ಶನಿವಾರ, ಮಾರ್ಚ್ 12, 2011

ಇಶ್ರತ್ ಜಹಾನ್ ‘ನಕಲಿ’ ಎನ್‌ಕೌಂಟರ್ ಪ್ರಕರಣ:ಹೊಸ ಸಾಕ್ಷಗಳು ಲಭ್ಯ

ಇಶ್ರತ್ ಜಹಾನ್ ಎನ್‌ಕೌಂಟರ್ ನಕಲಿ ಎಂಬುದನ್ನು ಸಾಬೀತು ಪಡಿಸಲು ಸಾಧ್ಯವಾಗುವಂತಹ ಹೊಸ ಸಾಕ್ಷಿಗಳನ್ನು ತಾನು ಪತ್ತೆ ಹಚ್ಚಿರುವುದಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಸಿಟ್) ಮೂಲಗಳು ತಿಳಿಸಿವೆ. ಅಹ್ಮದಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್)ದ ಮೇಲೆ ದಾಳಿ ನಡೆಸಲಾಗಿದ್ದು, ಈ ಸಂದರ್ಭ ದೊರಕಿರುವ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಮತ್ತು ಇತರ ದಾಖಲೆಗಳಲ್ಲಿ ಇಶ್ರತ್ ಮತ್ತು ಇತರರಿಗೆ ಹಿಂದಿನಿಂದ ಗುಂಡೇಟುಗಳು ತಗುಲಿರುವ ಕುರಿತ ದಾಖಲೆಗಳು ಲಭ್ಯವಾಗಿವೆ ಎಂದು ಸಿಟ್ ಸದಸ್ಯ ಸತೀಶ್ ವರ್ಮಾ ತಿಳಿಸಿದ್ದಾರೆ. 2004ರ ಜೂನ್ 15ರಂದು ನಡೆದ ಎನ್‌ಕೌಂಟರ್‌ಗೆ ಸಂಬಂಧಿಸಿದ ಬಹುಮುಖ್ಯ ಫೋಟೊಗ್ರಾಫ್‌ಗಳನ್ನು ‘ಅಡಗಿಸಿಡಲು’ ಪ್ರಯೋಗಾಲಯದ ಸಿಬ್ಬಂದಿಗೆ ಸೂಚನೆಗಳಿದ್ದವೇ ಎಂಬ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಆದರೆ ಸಿಟ್ ದಾಳಿಯಿಂದ ಕುಪಿತರಾಗಿರುವ ಪ್ರಯೋಗಾಲಯದ ಸಿಬ್ಬಂದಿ, ಸಿಟ್ ಸದಸ್ಯ ವರ್ಮಾ ಮತ್ತು ಸಹಾಯಕ, ಪೊಲೀಸ್ ಉಪ ಆಯುಕ್ತ ವಿಆರ್ ತೊಲಿಯ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಪ್ರಯೋಗಾಲಯದ ಆವರಣಕ್ಕೆ ತಂಡವು ‘ಅಕ್ರಮ’ ಪ್ರವೇಶಗೈದಿದೆ ಎಂದು ಪ್ರಯೋಗಾಲಯದ ಸಿಬ್ಬಂದಿ ಆಪಾದಿಸಿದ್ದಾರೆ. ಆದಾಗ್ಯೂ ವರ್ಮಾ ಸಹಿತ ಪೊಲೀಸ್ ಅಧಿಕಾರಿಗಳ ತಂಡವು ತನಿಖೆಗೆ ಅನುಕೂಲವಾದ ದಾಖಲೆಗಳನ್ನು ಕೊಂಡೊಯ್ದಿರುವುದಕ್ಕಾಗಿ, ತನ್ನ ದೂರಿನಲ್ಲಿ ‘ಲೂಟಿ’ಗೆ ಯತ್ನದ ಆಪಾದನೆಗೈದಿರುವ ಪ್ರಯೋಗಾಲಯದ ಸಿಬ್ಬಂದಿ ತಮ್ಮ ದೂರಿನ ಬಗ್ಗೆ ಸಮರ್ಥಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಹಾರ್ಡ್ ಡಿಸ್ಕ್‌ಗಳನ್ನು ಸ್ಕಾನಿಂಗ್ ಮಾಡುವ ವೇಳೆ ತನಿಖಾಧಿಕಾರಿಗಳು ಕೆಲವು ಫೋಟೊಗ್ರಾಫ್‌ಗಳು ಮತ್ತಿತರ ದಾಖಲೆಗಳನ್ನು ಕಂಡರು. ಈ ದಾಖಲೆಗಳನ್ನು ತನಿಖಾ ತಂಡಗಳಿಗೆ ಸಲ್ಲಿಸಲಾಗಿರಲಿಲ್ಲ. ಹತ್ಯೆಗೀಡಾಗಿರುವ ಇಶ್ರತ್ ಮತ್ತು ಇತರ ಮೂವರಿಗೆ ಹಿಂದಿನಿಂದ ಗುಂಡೇಟುಗಳು ತಗುಲಿರುವ ಕೆಲವು ಫೋಟೊಗ್ರಾಫ್‌ಗಳು ತನಿಖೆಯ ವೇಳೆ ತನಿಖಾ ತಂಡಕ್ಕೆ ಲಭ್ಯವಾಗಿವೆ. ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಹತ್ಯೆ ಮಾಡಲು ಬಂದಿದ್ದ ‘ಭಯೋತ್ಪಾದಕರ’ನ್ನು ಪರಸ್ಪರ ಗುಂಡಿನ ಚಕಮಕಿಯಲ್ಲಿ ಹತ್ಯೆ ನಡೆಸಲಾಗಿದೆ ಎಂಬ ಎಟಿಎಸ್ ಮುಖ್ಯಸ್ಥನಾಗಿದ್ದ ಡಿಐಜಿ ಡಿಜಿ ವಂಝಾರ, ಇಶ್ರತ್ ಜಹಾನ್ ಮತ್ತಿತರರ ಎನ್‌ಕೌಂಟರ್‌ಗಳಿಗೆ ಸಂಬಂಧಿಸಿ ಕಟ್ಟಿರುವ ಕತೆಗಳನ್ನು ಈ ಫೋಟೊಗ್ರಾಫ್‌ಗಳು ಹಾಗೂ ಪ್ರಯೋಗಾಲಯದಲ್ಲಿ ದೊರಕಿರುವ ಇತರ ದಾಖಲೆಗಳು ಬಯಲಿಗೆಳೆಯಲಿವೆ ಎಂದು ವರ್ಮಾರ ಆಪ್ತ ಮೂಲಗಳು ತಿಳಿಸಿವೆ.
ಎಫ್‌ಎಸ್‌ಎಲ್ ದಾಳಿಯು ಮೂವರು ಸದಸ್ಯರ ಸಿಟ್ ತಂಡದಲ್ಲಿ ಭಿನ್ನಾಭಿಪ್ರಾಯವನ್ನು ಸೃಷ್ಟಿಸಿದೆ ಎನ್ನಲಾಗಿದೆ. ಅಹ್ಮದಾಬಾದ್‌ನ ಜಂಟಿ ಪೊಲೀಸ್ ಆಯುಕ್ತ, ಸಿಟ್‌ನ ಎರಡನೆ ಸದಸ್ಯ ಮೋಹನ್ ಝಾ ಎಫ್‌ಎಸ್‌ಎಲ್ ಅಧಿಕಾರಿಗಳು ವರ್ಮಾ ವಿರುದ್ಧ ನೀಡಿರುವ ದೂರಿನ ತನಿಖೆ ನಡೆಸಲು ಹಿಂದೇಟು ಹಾಕಿದ್ದಾರೆ. ಎಫ್‌ಎಸ್‌ಎಲ್ ಪ್ರಯೋಗಾಲಯದ ಮೇಲೆ ವರ್ಮಾರ ತಂಡ ದಾಳಿ ನಡೆಸಿದ್ದ ರಾತ್ರಿ ಪೊಲೀಸ್ ಆಯುಕ್ತ ಅಮಿತಾಭ್ ಪಾಠಕ್ ರಜೆಯಲ್ಲಿದ್ದ ಕಾರಣ ಅಹ್ಮದಾಬಾದ್ ಪೊಲೀಸ್ ಕಮೀಶನರೇಟ್‌ನ ಉಸ್ತುವಾರಿಯನ್ನು ಝಾ ವಹಿಸಿದ್ದರು. ಎಫ್‌ಎಸ್‌ಎಲ್ ದೂರನ್ನು ತನಿಖೆಗಾಗಿ ಝಾ ಉಪ ಪೊಲೀಸ್ ಆಯುಕ್ತ ಅಮಿತ್ ವಿಶ್ವಕರ್ಮರಿಗೆ ಹಸ್ತಾಂತರಿಸಿದ್ದಾರೆ. ಆದರೆ ದಾಳಿಯ ಕುರಿತ ಎಲ್ಲ ವಿಷಯಗಳೂ ದಾಖಲಾಗಿರುವುದರಿಂದ ವರ್ಮಾ ವಿರುದ್ಧ ಡಿಸಿಪಿ ಅಪರಾಧ ಸಂಚು ಮತ್ತು ಲೂಟಿ ಪ್ರಕರಣ ದಾಖಲಿಸಲು ಸಾಧ್ಯವಾಗಿಲ್ಲ. ಆದಾಗ್ಯೂ, ‘ದಾಳಿ’ಯ ವಿರುದ್ಧ ಪ್ರಕರಣ ದಾಖಲಿಸಲು ಇರುವ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸಲು ಝಾ ಇನ್ನೊಂದು ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಂ.ವಿ. ಮೆಹ್ತಾಗೆ ಸೂಚಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ