
ಬೆಂಗಳೂರು, ಡಿ. 2: ರಾಜಕೀಯದಲ್ಲಿ ನಡೆಯುತ್ತಿರುವ ಎಲ್ಲ ಸ್ಥಿತ್ಯಂತರಗಳಿಗೆ ಮತ್ತು ಭ್ರಷ್ಟಾಚಾರಗಳಿಗೆ ಆರೆಸ್ಸೆಸ್ ಸಂಘಟನೆ ಪರೋಕ್ಷವಾಗಿ ಕಾರಣವಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಪ್ರೊ.ನಗರಿ ಬಾಬಯ್ಯ ಆರೋಪಿಸಿದ್ದಾರೆ.
ಮುಖ್ಯಮಂತ್ರಿಗಳು ತಮ್ಮ ಭ್ರಷ್ಟಾಚಾರಗಳ ಕುರಿತು ಜನತೆಗೆ ಉತ್ತರ ಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ಜನಶಕ್ತಿ ಒಕ್ಕೂಟವು ನ.27ರಿಂದ ಡಿ.5ವರೆಗೆ ರಾಜ್ಯಾದ್ಯಂತ ‘ಮುಖ್ಯಮಂತ್ರಿಗಳೆ ಜನತೆಗೆ ಉತ್ತರಿಸಿ’ ಆಂದೋಲನ ಹಮ್ಮಿಕೊಂಡಿದ್ದು, ಆಂದೋಲನವು ಗುರುವಾರ ನಗರವನ್ನು ಪ್ರವೇಶಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳ ಭ್ರಷ್ಟಾಚಾರದ ಬಗ್ಗೆ ವಿರೋಧ ಪಕ್ಷಗಳ ನಾಯಕರು ಪ್ರಶ್ನಿಸಿದರೆ ಮುಖ್ಯಮಂತ್ರಿಗಳು ‘ನೀವೇನೂ ತಿಂದಿಲ್ವಾ’ ಎಂದು ಮರು ಪ್ರಶ್ನಿಸುತ್ತಾ ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಮುಖ್ಯಮಂತ್ರಿಗಳಿಗೆ ಜನತೆ ಏನು ತಿಳಿದುಕೊಳ್ಳಬಹುದು ಎಂಬ ಬಗ್ಗೆ ಸ್ವಲ್ಪವೂ ಭಯವಿಲ್ಲ. ಅವರು ಉತ್ತರಿಸಬೇಕಿರುವುದು ವಿರೋಧ ಪಕ್ಷಗಳಿಗೆ ಅಥವಾ ಹೈಕಮಾಂಡ್‌ಗೆ ಅಲ್ಲ ಎನ್ನುವುದನ್ನು ನೆನಪಿಡಬೇಕು ಎಂದು ಅವರು ಅಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ಇಂತಹ ಮರುಪ್ರಶ್ನೆಗೆ ಹೆದರಿದ ವಿರೋಧ ಪಕ್ಷಗಳು ಸಮಸ್ಯೆಯನ್ನು ಬಿಜೆಪಿ ಹೈಕಮಾಂಡ್ ಮುಂದೆ ಒಯ್ದರು. ಆದರೆ ಯಡಿಯೂರಪ್ಪನವರು ತಮ್ಮನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಿದರೆ ತಾವು ಪಕ್ಷವನ್ನೇ ತೊರೆಯುವುದಾಗಿ ಬೆದರಿಸಿದ್ದರಿಂದ ಹೈಕಮಾಂಡ್ ಯಡಿಯೂರಪ್ಪ ಸಾಚಾ ಇದ್ದಾನೆ ಎಂಬ ತೀರ್ಪನ್ನು ನೀಡಿದವು ಎಂದು ಅವರು ವ್ಯಂಗ್ಯವಾಡಿದರು.
ಆಂದೋಲನದ ಕಾರ್ಯಕರ್ತರು ಬೆಳಗ್ಗೆ 10.30ಕ್ಕೆ ಬನ್ನಪ್ಪ ಪಾರ್ಕ್‌ನಿಂದ ಪುರಭವನದವರೆಗೆ ಮೆರವಣಿಗೆ ಹೊರಟು, ಪುರಭವನದ ಎದುರು ಕ್ರಾಂತಿಗೀತೆ, ಬೀದಿ ನಾಟಕಗಳ ಮೂಲಕ ಮುಖ್ಯಮಂತ್ರಿಗಳ ಭ್ರಷ್ಟಾಚಾರವನ್ನು ಜನತೆಯ ಮುಂದಿಟ್ಟರು.
ಪ್ರಗತಿಪರ ಚಿಂತಕ ಶಿವಸುಂದರ್, ಕೋಮು ಸೌಹಾರ್ದ ವೇದಿಕೆಯ ಕೆ.ಎಲ್.ಅಶೋಕ್, ಜನಶಕ್ತಿಯ ಎಸ್.ಎಚ್.ವಾಸು ಮತ್ತು ಕುಮಾರ ಸಮತಳ, ಕಾರ್ಮಿಕ ಮುಖಂಡ ಬಾಲಣ್ಣ, ಪಿಎಫ್‌ಐನ ಸಮೀರ್, ಸಮತಾ ಮಹಿಳಾ ವೇದಿಕೆಯ ಮಲ್ಲಿಗೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ