ಕಾಸರಗೋಡು, ಡಿ.2: ಲವ್ ಜಿಹಾದ್ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲದ ಪುನರುಚ್ಚಿಸಿರುವ ಕೇರಳ ಹೈಕೋರ್ಟ್ ಪ್ರಕರಣಕ್ಕೆ ತೆರೆ ಎಳೆದಿದೆ. ಭಾರೀ ವಿವಾದಕ್ಕೆ ಕಾರಣವಾಗಿದ್ದ ಲವ್ ಜಿಹಾದ್‌ಗೆ ರಾಜ್ಯದಲ್ಲಿ ಯಾವುದೇ ದಾಖಲೆಗಳಿಲ್ಲ ಎಂದು ಹೈಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಕಳೆದ ಎರಡು ವರ್ಷಗಳಿಂದ ಲವ್ ಜಿಹಾದ್ ವಿವಾದವು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು.
ಲವ್ ಜಿಹಾದ್ ಪ್ರಕರಣದ ಆರೋಪಕ್ಕೆ ಗುರಿಯಾಗಿರುವ ಪತ್ತನಂತಿಟ್ಟದ ಶಹನಾಝ್ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಪರಿಗಣನೆಗೆ ತೆಗೆದುಕೊಂಡಿತ್ತು. ತನ್ನ ವಿರುದ್ಧ ತಿರುವನಂತಪುರ ಪೊಲೀಸರು ದಾಖಲಿಸಿರುವ ದೂರನ್ನು ರದ್ದುಗೊಳಿಸಬೇಕು. ವಿಚಾರಣೆಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಒತ್ತಾಯಿಸಿ ಶಹನಾಝ್ ನ್ಯಾಯಾಲಯದ ಮೊರೆ ಹೋಗಿದ್ದರು.
ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ಜಸ್ಟಿಸ್ ಶಶಿಧರನ್ ನಂಬಿಯಾರ್ ಒಂದು ಸಮುದಾಯವನ್ನು ಆರೋಪಕ್ಕೆ ಗುರಿಯಾಗಿಸುವ ಪ್ರಕರಣವನ್ನು ಕೊನೆಗೊಳಿಸುವಂತೆ ಪೊಲೀಸರಿಗೆ ಆದೇಶಿಸಿದ್ದರು. ಶಹನಾಝ್‌ರ ಪ್ರಕರಣದ ಕುರಿತು ವರದಿ ಕೋರಿದ್ದರು. ಅದರಂತೆ ಎರ್ನಾಕುಲಂ ಮತ್ತು ತಿರುವನಂತಪುರದ ಜಿಲ್ಲಾ ನ್ಯಾಯಾಲಯಗಳಿಗೆ ಸಲ್ಲಿಸಲ್ಪಟ್ಟಿದ್ದ ತನಿಖಾ ವರದಿಯನ್ನು ಪೊಲೀಸರು ಹೈಕೋರ್ಟ್‌ಗೆ ಸಲ್ಲಿಸಿದ್ದರು. ಆದರೆ ಈ ವರದಿಗೆ ಯಾವುದೇ ಪುರಾವೆಗಳಿಲ್ಲ ಎನ್ನಲಾಗಿದೆ.
ಪತ್ತನಂತಿಟ್ಟದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಇಸ್ಲಾಂ ಮತ ಸ್ವೀಕರಿಸಿದ್ದಾರೆ ಎಂಬ ವಿಚಾರದೊಂದಿಗೆ ಲವ್ ಜಿಹಾದ್ ವಿವಾದ ಕೇರಳದಲ್ಲಿ ಹೊಸ ವಿವಾದ ಸೃಷ್ಟಿಸಿತ್ತು. ಆದರೆ ಲವ್ ಜಿಹಾದ್ ಆರೋಪಕ್ಕೆ ಯಾವುದೇ ಸಾಕ್ಷಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ.
ಕೇರಳದಲ್ಲಿ ಉಗ್ರವಾದದ ಮರೆಯಲ್ಲಿ ಲವ್ ಜಿಹಾದ್ ಹೆಸರಿನಲ್ಲಿ ಅನ್ಯ ಜಾತಿಯವರನ್ನು ಮತಾಂತರಗೊಳಿಸುತ್ತಿದ್ದಾರೆ ಎಂಬ ಆರೋಪ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿತ್ತು. ಬಳಿಕ ಇದು ಹಲವು ವಿವಾದಗಳಿಗೂ ಕಾರಣವಾಗಿತ್ತು. ಆದರೆ ಲವ್ ಜಿಹಾದ್ ಎಂಬ ಆರೋ1ಕ್ಕೆ ಯಾವುದೇ ಸಾಕ್ಷಾಧಾರಗಳು ಲಭ್ಯವಾಗದಿರುವ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಅಂತ್ಯ ಹಾಡುವಂತೆ ಹೈಕೋರ್ಟ್ ಆದೇಶಿಸಿತ್ತು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ