ಮಂಗಳೂರು: ಹೋದಲ್ಲೆಲ್ಲಾ ಮಠ-ಮಂದಿರಗಳಿಗೆ ಕೋಟ್ಯಂತರ ಹಣ ಬಿಡುಗಡೆ ಮಾಡುವ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ದಲಿತ ಕಾಲನಿಗಳಿಗೆ ಭೇಟಿ ನೀಡಿ ಮಧ್ವ ಮತವನ್ನು ಸ್ವೀಕರಿಸಿ ಎಂದು ಹೇಳುತ್ತಿರುವ ಪೇಜಾವರ ಸ್ವಾಮಿ. ಇವರಿಬ್ಬರೂ ತಮ್ಮ ಧರ್ಮವನ್ನು ಪರೋಕ್ಷವಾಗಿ ಪ್ರಚಾರ ಮಾಡುತ್ತಿದ್ದಾರೆ. ಕ್ರೈಸ್ತ ಮತಾಂತರದ ವಿರುದ್ಧ ಮಾತನಾಡು ವವರು ಯಡ್ಡಿ ಹಾಗೂ ಪೇಜಾವರ ಅವರನ್ನು ಬಂಧಿಸಲು ಒತ್ತಾಯಿಸಲಿ ಹೀಗೆಂದು ಬಹಿರಂಗವಾಗಿ ಸವಾಲು ಹಾಕಿ ದ್ದಾರೆ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್.
ಮಂಗಳೂರು ಸೆಂಟ್ರಲ್ ಕಮಿಟಿ ಇದರ ವತಿಯಿಂದ ನಿನ್ನೆ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಅಶೋಕ್ ಮಾತನಾಡಿದರು. ರಾಜ್ಯಾದ್ಯಂತ ನಡೆದ ಚರ್ಚ್‌ಗಳ ಮೇಲಿನ ದಾಳಿಯನ್ನು ಸಂಘ ಪರಿವಾರದ ಸಂಘಟನೆಗಳು ಒಪ್ಪಿಕೊಂಡರೂ ಸೋಮಶೇಖರ್ ಎಂಬ ಸಂಘಪರಿವಾರದ ಸದಸ್ಯ ದಾಳಿಯನ್ನು ಹಿಂದೂ ಸಂಘಟನೆಗಳು ಮಾಡಿಲ್ಲ ಎಂದು ಕಸದ ಬುಟ್ಟಿಗೆ ಎಸೆಯಬಹುದಾದಂತಹ ವರದಿಯನ್ನು ನೀಡಿದ್ದಾರೆ. ಇದನ್ನು ಗಮನಿಸಿದಾಗ ನಾವು ಪ್ರಜಾಪ್ರಭುತ್ವ ದೇಶದಲ್ಲಿದ್ದೇವೆಯೇ ಅಥವಾ ಸಂಘಪರಿವಾರದ ದಬ್ಬಾಳಿಕೆಯಲ್ಲಿದ್ದೇವೆಯೇ ಎಂಬ ಸಂಶಯ ಮೂಡುತ್ತಿದೆ ಎಂದರು. ಮಹಾತ್ಮ ಗಾಂಧಿಯನ್ನು ಕೊಲ್ಲುವ ಮೂಲಕ ಮೊದಲ ಭಯೋತ್ಪಾದನೆ ನಡೆಸಿದ ಸಂಘಪರಿವಾರ ನಂತರ ದೇಶಪ್ರೇಮದ ಹೆಸರಲ್ಲಿ ತ್ರಿಶೂಲ ಮತ್ತು ಲಾಠಿ ಭಯೋತ್ಪಾದನೆಯನ್ನು ಆರಂಭಿಸಿತ್ತು. ಈಗ ಬಾಂಬ್‌ಗಳ ಮೂಲಕ ಭಯೋತ್ಪಾದನೆ ನಡೆಸುತ್ತಿದೆ ಎಂದು ಆರೋಪಿಸಿದರು. ಮುಂದುವರಿದ ಅವರು ಹಿಂದೂಗಳು ತಮ್ಮ ಪಾಡಿಗೆ ತಾವಿದ್ದು ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಆದರೆ ಸಂಘಪರಿವಾರ ಹಿಂದುತ್ವದ ಹೆಸರಲ್ಲಿ ಭಯೋತ್ಪಾದನೆ ನಡೆಸುತ್ತಿದೆ. ಅದೇ ರೀತಿ ಕೆಲವು ಮಂದಿ ಇಸ್ಲಾಮಿನ ಹೆಸರಲ್ಲಿ ಭಯೋತ್ಪಾದನೆ ನಡೆಸುತ್ತಿದ್ದು ಇದು ಖಂಡನೀಯ ಎಂದರು.
ಹಿಂದೆ ಬಾಂಬ್ ಸ್ಪೋಟ ಆದ ಕೂಡಲೇ ಅದನ್ನು ಮುಸ್ಲಿಮರ ತಲೆಗೆ ಕಟ್ಟಿ ಅದಕ್ಕೆ ಮದ್ರಸಾದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಆರೋಪಿಸಲಾಗುತ್ತಿತ್ತು. ಆದರೆ ಮೆಕ್ಕಾ ಮಸೀದಿ ಹಾಗೂ ಇತರ ಕಡೆಗಳಲ್ಲಿ ಬಾಂಬ್ ಸ್ಪೋಟಿಸಿದ ಅಸೀಮಾನಂದ ಮತ್ತಿತರರು ಯಾವ ಮದ್ರಸಾದಲ್ಲಿ ಕಲಿತಿದ್ದಾರೆ ಎಂದು ಪ್ರಶ್ನಸಿದ ಕಮಿಟಿಯ ಸಂಚಾಲಕ ಅಲಿ ಹಸನ್ ಭಾರತೀಯ ಕಾನೂನಿನಿಂದ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ. ಇದಕ್ಕೆ ಪೊಲೀಸ್ ಅಧಿಕಾರಿಗಳೇ ಕಾರಣರಾಗಿದ್ದು ಕಾನೂನಿನ ಮೇಲೆ ಗೌರವ ಮತ್ತು ದೇಶ ಪ್ರೇಮದಿಂದಾಗಿ ನಾವು ತಾಳ್ಮೆ ವಹಿಸಿದ್ದು ಇನ್ಯಾರ ಭಯವೂ ನಮಗಿಲ್ಲ ಎಂದು ಗುಡುಗಿದರು.
ಮುಸಲ್ಮಾನರೆಲ್ಲರೂ ಭಯೋತ್ಪಾಕರಲ್ಲ, ಆದರೆ ಭಯೋತ್ಪಾದರೆಲ್ಲರೂ ಮುಸಲ್ಮಾನರು ಎಂದು ಹೇಳುತ್ತಾ ಬಂದಿದ್ದವರಿಗೆ ಹೇಮಂತ್ ಕರ್ಕರೆ ಎಂಬ ಪೊಲೀಸ್ ಅಧಿಕಾರಿ ಆಸೀಮಾನಂದ, ಮತ್ತಿತರರನ್ನು ಬಂಧಿಸಿ ಸತ್ಯಾಸತ್ಯತೆಯನ್ನು ಬಯಲುಗೊಳಿಸುವ ಮೂಲಕ ಭಯೋತ್ಪಾದನೆ ಎಂದರೆ ಕೇವಲ ಗಡ್ಡ ಮಾತ್ರವಲ್ಲ, ಅದಕ್ಕೆ ಸ್ವಾಮಿ, ಕರ್ನಲ್ ಮತ್ತು ಪುರೋಹಿತಶಾಹಿಗಳ ಮುಖವಾಡವೂ ಇದೆ ಎಂಬುವುದನ್ನು ತೋರಿಸಿದ್ದಾರೆ ಎಂದು ಜಮಾತೆ ಇಸ್ಲಾಂ ಯೂತ್‌ವಿಂಗ್‌ನ ಅಧ್ಯಕ್ಷ ಮಹಮ್ಮದ್ ಕುಂಞಿ ವ್ಯಂಗ್ಯವಾಡಿದರು.
ಭಾರತದಲ್ಲಿ ಹಿಂದೂ-ಮುಸ್ಲಿಮರು ಎಂದಿಗೂ ವೈರತ್ವ ಹೊಂದಿರಲಿಲ್ಲ. ಆದರೆ ರಾಜಕಾರಣಿಗಳು ಅಧಿಕಾರ, ಮತ ಮತ್ತು ಸ್ವಾರ್ಥ ಹಿತಾಸಕ್ತಿಗಾಗಿ ಬಾಂಬ್ ಸ್ಪೋಟಿಸುವ ಇಲ್ಲವೇ ಕೋಮು ಗಲಭೆ ಸೃಷ್ಟಿಸುವ ಮೂಲಕ ಹಿಂದೂ-ಮುಸ್ಲಿಮರಲ್ಲಿ ದ್ವೇಶ ಸೃಷ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಎಲ್ಲರೂ ಒಂದಾಗಿ ಹೋರಾಡಬೇಕು ಎಂದು ಕುಂಞಿ ಕರೆ ನೀಡಿದರು. ವೇದಿಕೆಯಲ್ಲಿ ಸುರೇಶ್ ಭಟ್ ಬಾಕ್ರಬೈಲ್, ಅಜೀಜ್ ಕುದ್ರೋಳಿ, ಫಾ. ವಿಲಿಯಂ ಮಾರ್ಟಿಸ್ ಮತ್ತಿತರರು ಉಪಸ್ಥಿತರಿದ್ದರು. ಪ್ರತಿಭಟನೆಯ ಬಳಿಕ ವಿವಿಧ ಸ್ಪೋಟಗಳ ನೆಪದಲ್ಲಿ ಜೈಲುಪಾಲಾಗಿರುವ ಅಮಾಯಕ ಮುಸ್ಲಿಮರನ್ನು ಬಿಡುಗಡೆಗೊಳಿಸಿ ಮರು ತನಿಖೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ