ಶಾಸಕಾಂಗ-ಕಾರ್ಯಾಂಗ-ನ್ಯಾಯಾಂಗ ವ್ಯವಸ್ಥೆಯಲ್ಲಿ ಕ್ಯಾನ್ಸರ್ ರೀತಿಯ ಪರಿಸ್ಥಿತಿಯು ಉದ್ಭವಿಸಿದ್ದು, ಇದು ಪ್ರಗತಿಗೆ ಮಾರಕವಾಗಿದೆ. ಇಂತಹ ಗಂಭೀರ ಸ್ಥಿತಿಯಲ್ಲಿ ಕಿಮೋಥೆರಪಿಯ ಅಗತ್ಯ ದೇಶಕ್ಕಿದೆ ಎಂದು ದುಬೈಯಲ್ಲಿ ಮಾತನಾಡುತ್ತಿದ್ದ ಕಲಾಂ ತಿಳಿಸಿದರು.
ಭ್ರಷ್ಟಾಚಾರ ಮುಕ್ತ ಭಾರತವನ್ನು ಸ್ಥಾಪಿಸುವುದು ಪ್ರಮುಖ ಸವಾಲು. ನನ್ನ ಪ್ರಕಾರ ಇದಕ್ಕಿರುವ ಪರಿಹಾರ ಯುವಕರ ಪಡೆ. ‘ನಾನು ಅದನ್ನು ಸಾಧಿಸಬಲ್ಲೆ. ನಾವು ಅದನ್ನು ಸಾಧಿಸಬಲ್ಲೆವು. ಭಾರತವು ಅದನ್ನು ಸಾಧಿಸಬಹುದು’ ಎಂಬ ಸ್ಫೂರ್ತಿ ನಮ್ಮದಾಗಬೇಕು ಎಂದು ಪತ್ರಿಕೆಯೊಂದರ ಜತೆ ಹಂಚಿಕೊಂಡರು.
ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಮೌಲ್ಯಯುತ ವ್ಯವಸ್ಥೆಯು ಕುಸಿತಕ್ಕೊಳಗಾಗುತ್ತಿರುವುದು ಮತ್ತು ದಿನದಿಂದ ದಿನಕ್ಕೆ ಅದು ಏರುಗತಿಯಲ್ಲಿ ಸಾಗುತ್ತಿರುವುದು ಜನತೆಯ ಕಳವಳ, ಹತಾಶೆ ಮತ್ತು ಬೇಗುದಿಗೆ ಕಾರಣವಾಗಿದೆ. ಇದನ್ನು ದುರಸ್ತಿಗೊಳಿಸಲು ವಿಶೇಷ ತುರ್ತು ಕ್ರಮದ ಅಗತ್ಯವಿದೆ ಎಂದು ವಾಕ್ಝರಿಗೆ ಹೆಸರಾಗಿರುವ ಮಾಜಿ ರಾಷ್ಟ್ರಪತಿ ಕರೆ ನೀಡಿದರು.
ಇದೇ ಪರಿಸ್ಥಿತಿ ಮುಂದುವರಿಯಲು ಅವಕಾಶ ನೀಡಿದಲ್ಲಿ, ನಾವು ಜನತೆ ಬೀದಿಗಿಳಿಯುವುದನ್ನು ತಡೆಯಲು ಸಾಧ್ಯವಾಗದು. ಅಭಿವೃದ್ಧಿ ಹೊಂದಿದ ದೇಶವಾಗಲು ಭಾರತ ಹೊರಟಿರುವ ಸಂದರ್ಭದಲ್ಲಿ ಇಂತಹ ಪರಿಸ್ಥಿತಿ ಎದುರಾದರೆ ಅದನ್ನು ಭರಿಸುವುದು ಕಷ್ಟ ಎಂದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ