*ತಪ್ಪಿತಸ್ಥರ ರಕ್ಷಣೆಗೆ ಸಿಎಂ ಹುನ್ನಾರ *ಲೋಕಾಯುಕ್ತ ದುರ್ಬಲಗೊಳಿಸುವ ಯತ್ನ
ಬೆಂಗಳೂರು, ಡಿ.5: ಕೆಲವು ದಿನಗಳಿಂದ ಸರಕಾರದ ಬೆಳವಣಿಗೆಗಳನ್ನು ವೌನವಾಗಿ ಗಮನಿಸುತ್ತಿದ್ದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಈಗ ಮತ್ತೊಮ್ಮೆ ಸರಕಾರದ ವಿರುದ್ಧ ಗುಡುಗಿದ್ದಾರೆ. ಭೂಹಗರಣಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿರುವ ಸರಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯಪಾಲರು, ಸರಕಾರದ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.
ಲೋಕಾಯುಕ್ತರು ಪ್ರಾಥಮಿಕ ಹಂತದ ತನಿಖೆ ಪೂರ್ಣಗೊಳಿಸಿದ್ದರೂ, ಭೂಹಗರಣಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವ ಮೂಲಕ ತಪ್ಪಿತಸ್ಥರನ್ನು ಶಿಕ್ಷೆಯಿಂದ ತಪ್ಪಿಸಲು ಮುಖ್ಯಮಂತ್ರಿಗಳು ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ನಡೆದ ಭೂಹಗರಣಗಳ ಬಗ್ಗೆ ಲೋಕಾಯುಕ್ತ ತನಿಖೆಯೇ ಸೂಕ್ತ. ಅಪರಾಧಗಳು ನಡೆದು ಆರೋಪಗಳು ಕೇಳಿಬಂದಲ್ಲಿ ಅದಕ್ಕೆ ಪೊಲೀಸ್ ತನಿಖೆ ಬಿಟ್ಟು ಬೇರೆ ಮಾರ್ಗ ಇಲ್ಲ. ಇಷ್ಟೊಂದು ದೊಡ್ಡ ಹಗರಣಗಳ ತನಿಖೆ ನಡೆಸಲು ಲೋಕಾಯುಕ್ತರಿದ್ದಾರೆ. ಅವರ ಬಳಿ ಪೊಲೀಸ್ ಬಲ ಇದೆ. ಅಲ್ಲದೇ ಸರಕಾರದ ಬಳಿಯೂ ಪೊಲೀಸ್ ಇದೆ. ಅದನ್ನು ಬಿಟ್ಟು ನ್ಯಾಯಾಂಗ ತನಿಖೆಗೆ ಒಪ್ಪಿಸುವ ಮೂಲಕ ಮುಖ್ಯಮಂತ್ರಿಗಳು ಸಣ್ಣತನ ತೊರಿದ್ದಾರೆ ಎಂದು ರಾಜ್ಯಪಾಲರು ವಾಗ್ದಾಳಿ ನಡೆಸಿದರು.
ಭೂಹಗರಣಗಳಿಗೆ ಸಂಬಂಧಿಸಿದಂತೆ 1993ರಲ್ಲಿ ನಾರಾಯಣ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನವನ್ನು ಉಲ್ಲೇಖಿಸಿದ ರಾಜ್ಯಪಾಲರು, ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ಪೊಲೀಸರು ನಡೆಸುವಂತೆ ಲೋಕಾಯುಕ್ತರು ತನಿಖೆ ನಡೆಸಬಹುದು.
ಆದರೆ ಭ್ರಷ್ಟಾಚಾರವನ್ನು ತಡೆಗಟ್ಟಲು ತಾನೇ ಹುಟ್ಟು ಹಾಕಿದ ಲೋಕಾಯುಕ್ತದಂತಹ ಸಂಸ್ಥೆಯ ಕಡಿವಾಣಕ್ಕೆ ಅಥವಾ ದುರ್ಬಲಗೊಳಿಸುವ ಕ್ರಮಕ್ಕೆ ಮುಂದಾಗಿರುವ ಸರಕಾರ ಲೋಕಾಯುಕ್ತದ ಬಗ್ಗೆ ಅಪನಂಬಿಕೆ ಮತ್ತು ಗೊಂದಲ ಸೃಷ್ಟಿಸುತ್ತಿದೆ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನನ್ನೇ ಹೊರದಬ್ಬುವ ಪಿತೂರಿ: ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದಾಗ ನನ್ನನ್ನೇ ಈ ರಾಜ್ಯದಿಂದ ಹೊರದಬ್ಬುವ ಪಿತೂರಿ ನಡೆಯಿತು ಎಂದು ಆರೋಪಿಸಿದ ರಾಜ್ಯಪಾಲರು, ಕೆಲ ವರ್ಷಗಳಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ರಾಜ್ಯದ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದು ಅದರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಸರಕಾರದ ಗಮನಕ್ಕೆ ತಂದಾಗ ಅದಕ್ಕೆ ಕಿವಿಗೊಡಲಿಲ್ಲ. ಬದಲಾಗಿ ಬಿಜೆಪಿ ನಾಯಕರು ನನ್ನ ವಿರುದ್ದ ಸಂಚು ರೂಪಿಸಿದರು ಎಂದು ದೂರಿದ ಅವರು, ನಾನು ಏನೇ ಮಾಡಿದರೂ ಸಂವಿಧಾನ ಬದ್ಧವಾಗಿ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ