ಗುರುವಾರ, ಮಾರ್ಚ್ 03, 2011

ಗೋಧ್ರಾ ದುರಂತ ಪ್ರಕರಣದ ದೋಷಮುಕ್ತ ಬೈತುಲ್ಲಾ ಖಾದರ್ ನಿಧನ

ಗೋಧ್ರಾ ರೈಲು ದುರಂತ ಪ್ರಕರಣದಲ್ಲಿ ಆರೋಪಿಯೆನಿಸಿಕೊಂಡು ಅನ್ಯಾಯ ವಾಗಿ 9 ವರ್ಷಗಳ ಜೈಲು ವಾಸ ಅನುಭವಿಸಿ, ಇತ್ತೀಚೆಗೆ ನ್ಯಾಯಾಲಯದಿಂದ ದೋಷಮುಕ್ತ ಗೊಂಡ 76 ವರ್ಷದ ಹಣ್ಣುಹಣ್ಣು ಮುದುಕ ಬೈತುಲ್ಲಾ ಖಾದರ್ ತಾಯಿಲಿ, ಉಳಿದ ಜೀವನವನ್ನು ತನ್ನ ಕುಟುಂಬ ಹಾಗೂ ಬಂಧುವರ್ಗದೊಂದಿಗೆ ಕಳೆಯುವ ಆಸೆ ಈಡೇರಲಿಲ್ಲ. ದುರದೃಷ್ಟವೋ ಎಂಬಂತೆ ಬೈತುಲ್ಲಾ ಬುಧವಾರ ರಾತ್ರಿ ಗೋಧ್ರಾದಲ್ಲಿ ಹೃದಯಾಘಾತ ಕ್ಕೊಳಗಾಗಿ ಮೃತಪಟ್ಟಿದ್ದಾರೆ. ಮೂಲತಃ ಉತ್ತರಪ್ರದೇಶದ ಇಟಾವಾ ಜಿಲ್ಲೆಯವರಾದ ಬೈತುಲ್ಲಾ ಖಾದರ್, ತಾನು ಬಿಡುಗಡೆಗೊಂಡ ಗೋಧ್ರಾದ ಸಬರ್‌ಮತಿ ಜೈಲಿನ ಸೆಶನ್ಸ್ ನ್ಯಾಯಾಲಯದಲ್ಲಿ 10 ಸಾವಿರ ರೂ.ಗಳ ಬಾಂಡ್ ಹಣವನ್ನು ಪಾವತಿಸಿದ ಬಳಿಕ ಆತ ಗುರುವಾರ ತನ್ನ ಹುಟ್ಟೂರಿಗೆ ಹೋಗುವವರಿದ್ದರು.

 ಪುಣೆಯಲ್ಲಿ ಹೊಟೇಲೊಂದನ್ನು ನಡೆಸಿಕೊಂಡು ಜೀವನ ನಿರ್ವಹಿಸುತ್ತಿದ್ದ ಬೈತುಲ್ಲಾ, 2002ರ ಫೆಬ್ರವರಿ 27ರಂದು ಸಬರ್‌ಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಗ್ನಿದುರಂತ ಸಂಭವಿಸು ವುದಕ್ಕೆ ಕೇವಲ ಒಂದು ವರ್ಷ ಮೊದಲು ಗೋಧ್ರಾ ಸೆಶನ್ಸ್ ನ್ಯಾಯಾಲಯದ ಪಕ್ಕದಲ್ಲೇ ರೆಸ್ಟಾರೆಂಟ್ ಒಂದನ್ನು ಆರಂಭಿಸಿದ್ದರು. ಸಬರ್‌ಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಬೋಗಿ ಅಗ್ನಿಗಾಹುತಿಯಾದ ಘಟನೆಗೆ ಸಂಬಂಧಿಸಿ ಪೊಲೀಸರು ಬಂಧಿಸಿದ ಆರೋಪಿಗಳಲ್ಲಿ ಬೈತುಲ್ಲಾ ಕೂಡಾ ಒಬ್ಬನಾಗಿದ್ದ. ಆದರೆ ಕಳೆದ ತಿಂಗಳ 22ರಂದು ಗೋಧ್ರಾ ದುರಂತ ಪ್ರಕರಣದ ಬಗ್ಗೆ ತೀರ್ಪು ನೀಡಿದ ವಿಶೇಷ ನ್ಯಾಯಾಲಯವು ಬೈತುಲ್ಲಾ ಸೇರಿದಂತೆ ಒಟ್ಟು 63 ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು. ಗೋಧ್ರಾ ರೈಲು ದುರಂತ ಘಟನೆ ನಡೆದ ದಿನದಂದು ಪೊಲೀಸರು ಬೈತುಲ್ಲಾ ಹಾಗೂ ಆತನ ಹೊಟೇಲ್‌ನಲ್ಲಿದ್ದ ಇತರ ನಾಲ್ವರು ಸಿಬ್ಬಂದಿಗಳನ್ನು ಬಂಧಿಸಿದ್ದರು. ಬೈತುಲ್ಲಾ ಜೊತೆ ಬಂಧಿತನಾದ ಗುಲ್ಝಾರ್ ಅಖ್ನೂ ಅನ್ಸಾರಿ ಟಿಬಿ ಕಾಯಿಲೆಗೆ ತುತ್ತಾದ ಬಳಿಕ ಆತ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ. ಆದರೆ ವಿಚಾರಣೆಯ ವೇಳೆ ಉತ್ತರಪ್ರದೇಶದಲ್ಲಿರುವ ತನ್ನ ಸ್ವಗೃಹದಲ್ಲಿ ಮೃತಪಟ್ಟಿದ್ದ.

ಬೈತುಲ್ಲಾಗೆ ಬುಧವಾರ ರಾತ್ರಿ ಹೃದಯನೋವು ಕಾಣಿಸಿಕೊಂಡಿತು ಹಾಗೂ ಆತನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಆತ ಮಾರ್ಗಮಧ್ಯೆ ಕೊನೆಯುಸಿರೆಳೆದನು ಎಂದು ಆತನ ಕುಟುಂಬ ಮೂಲಗಳು ತಿಳಿಸಿವೆ. ಪೊಲೀಸರು ಇದೊಂದು ಆಕಸ್ಮಿಕ ಸಾವೆಂದು ಪರಿಗಣಿಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮೃತದೇಹ ವನ್ನು ಬಂಧುಗಳಿಗೆ ಹಸ್ತಾಂತರಿಸುವ ಮುನ್ನ ಮರಣೋತ್ತರ ಪರೀಕ್ಷೆಯನ್ನು ಕೂಡಾ ಅವರು ಮಾಡಿದ್ದಾರೆ. ಫೆಬ್ರವರಿ 22ರಂದು ವಿಶೇಷ ಸೆಶನ್ಸ್ ನ್ಯಾಯಾಲಯವು ಗೋಧ್ರಾ ರೈಲು ದಹನ ಪ್ರಕರಣದ 94 ಆರೋಪಿಗಳ ಪೈಕಿ 31 ಮಂದಿಯನ್ನು ದೋಷಿಗಳೆಂದು ಘೋಷಿಸಿ, ಇತರ 63 ಮಂದಿಯನ್ನು ದೋಷಮುಕ್ತಗೊಳಿಸಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ