ಶುಕ್ರವಾರ, ಡಿಸೆಂಬರ್ 17, 2010

ಬುದ್ಧಿವಂತ’ರ ನರಬಲಿ! (( ವಾರ್ತಾಭಾರತಿಯ ಸಂಪಾದಕೀಯ ))

ಇದು ಸಂಭವಿಸಿರುವುದು ಗುಲ್ಬರ್ಗದಲ್ಲೋ, ಉತ್ತರ ಕರ್ನಾಟಕದ ಇನ್ನೆಲ್ಲೋ ಅಲ್ಲ. ಬುದ್ಧಿವಂತರ ಜಿಲ್ಲೆ ಅನ್ನಿಸಿಕೊಂಡಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಮೂರು ವರ್ಷದ ಮಗುವನ್ನು ವಾಮಾಚಾರ ಕ್ಕಾಗಿ ಕೊಂದು ಹಾಕಲಾಗಿದೆ. ಈ ಘಟನೆಗೆ ಸಂಬಂಧ ಪಟ್ಟಂತೆ ಓರ್ವ ಮಹಿಳೆಯ ಸಹಿತ ಮೂವರನ್ನು ಬಂಧಿಸಲಾಗಿದೆ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಾದ್ಯಂತ ಸುದ್ದಿ ಯಾಗುತ್ತಿರುವುದು ಇಂತಹದೇ ಸಂಗತಿಗಳಿಗೆ.

ಮಡೆಸ್ನಾನ, ಅಜಲುಪದ್ಧತಿ, ಪೇಜಾವರರ ವೈಷ್ಣವ ಧೀಕ್ಷೆ ಹೀಗೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೀರ್ತಿ ನಾಲ್ದೆಸೆಗೆ ಹಬ್ಬುತ್ತಿದೆ. ಇದೀಗ ಅವೆಲ್ಲವುಗಳಿಗೆ ಕಲಶವಿಟ್ಟಂತೆ ನರಬಲಿ ಘಟನೆ ಸಂಭವಿಸಿದೆ. ಇದರ ವಿರುದ್ಧ ಧ್ವನಿಯೆತ್ತಬೇಕಾದ ಸ್ವಾಮೀಜಿಗಳು, ಸಮಾಜ ಸುಧಾರಕರು, ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನೂ ಬಾಯಿ ಮುಚ್ಚಿ ಕುಳಿತಿದ್ದಾರೆ. ಬುದ್ಧಿವಂತರ ಮೆದುಳಿನ ಆಳದಲ್ಲಿ ಬಚ್ಚಿಟ್ಟುಕೊಂಡಿರುವ ಈ ಕ್ರೌರ್ಯಕ್ಕೆ ದಕ್ಷಿಣಕನ್ನಡ ಜಿಲ್ಲೆ ತಲ್ಲಣಿಸಿದಂತೆ ಕಾಣುತ್ತಿಲ್ಲ. ಇಲ್ಲಿ ನಡೆಯುವ ಕೋಮುಗಲಭೆ, ಕ್ರೈಮ್ ಇತ್ಯಾದಿಗಳಿಂದ ಜನರ ಮನಸ್ಸು ಜಡ್ಡುಗಟ್ಟಿರಬಹುದೋ ಎಂಬ ಅನುಮಾನ ಪ್ರಜ್ಞಾವಂತರನ್ನು ಕಾಡತೊಡಗಿದೆ.

ಉತ್ತರ ಕರ್ನಾಟಕದಲ್ಲಿ ಆಗಾಗ ನರಬಲಿ ಘಟನೆಗಳು ಬೆಳಕಿಗೆ ಬರುತ್ತಿರುತ್ತದೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಕ್ಷೇತ್ರವಾದ ಗುಲ್ಬರ್ಗವಂತೂ ನರಬಲಿಗೆ ಕುಖ್ಯಾತವಾಗಿದೆ. ದೇವತೆಯನ್ನು ಸಂತೃಪ್ತಿ ಪಡಿಸಲು, ನಿಧಿ ಅನ್ವೇಷಣೆಗಾಗಿ ಈ ಬಲಿ ನಡೆಯುವುದು ಹೆಚ್ಚು. ಇಲ್ಲಿ ಮನುಷ್ಯನ ಅಜ್ಞಾನಕ್ಕಿಂತ, ಅವನೊಳಗಿನ ಕ್ರೌರ್ಯವೇ ವಿಜೃಂಭಿಸುತ್ತದೆ. ಇದನ್ನು ವೌಢ್ಯ, ಜನರ ಮೂಢ ಭಕ್ತಿ ಎಂದು ಬಣ್ಣಿಸಿ ಸುಮ್ಮನಿರಲು ಸಾಧ್ಯವಿಲ್ಲ. ಹಾಗೆ ನೋಡಿದರೆ ಇದು ವೌಢ್ಯವೇ ಅಲ್ಲ.

ಸ್ವಾರ್ಥ ಮತ್ತು ಕ್ರೌರ್ಯವೇ ನರಬಲಿಗೆ ಮುಖ್ಯ ಕಾರಣ. ಅದಾವ ದಾರಿಯಾದರೂ ಸರಿ, ಸಂಪತ್ತನ್ನು ತನ್ನದಾಗಿಸಿಕೊಳ್ಳಬೇಕು ಎಂದು ಹೊರಡುವ ಸ್ವಾರ್ಥಿಯಲ್ಲಿ ಕ್ರೌರ್ಯ, ಹಿಂಸೆ ಮಡುಗಟ್ಟಿದರೆ ‘ನರಬಲಿ’ಯಂತಹ ಘಟನೆ ನಡೆಯುತ್ತದೆ. ಸಣ್ಣ ಮಗುವನ್ನು ಕೊಲ್ಲುವಾ ಗಲೂ ಅವರ ಹೃದಯ ಕರಗುವುದಿಲ್ಲ. ಭಾಗಶಃ ಇವರು ಮಾನಸಿಕ ಅಸ್ವಸ್ಥರೂ ಆಗಿರುತ್ತಾರೆ. ಸೆರೆಮನೆ ಮತ್ತು ಹುಚ್ಚಾಸ್ಪತ್ರೆ ಎರಡಕ್ಕೂ ಸಮಾನವಾಗಿ ಇವರು ಅರ್ಹ ರಾಗಿರುತ್ತಾರೆ. ಇವರೊಳಗಿನ ಕ್ರೌರ್ಯಕ್ಕೆ ಕುಮ್ಮಕ್ಕು ಸಿಕ್ಕಿದರೆ ಅದು ಮುಂದಕ್ಕೆ ಬೇರೆ ಬೇರೆ ರೂಪವನ್ನು ಪಡೆಯಬಹುದು.

ಮಡೆಸ್ನಾನ, ಅಜಲು ಇವನ್ನೆಲ್ಲ ಪ್ರೋತ್ಸಾಹಿಸಿ ಕೊಂಡು ಬಂದಂತೆಯೇ ನಿಧಾನಕ್ಕೆ ಇದು ಮನುಷ್ಯನನ್ನು ಹಂತಹಂತವಾಗಿ ನರಬಲಿ ಯೆಡೆಗೆ ತಲುಪಿಸುತ್ತದೆ. ಬಹುಶಃ ಧಾರ್ಮಿಕ ವೌಢ್ಯಗಳ ಕೊನೆಯ ಹಂತ ಈ ‘ನರಬಲಿ’ ಯಾಗಿರಬಹುದು.

ನರಬಲಿಗೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದೆ. ಆದರೆ ಇವರನ್ನು ಬಂಧಿಸಿದಾಕ್ಷಣ ಈ ಕ್ರೌರ್ಯಕ್ಕೆ ಕಡಿವಾಣ ಹಾಕಲು ಸಾಧ್ಯವೆ? ಎಲ್ಲಿಯವರೆಗೆ ವಾಮಾಚಾರವನ್ನು ನಂಬುವ ಮನಸ್ಸುಗಳಿ ರುತ್ತವೆಯೋ, ಅಲ್ಲಿಯವರೆಗೆ ಮತ್ತೆ ಮತ್ತೆ ನರಬಲಿ ಕೊಡುವ ‘ಮಂತ್ರವಾದಿ’ಗಳು ಹುಟ್ಟುತ್ತಲೇ ಇರುತ್ತಾರೆ. ನಮ್ಮ ದುರದೃಷ್ಟಕ್ಕೆ ಈ ನಾಡಿನ ಮುಖ್ಯಮಂತ್ರಿ ವಾಮಾಚಾರ ವನ್ನು ನಂಬುತ್ತಾರೆ. ನನ್ನ ವಿರುದ್ಧ ‘ವಾಮಾಚಾರ’ ಮಾಡಲಾಗಿದೆ ಎಂದು ಸಾರ್ವಜನಿಕವಾಗಿ ಅಲವತ್ತುಕೊಳ್ಳುತ್ತಾರೆ.

ವಿಧಾನಸೌಧದ ಮುಂದೆ ಕೋಳಿಯ ತಲೆ, ನಿಂಬೆಹಣ್ಣು ಪತ್ತೆಯಾಗಿರುವುದು ರಾಜ್ಯಾದ್ಯಂತ ಚರ್ಚೆಯ ವಸ್ತುವಾಗುತ್ತದೆ. ಜ್ಯೋತಿಷಿಗಳ ಮಾತು ಕೇಳಿ ಮುಖ್ಯಮಂತ್ರಿ ಅನ್ನಿಸಿಕೊಂಡವರು ವಿಧಾನಸೌಧದ ಗೇಟು ಗಳಿಗೇ ಬೀಗ ಜಡಿಯುತ್ತಾರೆ. ವಿರೋಧ ಪಕ್ಷದ ನಾಯಕರೇನು ಕಡಿಮೆಯಿಲ್ಲ. ಮಾಜಿ ಪ್ರಧಾನಿ ದೇವೇಗೌಡರಂತೂ ಈ ವಾಮಾಚಾರಗಳ ಮೇಲೆ ಭಾರಿ ನಂಬಿಕೆಯ ನ್ನಿಟ್ಟವರು. ಹಲವು ಮಂತ್ರವಾದಿಗಳನ್ನು ಅವರು ಸಾಕಿಕೊಂಡಿದ್ದಾರೆ.

ವಿರೋಧ ಪಕ್ಷದ ನಾಯಕ ಆಡಳಿತ ಪಕ್ಷದ ನಾಯಕನಿಗೆ ವಾಮಾಚಾರ ಮಾಡಲು ಮುಂದಾದರೆ, ಆಡಳಿತ ಪಕ್ಷದ ನಾಯಕ ವಿರೋಧ ಪಕ್ಷದ ನಾಯಕನಿಗೆ ಪ್ರತಿ ವಾಮಾಚಾರ ಮಾಡು ತ್ತಾನೆ. ಇಂದು ವಾಮಾಚಾರವೆನ್ನುವುದು ರಾಜಕೀಯದಲ್ಲಿ ‘ಮಹತ್ವ’ದ ಅಸ್ತ್ರವಾಗಿದೆ. ಈ ನಾಡನ್ನು ಮುನ್ನಡೆಸುವ ಸುಶಿಕ್ಷಿತ ನಾಯಕರೇ ಹೀಗೆ ವಾಮಾಚಾರದ ಹಿಂದೆ ಬಿದ್ದ ಮೇಲೆ ಉಳಿದವರ ಪಾಡೇನಾಗಬೇಕು.

ಈ ರಾಜ್ಯದಲ್ಲಿ ವಾಮಾಚಾರಕ್ಕೆ ಒಂದು ಗಟ್ಟಿ ತಳಹದಿಯನ್ನು ಕೊಟ್ಟವರೇ ನಮ್ಮನ್ನಾಳುವ ನಾಯಕರು. ವಿಶ್ವವಿದ್ಯಾಲಯಗಳನ್ನು ಕಪಟ ಜ್ಯೋತಿಷಿಗಳ ಆವಾಸಸ್ಥಾನ ಮಾಡುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ವಿಧಾನಸೌಧದೊಳಗೆ ಹೋಮ ಹವನ ಮಾಡುತ್ತಾರೆ. ಪ್ರತಿ ರಾಜಕಾರಣಿಗಳೂ ತಮ್ಮದೇ ಆದ ಭಟ್ಟರನ್ನು, ಮಂತ್ರವಾದಿಗಳನ್ನು ಸಾಕುತ್ತಿದ್ದಾರೆ. ರಾಜಕಾರಣಿಗಳು ವಾಮಾಚಾರಕ್ಕಾಗಿ ಕನ್ನಡ ನಾಡನ್ನೇ ಬಲಿಕೊಡುತ್ತಿದ್ದಾರೆ.

ಇಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರ, ಲೂಟಿ ಇವೆಲ್ಲವೂ ರಾಜಕಾರಣಿಗಳ ವಾಮಾಚಾರದ ಒಂದು ಭಾಗವೇ ಆಗಿದೆ. ಅವರ ಈ ವಾಮಾಚಾರಕ್ಕೆ ನರಬಲಿ ಯಾಗಿದ್ದಾಳೆ ಕನ್ನಡ ತಾಯಿ. ಈ ನಾಡಿನ ಸ್ವಾಮೀಜಿಗಳು, ಮಠಗಳು ಸದಾಚಾರವನ್ನು ಬೆಂಬಲಿಸದೇ, ಈ ‘ವಾಮಾಚಾರ’ಕ್ಕೇ ತಮ್ಮ ಬೆಂಬಲವನ್ನು ನೀಡುತ್ತಾ ಬರುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ನರಬಲಿಯನ್ನು ನಾಡು ಒಕ್ಕೊರಲಲ್ಲಿ ಖಂಡಿಸಬೇಕಾಗಿದೆ. ನಿಧಿಗಾಗಿ ವಾಮಾಚಾರ ನಡೆಸುವುದು ಈ ಜಿಲ್ಲೆಯಲ್ಲಿ ಆಗಾಗ ಬೆಳಕಿಗೆ ಬರುತ್ತಿರುತ್ತದೆ. ಇದೀಗ ಈ ನರಬಲಿ ಬೆಳಕಿಗೆ ಬಂದಿದೆ. ಇದರ ಕುರಿತಂತೆ ಗಂಭೀರ ತನಿಖೆಗೆ ಪೊಲೀಸರು ಮುಂದಾಗಬೇಕಾಗಿದೆ. ಈ ಜಿಲ್ಲೆಯಲ್ಲಿರುವ ಕಪಟ ಮಂತ್ರವಾದಿಗಳನ್ನು ತಕ್ಷಣ ಬಂಧಿಸಿ ಅವರಿಗೆ ಎಚ್ಚರಿಕೆಯನ್ನು ನೀಡಬೇಕಾಗಿದೆ. ಮತ್ತೊಮ್ಮೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ