ಬೆಂಗಳೂರು, ಫೆ. 10: ಕಳೆದ 2008ರಲ್ಲಿ ನಡೆದ ಬೆಂಗಳೂರು ಸರಣಿ ಬಾಂಬ್ ಸ್ಫೋಟದಲ್ಲಿ ಪಿಡಿಪಿ ನಾಯಕ ಅಬ್ದುನ್ನಾಸರ್ ಮಅದನಿ ಕೈವಾಡವಿರುವ ಬಗ್ಗೆ ಸಿಸಿಬಿ ಬಳಿ ಯಾವುದೇ ಸಾಕ್ಷಗಳಿಲ್ಲ ಎಂದು ಹಿರಿಯ ವಕೀಲ ಬಿ.ವಿ.ಆಚಾರ್ಯ ವಾದಿಸಿದ್ದಾರೆ.
ಬಂಧಿತ ಮಅದನಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ.ವಿ.ಜಗನ್ನಾಥನ್ ಅವರ ಮುಂದೆ ಈ ವಾದ ಮಂಡಿಸಿದ ಬಿ.ವಿ. ಆಚಾರ್ಯ, ತಮ್ಮ ಕಕ್ಷಿದಾರರಿಗೆ ವಿನಾ ಕಾರಣ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ.
ಪ್ರಕರಣದ ಪ್ರತ್ಯಕ್ಷ ಮತ್ತು ಪ್ರಮುಖ ಸಾಕ್ಷಿಗಳ ಹೇಳಿಕೆಗಳಲ್ಲಿ ಯಾವುದೇ ಹುರುಳಿಲ್ಲ. ಸ್ಫೋಟದ ಸಂಚು ರೂಪಿಸಿದೆ ಎನ್ನಲಾದ ಮಡಿಕೇರಿಯ ತೋಟದ ಮನೆಯ ಮಾಲಿಕ ಕೇವಲ ‘ಬಾಂಬ್’ ಎಂಬ ಶಬ್ದವನ್ನು ಮಾತ್ರ ಕೇಳಿದ್ದಾನೆ. ಅದರ ಹೊರತು ಆತನ ಬಳಿ ಮತ್ಯಾವ ಸಾಕ್ಷಿಗಳಿಲ್ಲ. ಇನ್ನೊಬ್ಬ ಸಾಕ್ಷಿದಾರ ಕೇರಳದಲ್ಲಿ ಸಾವನ್ನಪ್ಪಿದ್ದಾನೆ ಎಂದಿದ್ದಾರೆ.
ಸ್ಫೋಟ ಪ್ರಕರಣದಲ್ಲಿ ಮಅದನಿ ಭಾಗಿಯಾಗಿರುವ ಬಗ್ಗೆ ಸಿಸಿಬಿ ಪೊಲೀಸರ ಬಳಿ ಯಾವುದೇ ಸಾಂದರ್ಭಿಕ ಸಾಕ್ಷಗಳಿಲ್ಲ. ಆದ್ದರಿಂದ ತಮ್ಮ ಕಕ್ಷಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಬಿ.ವಿ. ಆಚಾರ್ಯ ಮನವಿ ಮಾಡಿದರು.
ಪ್ರಬಲ ಸಾಕ್ಷಗಳಿವೆ: ಸಿಸಿಬಿ ಪರ ವಾದ ಮಂಡಿ ಸಿದ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ, ಸ್ಫೋಟ ಪ್ರಕರಣದಲ್ಲಿ ಮಅದನಿ ಭಾಗಿಯಾಗಿರುವ ಬಗ್ಗೆ ಮಅದನಿ ವಿರುದ್ಧ ಸಿಸಿಬಿ ಬಳಿ ಪ್ರಬಲ ಸಾಕ್ಷ ಗಳಿವೆ. ಪ್ರಕರಣದ ಆರೋಪಿಗಳೊಂದಿಗೆ ಮಅದನಿ ಸಂಪರ್ಕದಲ್ಲಿದ್ದ ಮತ್ತು ಅವರಿಗೆ ಆಶ್ರಯ ನೀಡಿದ ಆರೋಪ ಇದೆ.
ಈ ಬಗ್ಗೆ ಆರೋಪಿಗಳಿಗೆ ಮಾರ್ಗ ದರ್ಶನ ನೀಡಿದ ಮತ್ತು ಅವರೊಂದಿಗೆ ಸಂಭಾಷಣೆ ನಡೆಸಿದ ದೂರವಾಣಿ ಕರೆ ಪಟ್ಟಿ ಇದೆ. ಆದ್ದರಿಂದ ಜಾಮೀನು ನೀಡಬಾರದು ಎಂದು ಅಶೋಕ್ ಹಾರನಹಳ್ಳಿ ನ್ಯಾಯಲಯಕ್ಕೆ ಮನವಿ ಮಾಡಿದ್ದಾರೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ದೂರವಾಣಿ ಕರೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಶುಕ್ರವಾರ (ಫೆ.11)ಕ್ಕೆ ಮುಂದೂಡಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ