನ್ಯಸಮುದಾಯದವರನ್ನು ಸಂಶಯದ ದೃಷ್ಟಿಯಿಂದ ನೋಡುವುದು ಹಾಗೂ ರಾಜಕೀಯ ಪಿತೂರಿಗೆ ಸುಲಭದಲ್ಲಿ ಬೀಳುವುದು ಇತ್ಯಾದಿ.
ನ್ಯೂ ಏಜ್ ಇಂಡಿಯಾ ಘೋರಂ ’ನೈಫ್’ ಕಳೆದ ೬ ವರ್ಷಗಳಿಂದ ಸಾಮಾಜಿಕ ಶಾಂತಿ ಹಾಗೂ ಸಾಮರಸ್ಯಕ್ಕಾಗಿ ಅವಿರತವಾಗಿ ಪರಿಶ್ರಮಿಸುತ್ತಿದೆ ಹಾಗೂ ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನೈತಿಕ ಶಿಕ್ಷಣ, ಧರ್ಮಗಳ ತುಲನಾತ್ಮಕ ಅಧ್ಯಯನ, ಇಸ್ಲಾಮಿನ ಹಾಗೂ ಪ್ರವಾದಿಗಳ ಸಂದೇಶ ಪ್ರಚಾರ ಮುಂತಾದ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಪರಸ್ಪರ ಪ್ರೀತಿ ವಿಶ್ವಾಸಗಳನ್ನು ಪುನರ್ಜೀವಗೊಳಿಸುವ ಕೆಲಸವನ್ನು ಅದು ಮಾಡುತ್ತಿದೆ.

ಈ ನಿಟ್ಟಿನಲ್ಲಿ ನ್ಯೂ ಏಜ್ ಇಂಡಿಯಾ ಘೋರಂ (ನೈಫ್)ಪರಸ್ಪರ ಸಮುದಾಯಗಳ ನಡುವೆ ಸಂವಾದದ ಅಗತ್ಯವನ್ನು ಮನಗಂಡು ’ಸ್ನೇಹ ಸಂವಾದ’ಎಂಬ ಸೌಹಾರ್ದ ಕಾರ್ಯಕ್ರಮವನ್ನು ಜನವರಿ ೭ ರ ಶುಕ್ರವಾರ ಸಂಜೆ ೫ ಕ್ಕೆ ಬಲ್ಮಠ ಮಿಷನ್ ಕಂಪೌಂಡ್ ನಲ್ಲಿರುವ ಶಾಂತಿ ನಿಲಯದಲ್ಲಿ ಹಮ್ಮಿಕೊಂಡಿದೆ.
 ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಎಸೋಸಿಯೇಟ್ ಪ್ರೊಫೆಸರ್ ಡಾ/ ಲೋಕೇಶ್ ಕೆ.ಎಂ. ಮತ್ತು ಸೈಂಟ್ ಆನ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ/ ಎರಿಕ್ ಸಿ. ಲೋಬೊ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ವಹಿಸಲಿರುವರು. ವಿಷಯ ಮಂಡನೆಯನ್ನು ’ನೈಫ್’ ಅಧ್ಯಕ್ಷ ರಫೀ‌ಉದ್ದೀನ್ ಕುದ್ರೋಳಿ ಮಾಡಲಿರುವರು. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸುತ್ತೇವೆ.

ಅಧ್ಯಕ್ಷರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ