ಶುಕ್ರವಾರ, ಫೆಬ್ರವರಿ 11, 2011

ಬಾಬ್ರಿ ಮಸ್ಜಿದ್ ಮರೆಯಲು ಬಿಡೆವು: ಕೆ.ಎಂ.ಶರೀಫ್

ಬಂಟ್ವಾಳ: ‘ನ್ಯಾಯದ ಬೇಡಿಕೆಯಲ್ಲಿ ಬಾಬ್ರಿ ಮಸ್ಜಿದ್’ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಇತ್ತೀಚೆಗೆ ಬಿ.ಸಿ.ರೋಡ್‌ನ ಲಯನ್ಸ್ ಕ್ಲಬ್‌ನಲ್ಲಿ ಜನ ಜಾಗೃತಿ ಕಾರ್ಯಕ್ರಮವೊಂದನ್ನು ಆಯೋಜಿಸಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶರೀಫ್, ಸಂಘಟನೆಯು ದೇಶದ ಹಲವು ರಾಜ್ಯಗಳಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
ದೇಶದ ಇತಿಹಾಸದಲ್ಲಿ ಜನವರಿ 30 ಮತ್ತು ಡಿಸೆಂಬರ್ 6 ಅತ್ಯಂತ ಭಯಾನಕ ದಿನವಾಗಿದೆ. ಭಿತ್ತಿ ಪತ್ರಗಳು, ಪೋಸ್ಟರ್‌ಗಳು, ಬರಹಗಳು ಹಾಗೂ ಇತರ ವಿಧಾನಗಳ ಮೂಲಕ ಪಾಪ್ಯುಲರ್ ಫ್ರಂಟ್ ಬಾಬ್ರಿ ಮಸ್ಜಿದ್‌ನ ಬಗ್ಗೆ ಮುಂದಿನ ಪೀಳಿಗೆಯು ಮರೆಯದಂತೆ ನೋಡಿಕೊಳ್ಳಲಿದೆ ಎಂದು ಅವರು ನುಡಿದರು.
ಭಾರತದಲ್ಲಿ ಮುಸ್ಲಿಮರು ಹಲವು ಮಸೀದಿಗಳನ್ನು ಹೊಂದಿದ್ದಾರೆ. ಆದರೆ ಫ್ಯಾಶಿಷ್ಟ್ ಶಕ್ತಿಗಳು ತಮ್ಮ ರಾಜಕೀಯ ಕುತಂತ್ರಕ್ಕಾಗಿ ಬಾಬ್ರಿ ಮಸ್ಜಿದ್‌ವೊಂದನ್ನೇ ಆಯ್ಕೆ ಮಾಡಿಕೊಂಡರು ಎಂದು ಅವರು ಹೇಳಿದರು.
1992 ಡಿಸೆಂಬರ್ 6 ಕೇವಲ ಮಸ್ಜಿದ್ ಧ್ವಂಸಗೈಯ್ಯಲ್ಪಟ್ಟ ದಿನವಲ್ಲ. ಅಂದು ನಮ್ಮ ದೇಶದ ಪ್ರಜಾಪ್ರಭುತ್ವದ ಪ್ರಾಥಮಿಕ ತತ್ವಗಳಲ್ಲೊಂದಾಗಿರುವ ಜಾತ್ಯತೀತತೆಯು ಕುಸಿದು ಬಿದ್ದಿತ್ತು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಇದೇ ಮನುವಾದಿಗಳ ಗುಂಡಿಗೆ ಬಲಿಯಾದಾಗ ಅಹಿಂಸಾ ತತ್ವಗಳು ಧ್ವಂಸಗೊಂಡಿದ್ದವು.
ವಿದ್ಯಾರ್ಥಿಗಳಿಗೆ ಇತಿಹಾಸವನ್ನು ತಿರುಚಿ ಬೋಧಿಸಲಾಗುತ್ತಿದೆ. ಆರೆಸ್ಸೆಸ್ ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ಅವರು ಆರೋಪಿಸಿದರು.
ಬಾಬ್ರಿ ಮಸ್ಜಿದ್ ವಿಷಯವು ಕೋಮುವಾದದ ವಿಷಯವಲ್ಲ. ಅದು ಮುಸ್ಲಿಮರ ಆರಾಧನಾ ಸ್ಥಳವಾಗಿದ್ದು, ನ್ಯಾಯವನ್ನು ಬೇಡುವುದು ಅವರ ಹಕ್ಕಾಗಿದೆ ಎಂದು ಶರೀಫ್ ನುಡಿದರು.
ಬಾಬ್ರಿ ಮಸ್ಜಿದ್ ಧ್ವಂಸ ಪ್ರಕರಣದ 68 ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಗ್ರಹಿಸುತ್ತದೆ ಎಂದು ಅವರು ನುಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ