ಮೊರಾದಾಬಾದ್, ಡಿ.19: ಇಬ್ಬರು ದಲಿತ ಸಹೋದರಿಯರನ್ನು ಸಜೀವವಾಗಿ ದಹಿಸಿದ ಘಟನೆ ಇಲ್ಲಿನ ಕೋತಿವಾಲ್ ಸಮೀಪ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸಜೀವವಾಗಿ ದಹಿಸಿದ ಗುಂಪಿನಲ್ಲಿದ್ದ 12 ಜನರನ್ನು ಯುವತಿಯ ತಾಯಿ ಗುರುತಿಸಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ವರಿಷ್ಠ ರಾಹುಲ್ ಯಾದವೇಂದ್ರ ತಿಳಿಸಿದ್ದಾರೆ.
ಪೌರ ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜೇಶ್ ಎಂಬಾತ ಡಿಸೆಂಬರ್ 9ರಂದು ನಡೆದ ದರೋಡೆ ಪ್ರಕರಣವೊಂದರಲ್ಲಿ ಮಹಿಳೆ ಮತ್ತು ಆಕೆಯ 10 ವರ್ಷದ ಮಗಳನ್ನು ಕೊಂದ ಆರೋಪ ಎದುರಿಸುತ್ತಿದ್ದು, ಸದ್ಯ ಪರಾರಿಯಾಗಿದ್ದಾನೆ. ಈ ಸಂಬಂಧ ಪೊಲೀಸರು ಆತನ ಸಹೋದರನನ್ನು ಬಂಧಿಸಿದ್ದಾರೆ.
ಈ ಘಟನೆಯ ವಿರುದ್ಧ ಕೆಲವರು ಇವರ ಮನೆ ಯೆದುರು ಪ್ರತಿಭಟನೆ ನಡೆಸುತ್ತಿದ್ದಾಗ ಗುಂಪಿನಲ್ಲಿದ್ದ ಕೆಲವರು ಮನೆಗೆ ಬೆಂಕಿ ಹಚ್ಚಿದ್ದು, ಸಹೋದರಿ ಯರಾದ ಗೀತಾ ಮತ್ತು ಮೋನು ಬೆಂಕಿಗೆ ಸಿಲುಕಿ ಸಜೀವವಾಗಿ ದಹನವಾಗಿದ್ದಾರೆ. ಅವರ ತಾಯಿ ರಾಜೋ ಪಾರಾಗಿದ್ದಾರೆ ಎಂದು ಅವರು ತಿಳಿಸಿದರು.
ಗುಂಪು ಎರಡು ದಿನಗಳ ಹಿಂದೆಯೇ ತಮ್ಮ ಮನೆ ಮುಂದೆ ಬಂದು ಬೆಂಕಿ ಹಚ್ಚುವುದಾಗಿ ಬೆದರಿಸಿ ಹೋಗಿತ್ತು. ಈ ಬಗ್ಗೆ ತಾವು ಪೊಲೀಸರಿಗೆ ದೂರು ನೀಡಿ ತಮಗೆ ರಕ್ಷಣೆ ನೀಡುವಂತೆ ಕೋರಿದ್ದರೂ ಪೊಲೀಸರು ಯಾವುದೇ ಸಹಾಯ ಮಾಡಲಿಲ್ಲ ಮತ್ತು ಘಟನೆ ನಡೆದ ನಂತರವೂ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎಂದು ಮೃತ ಮಕ್ಕಳ ತಾಯಿ ರಾಜೋ ಆರೋಪಿಸಿದ್ದಾರೆ.
ಈ ಬಗ್ಗೆ ಅವರು ನಮ್ಮನ್ನು ಭೇಟಿ ಮಾಡಿರಲಿಲ್ಲ. ಅಲ್ಲದೆ ಈ ಪ್ರಕರಣ ಆಕಸ್ಮಿಕ ಅಥವಾ ಆತ್ಮಹತ್ಯೆಯಾಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದ್ದು, ಯಾವುದೇ ಗುಂಪು ಈ ಕೃತ್ಯವೆಸಗಿಲ್ಲ ಎಂದು ಡಿಐಜಿ ಅಶೋಕ್ ಕುಮಾರ್ ಆರಂಭದಲ್ಲಿ ಹೇಳಿದ್ದರೂ ನಂತರ ತನಿಖೆ ನಡೆಸುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ