ಬುಧವಾರ, ಜನವರಿ 05, 2011

ಪಿಎಫ್‌ಐ ಕಾರ್ಯಕರ್ತರ ಮೇಲೆ ದೌರ್ಜನ್ಯ ಪ್ರಕರಣ: ‘ಬಂಟ್ವಾಳ ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆ’

harfatಮಂಗಳೂರು, ಜ.5: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರನ್ನು ಬಂಟ್ವಾಳ ಪೊಲೀಸರು ಡಿ.11ರಂದು ಅಕ್ರಮವಾಗಿ ಬಂಧಿಸಿ ದೌರ್ಜನ್ಯ ಎಸಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇ ಗೌಡ ಸೇರಿದಂತೆ ಇತರ ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯ ಹಾಗೂ ಹಲ್ಲೆಗೊಳಗಾದ ನವಾಝ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡುತ್ತಿದ್ದ ಅವರು, ಡಿ.12ರಂದು ಮೈಸೂರಿನಲ್ಲಿ ನಡೆದಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ನಾಯಕರ ಸಮಾವೇಶಕ್ಕೆ ಡಿ.11ರಂದು 8 ಮಂದಿ ಸದಸ್ಯರೊಂದಿಗೆ ನಾವು ಹೊರಟ್ಟಿದ್ದೆವು. ಅಂದು ರಾತ್ರಿ 10ಗಂಟೆಗೆ ನಾವು ಹೊರಟ್ಟಿದ್ದ ವಾಹನವನ್ನು ಬಿ.ಸಿ.ರೋಡಿನ ಕೈಕಂಬದ ಬಳಿ ತಡೆದ ಸುಮಾರು 10ರಿಂದ 15ರಷ್ಟಿದ್ದ ಪೊಲೀಸರ ತಂಡ ನಮಗೆ ರಿವಾಲ್ವರ್ ತೋರಿಸಿ ಬೆದರಿಸಿ ನಮ್ಮನ್ನು ಪೊಲೀಸ್ ವ್ಯಾನ್‌ಗೆ ಹತ್ತಿಸಿದರು. ನಮ್ಮಿಂದಿಗಿದ್ದ ಪೋಲಿಯೊ ಪೀಡಿತ ರಿಯಾಝ್‌ನನ್ನು ಕೂಡಾ ಪೊಲೀಸರು ಬಿಡಲಿಲ್ಲ. ಪೊಲೀಸ್ ವಾಹನ ಠಾಣೆಗೆ ತೆರಳುವವರೆಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ನಮ್ಮೆಲ್ಲರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಹಾಗೂ ಪೊಲೀಸ್ ಠಾಣೆಗೆ ತಲುಪಿದ ಬಳಿಕ ನಮ್ಮ ಬಟ್ಟೆಗಳನ್ನು ಬಿಚ್ಚಿ ಕಣ್ಣಿಗೆ ಬಟ್ಟೆ ಕಟ್ಟಿ ಆರು ಮಂದಿ ಪೊಲೀಸರು ನಿರಂತರವಾಗಿ ಹಲ್ಲೆಗೈದು ಮಾನಸಿಕ ವಾಗಿ ಹಿಂಸೆ ನೀಡಿದ್ದಾರೆ ಎಂದು ನವಾಝ್ ವಿವರಿಸಿದರು.
ಮರುದಿನ ಎಸ್‌ಪಿ ಸಹಿತ ಬೇರೆ ಬೇರೆ ಅಧಿಕಾರಿಗಳು ನಮ್ಮನ್ನು ವಿಚಾರಣೆ ನಡೆಸಿದ್ದಾರೆ. ನಂತರ ಬಂಟ್ವಾಳ ವೃತ್ತ ನಿರೀಕ್ಷಕ ನಂಜುಂಡೇಗೌಡ ವಿಚಾರಣೆ ನಡೆಸಿ ಗ್ರಾಮಾಂತರ ಠಾಣೆಗೆ ಒಯ್ದು ಕೈಕಾಲುಗಳನ್ನು ಕಟ್ಟಿ ಹಾಕಿ ಹಿಂಸಿಸಿದ್ದಾರೆ. ಕೆಲವು ದಿನಗಳ ಹಿಂದೆ ಉಳ್ಳಾಲ ಕುಂಪಲದ ಮಸೀದಿಗೆ ಅದ್ಯಾರೋ ಮಾಂಸದ ಕಟ್ಟೊಂದನ್ನು ಎಸೆದಿದ್ದು, ಅದನ್ನು ತಾನೇ ಎಸೆದನೆಂದು ಒಪ್ಪಿಕೊಳ್ಳಲು ತನಗೆ ಕರೆಂಟ್ ಶಾಕ್ ನೀಡಿ ಎರಡು ಸಲ ರೋಲರ್ ಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಹಾಗೂ ತನ್ನಿಂದ ಬಲವಂತವಾಗಿ ಒಪ್ಪಿಗೆ ಹೇಳಿಕೆಯನ್ನು ಪಡೆದು ಕೊಂಡಿದ್ದಾರೆ ಎಂದು ನವಾಝ್ ಆರೋಪಿಸಿದರು.
ಡಿ.13ರಂದು ಮಧ್ಯಾಹ್ನ 1:30ಕ್ಕೆ ಪೇದೆಗಳಾದ ಸಂಜೀವ, ಉದಯ, ಲೋಕೇಶ, ವಾಸು ಮತ್ತು ಪಳನಿ ಎಂಬವರು ನಮ್ಮನ್ನು ಕೋರ್ಟ್‌ಗೆ ಹಾಜರು ಪಡಿಸುವುದಾಗಿ ಹೇಳಿ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದ ಹೊರಗೆ ಸಂಜೆ 6 ಗಂಟೆಯವರೆಗೆ ವ್ಯಾನನ್ನು ನಿಲ್ಲಿಸಿದ್ದಾರೆ. ಕರ್ತವ್ಯದ ವೇಳೆಯಲ್ಲೇ ಪೊಲೀಸರು ನಮ್ಮೆಲ್ಲರ ಮುಂದೆ ಮದ್ಯಪಾನ ಮಾಡಿದ್ದಾರೆ. ಖಾಲಿ ಪೇಪರ್‌ಗೆ ನಮ್ಮಿಂದ ಸಹಿ ಪಡೆದಿದ್ದಾರೆ. ಯಾವುದೇ ಕಾರಣವಿಲ್ಲದೆ ನಮ್ಮನ್ನು ಕ್ರಿಮಿನಲ್‌ಗಳಂತೆ ನಡೆಸಿಕೊಂಡಿದ್ದಾರೆ ಎಂದು ಅಲವತ್ತುಗೊಂಡ ನವಾಝ್, ನ್ಯಾಯ ಸಿಗುವವರೆಗೆ ಕಾನೂನು ರೀತಿಯ ಹೋರಾಟ ಮುಂದುವರಿಸ ಲಿದ್ದೇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮುಹಮ್ಮದ್ ಶರೀಫ್, ರಶೀದ್,ರಿಯಾಝ್, ನೌಶಾದ್, ಸೈಫುಲ್ಲಾ, ನೂರುಲ್ಲಾ, ಮುಹಮ್ಮದ್ ಅನ್ಸಾರ್, ಅಶ್ರಫ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ